ಪರಂದೂರು ವಿಮಾನ ನಿಲ್ದಾಣ ಯೋಜನೆ...ಚೆನ್ನೈಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆ ಒದಗಿಸುವ, ಒದಗಿಸುವ ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದು ಚೆನ್ನೈನಲ್ಲಿ ಏರಿಕೆಯಾಗುತ್ತಿರುವ ವಿಮಾನ ಸಂಚಾರ ಒತ್ತಡವನ್ನು ಸಮತೋಲನಗೊಳಿಸಲು ಸಹಾಯಕವಾದ ಒಂದು ಯೋಜನೆಯಾಗಿದೆ. ಈ ಹೊಸ ವಿಮಾನ ನಿಲ್ದಾಣವನ್ನು ಪರಂದೂರು, ಕಂಚೀಪುರಂ ಬಳಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಂದಹಾಗೆ ಈ ವಿಮಾನ ನಿಲ್ದಾಣದ ಯೋಜನೆಗೆ ತಾತ್ವಿಕ ಅನುಮೋದನೆ ಸಿಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಹೌದು, ತಮಿಳುನಾಡು ಸರ್ಕಾರದ ಮಹತ್ವದ ಯೋಜನೆಯಾದ ಪರಂದೂರು ವಿಮಾನ ನಿಲ್ದಾಣಕ್ಕೆ, ನಾಗರಿಕ ವಿಮಾನಯಾನ ಸಚಿವಾಲಯದಿಂದ ತಾತ್ವಿಕ ಅನುಮೋದನೆ ಪಡೆಯಲು ಕಾಯಲಾಗುತ್ತಿದೆ. ಮುಂಬರುವ ಏಪ್ರಿಲ್‌ನಲ್ಲಿ ಇದಕ್ಕೆ ಅನುಮೋದನೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ಅನುಮೋದನೆ ದೊರಕಿದ ನಂತರ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬಹುದು.
ಇನ್ನು ಈ ಯೋಜನೆಯೆ 2024ರ ಜುಲೈನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಈ ಯೋಜನೆಗೆ ಸ್ಥಳ ಅನುಮೋದನೆ ನೀಡಿತ್ತು. ಪರಂದೂರು ವಿಮಾನ ನಿಲ್ದಾಣ ಯೋಜನೆಗೆ ಏಪ್ರಿಲ್ 2025ರಲ್ಲಿ ತಾತ್ವಿಕ ಅನುಮೋದನೆ ದೊರೆಯುವ ಸಾಧ್ಯತೆ ಇದ್ದು, ಈ ನಿರ್ಧಾರವು ತಮಿಳುನಾಡು ಸರ್ಕಾರಕ್ಕೆ ಯೋಜನೆಯ ಮುಂದಿನ ಹಂತವನ್ನು ಪ್ರಾರಂಭಿಸಲು ದಾರಿ ಸುಗಮಗೊಳಿಸಲಿದೆ.
ಅಂದಹಾಗೆ ಕಳೆದ ವಾರ ನವದೆಹಲಿಯಲ್ಲಿ ತಮಿಳುನಾಡು ಸರ್ಕಾರ, ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಇತರ ಅಧಿಕಾರಿಗಳ ನಡುವೆ ಸಭೆ ನಡೆಸಿತು. ಸಭೆಯಲ್ಲಿ ಹಲವು ವಿಷಯಗಳ ಕುರಿತು ವ್ಯಾಪಕ ಚರ್ಚೆ ನಡೆಸಿತು. ಸಭೆಯ ನಂತರ ತಮಿಳುನಾಡು ಸರ್ಕಾರದ ಅಧಿಕಾರಿಗಳು ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ನಾಗರಿಕ ವಿಮಾನಯಾನ ಸಚಿವಾಲಯದಿಂದ ಈ ವಾರ ಅಥವಾ ಮುಂದಿನ ವಾರದ ಆರಂಭದಲ್ಲಿ ಅನುಮೋದನೆ ಲಭ್ಯವಾಗಬಹುದು ಎನ್ನಲಾಗುತ್ತಿದೆ.
ಪರಂದೂರು ಏರ್ ಪೋರ್ಟ್ ಯೋಜನೆಯ ಹಿನ್ನೆಲೆ:
ಕಳೆದ ಮೂರು ವರ್ಷಗಳ ಹಿಂದೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪರಂದೂರು ವಿಮಾನ ನಿಲ್ದಾಣದ ಕಾರ್ಯಸಾಧ್ಯತಾ ಅಧ್ಯಯನವನ್ನು ಪೂರ್ಣಗೊಳಿಸಿತು. ಅಧ್ಯಯನದ ವರದಿಯ ಆಧಾರದಲ್ಲಿ , ತಮಿಳುನಾಡು ಸರ್ಕಾರ ಎರಡನೇ ಏರ್‍ಪೋರ್ಟ್‌ನ ಪರಂದೂರಿನಲ್ಲೇ ನಿರ್ಮಿಸುವ ಸ್ಥಳವನ್ನಾಗಿ ಘೋಷಣೆ ಮಾಡಿತು. ಜುಲೈ 2024ರಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ಮೊದಲ ಹಂತದ ಅನುಮೋದನೆಯನ್ನು ನೀಡಿತು. ಈ ಪ್ರಾರಂಭಿಕ ಅನುಮೋದನೆಯ ನಂತರ, ತಮಿಳುನಾಡು ಸರ್ಕಾರ ತಾತ್ವಿಕ ಅನುಮೋದನೆಗಾಗಿ ದಸ್ತಾವೇಜುಗಳನ್ನು ಸಚಿವಾಲಯಕ್ಕೆ ಸಲ್ಲಿಸಿತು.
