ಸಾಮಾನ್ಯವಾಗಿ ಬೆಂಗಳೂರು (Bengaluru) ಎಂದಾಕ್ಷಣ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ರಸ್ತೆ ತುಂಬೆಲ್ಲ ವಾಹನಗಳು, ಮಾರ್ಕೆಟ್‌ಗಳಲ್ಲಿ ಜನಜಂಗುಳಿ ಹೀಗೆ ಊಹಿಸೋದು ಸಾಮಾನ್ಯ. ಇದು ಸತ್ಯನೂ ಹೌದು. ಆದ್ರೆ ಇತ್ತೀಚೆಗಂತೂ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯೇ (Traffic Problem) ದೊಡ್ಡ ತಲೆನೋವಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗ್ಬೇಕಾದ್ರೆ ಸುಸ್ತಾಗೋದಂತೂ ಪಕ್ಕಾ. ಅದರ ನಡುವೆ ಈ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಸೌಲಭ್ಯಗಳು. ಆದ್ರೆ ಇದೀಗ ಸಿಕ್ಕಸಿಕ್ಕಲ್ಲಿ ಪಾರ್ಕಿಂಗ್ ಮಾಡುವವರಿಗೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಬೆಂಗಳೂರಿನ ಕೆಲವು ಕಡೆಗಳಲ್ಲಿ ಪಾರ್ಕಿಂಗ್ ಶುಲ್ಕ (Bengaluru Parking Fees) ನಿಯಮ ತಂದಿದ್ದು, ಇದೀಗ ಬೆಂಗಳೂರಿನ ಮಲ್ಲೇಶ್ವರಂನಲ್ಲೂ (Malleshwaram) ಈ ವ್ಯವಸ್ಥೆ ಜಾರಿಗೆ ಬಂದಿದೆ.

ಮಲ್ಲೇಶ್ವರಂ ಸವಾರರ ಜೇಬಿಗೆ ಕತ್ತರಿ!
ಬೆಂಗಳೂರಿನ ಮಲ್ಲೇಶ್ವರಂಗೆ ಭೇಟಿ ನೀಡುವ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಇದೀಗ ನಿರ್ಧರಿಸಲಾಗಿದೆ. ಆದ್ದರಿದ ಇನ್ಮೇಲೆ ಮಲ್ಲೇಶ್ವರಂನ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವವರು ಶುಲ್ಕ ಪಾವತಿಸಲೇಬೇಕು. ಆ ಪ್ರಕಾರ, ಮಲ್ಲೇಶ್ವರಂನ 18ನೇ ಕ್ರಾಸ್, 15ನೇ ಮತ್ತು 11ನೇ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಶುಲ್ಕ ಆಧಾರಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ದಶಕಗಳಿಂದ ಇದ್ದ ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಈ ಮೂಲಕ ಅಂತ್ಯ ಹಾಡಲಿದ್ದು, ನಾಗರಿಕ ಅಧಿಕಾರಿಗಳು ಪೇ ಅಂಡ್ ಪಾರ್ಕ್ ಸೌಲಭ್ಯಗಳಿಗೆ ಈಗಾಗಲೇ ಟೆಂಡರ್ ಆಹ್ವಾನಿಸಿದ್ದಾರೆ. ಇದು ಇಲ್ಲಿನ ನಿವಾಸಿಗಳು ಮತ್ತು ಸಂದರ್ಶಕರಿಗೆ ದೊಡ್ಡ ಬದಲಾವಣೆ ತಂದಿದೆ.
ಜನನಿಬಿಡ ವಾಣಿಜ್ಯ ರಸ್ತೆಯಾದ 18ನೇ ಕ್ರಾಸ್‌ನಲ್ಲಿ ಶುಲ್ಕ ಸಹಿತ ಪಾರ್ಕಿಂಗ್ ಈಗಾಗಲೇ ಕಾರ್ಯಾರಂಭ ಮಾಡಿದೆ. ಇದಲ್ಲದೆ, 15ನೇ ಮತ್ತು 11ನೇ ರಸ್ತೆಗಳಲ್ಲೂ ಇದೇ ಮಾದರಿಯ ಪಾರ್ಕಿಂಗ್ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಸಂಪಿಗೆ ರಸ್ತೆಯಲ್ಲಿಯೂ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧತೆಗಳು ನಡೆದಿವೆ. ಭಾರೀ ವಾಹನ ದಟ್ಟಣೆ ಮತ್ತು ಅಡ್ಡಾದಿಡ್ಡಿ ನಿಲ್ಲುವವರಿಗೆ ಬಿಸಿ ಮುಟ್ಟಿಸಲು ಈ ನಿಯಮ ಜಾರಿಗೆ ತರಲಾಗಿದೆ.
ಪಾರ್ಕಿಂಗ್ ದರ ಎಷ್ಟು?
ಹೊಸ ನಿಯಮದಡಿ, ವಾಹನ ಸವಾರರು ನಿಗದಿತ ರಸ್ತೆಗಳಲ್ಲಿ ತಮ್ಮ ವಾಹನ ನಿಲುಗಡೆಗೆ ಶುಲ್ಕ ಪಾವತಿಸಬೇಕು. ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ₹15 ದರ ನಿಗದಿಪಡಿಸಿದರೆ, ಇಡೀ ಒಂದು ದಿನದ ಪಾರ್ಕಿಂಗ್‌ಗೆ ₹75 ಶುಲ್ಕ ವಿಧಿಸಲಾಗಿದೆ. ಕಾರುಗಳಿಗೆ ಪ್ರತಿ ಗಂಟೆಗೆ ₹30 ದರ ವಿಧಿಸಲಾಗಿದ್ದು, ಇಡೀ ದಿನದ ಪಾರ್ಕಿಂಗ್‌ಗೆ ₹150 ಶುಲ್ಕ ಇರುತ್ತದೆ.
ಗಂಟೆಯ ಮತ್ತು ದೈನಂದಿನ ದರಗಳ ಜೊತೆಗೆ, ಮಾಸಿಕ ಪಾರ್ಕಿಂಗ್ ಪಾಸ್‌ಗಳನ್ನು ಸಹ ಅಧಿಕಾರಿಗಳು ಪರಿಚಯಿಸಲು ಪ್ಲಾನ್ ಮಾಡಿದ್ದಾರೆ. ದ್ವಿಚಕ್ರ ವಾಹನ ಬಳಕೆದಾರರು ₹1,500 ದರದ ಮಾಸಿಕ ಪಾಸ್ ಅನ್ನು ಪಡೆದುಕೊಳ್ಳಬಹುದು. ಅದೇ ರೀತಿ, ಕಾರು ಮಾಲೀಕರು ಮಾಸಿಕ ಪಾಸ್‌ಗಾಗಿ ₹3,000 ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಈ ಶುಲ್ಕ ಸಹಿತ ಪಾರ್ಕಿಂಗ್ ಉಪಕ್ರಮವು ಕೇವಲ ಮಲ್ಲೇಶ್ವರಂಗೆ ಮಾತ್ರ ಸೀಮಿತವಲ್ಲ. ನಗರದಾದ್ಯಂತ ಈ ವ್ಯವಸ್ಥೆಯನ್ನು ವಿಸ್ತರಿಸಲು ನಾಗರಿಕ ಅಧಿಕಾರಿಗಳು ಪ್ಲಾನ್ ಮಾಡುತ್ತಿದ್ದಾರೆ. ಕೇಂದ್ರ ನಾಗರಿಕ ವಲಯದ 35 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ಸೌಲಭ್ಯಗಳಿಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.


Click it and Unblock the Notifications