ಇನ್ನು ಈ ವಿಮಾನ ನಿಲ್ದಾಣ ಯೋಜನೆಯನ್ನು ₹29,144 ಕೋಟಿ ವೆಚ್ಚದಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. 2,172.73 ಎಕರೆ ಪ್ರದೇಶದಲ್ಲಿ ಈ ವಿಮಾನ ನಿಲ್ದಾಣ ನಿರ್ಮಿಸುವ ಗುರಿ ಹೊಂದಲಾಗಿದೆ. ಮತ್ತು ಇದು ಎರಡು ಸಮಾನಾಂತರ ರನ್‌ವೇಗಳನ್ನು ಹೊಂದಿರಲಿದೆ. ಯೋಜನೆಯ ನಾಲ್ಕು ಹಂತಗಳು ಪೂರ್ಣಗೊಂಡ ನಂತರ, ಇದು ಸುಮಾರು 100 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಬಲ್ಲ ವಿಮಾನ ನಿಲ್ದಾಣವಾಗಲಿದೆ. ತಮಿಳುನಾಡು ರಾಜ್ಯ ಸರ್ಕಾರ ವಿಮಾನ ನಿಲ್ದಾಣ ಕಾರ್ಯವನ್ನು 2026ರಲ್ಲಿ ಪ್ರಾರಂಭಿಸಿದರೆ, ಮೊದಲ ಹಂತ 2031ರೊಳಗೆ ಕಾರ್ಯನಿರ್ವಹಣೆಗೆ ಬರಬಹುದು. ಇದು ಚೆನ್ನೈನಲ್ಲಿ ಮತ್ತೊಂದು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಒದಗಿಸಲು ಸಹಾಯ ಮಾಡಲಿದೆ ಎನ್ನಲಾಗುತ್ತಿದೆ.
ಸವಾಲುಗಳೇನೇನು..?
ಇನ್ನು ಈ ವಿಮಾನ ನಿಲ್ದಾಣ ನಿರ್ಮಿಸಲು ಸವಾಲುಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅಂದರೆ ಚೆನ್ನೈಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಈಗಾಗಲೇ 1301.28 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಇದನ್ನು ಇನ್ನಷ್ಟು ವಿಸ್ತರಿಸುವಲ್ಲಿ ಕೆಲವು ಸವಾಲುಗಳಿವೆ. ಏಕೆಂದರೆ ಈ ಯೋಜನೆ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ವಿಶೇಷವಾಗಿ ಪರಿಸರ ಸಂಬಂಧಿತ ಚಿಂತನೆಗಳು ಮತ್ತು ಸ್ಥಳೀಯ ನಿವಾಸಿಗಳ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ಈ ಹೊಸ ವಿಮಾನ ನಿಲ್ದಾಣ ಹತ್ತಿರದ ಹಳ್ಳಿಗಳಿಗೆ ಹಾನಿಯನ್ನೂ ಉಂಟುಮಾಡಬಹುದು. ಮತ್ತು ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಕೂಡ ಬೀರಬಹುದಾಗಿದೆ. ಹೀಗಾಗಿ ಆಕ್ಷೇಪದ ಹೊಳೆ ಹರಿದುಬರುತ್ತಿದೆ. ಈ ಯೋಜನೆಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ವಿಮಾನ ನಿಲ್ದಾಣದ ಭವಿಷ್ಯದ ನಿರೀಕ್ಷೆಗಳೇನು..?
ಪರಂದೂರು ವಿಮಾನ ನಿಲ್ದಾಣ ಯೋಜನೆ ತ್ವರಿತವಾಗಿ ಅನುಷ್ಠಾನಗೊಂಡರೆ ಒಂದು ಮಹತ್ವದ ಬದಲಾವಣೆಯಾಗಲಿದೆ. ಅಂದರೆ ತಮಿಳುನಾಡು ತನ್ನ ವಿಮಾನಯಾನ ಮೂಲಸೌಕರ್ಯವನ್ನು ಬೆಳೆಸಲು ಒಂದು ದೊಡ್ಡ ಹೆಜ್ಜೆ ಇಡಬಹುದು. ಏಪ್ರಿಲ್‌ನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅಂತಿಮ ಅನುಮೋದನೆ ದೊರಕಿದರೆ, ಸರ್ಕಾರ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ ನಿರ್ಮಾಣ ಕಾರ್ಯ ಆರಂಭಿಸಬಹುದು ಎನ್ನಲಾಗಿದೆ.
ಒಟ್ಟಿನಲ್ಲಿ ಪರಂದೂರು ವಿಮಾನ ನಿಲ್ದಾಣವು ಚೆನ್ನೈನ ಭವಿಷ್ಯದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವದ ಭೂಮಿಕೆಯನ್ನು ವಹಿಸಲಿದೆ ಎನ್ನಲಾಗಿದೆ. ಈ ಯೋಜನೆ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳೊಂದಿಗೆ ಹೇಗೆ ತೂಕೋಲಾತಿ ಮಾಡುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.


Click it and Unblock the Notifications