ನವದೆಹಲಿ: ಮಾರಕ ಕೊರೊನಾವೈರಸ್‌ಗೆ ಔಷಧಿ ಕೊರೊನಿಲ್ ಕಂಡು ಹಿಡಿದಿದ್ದೇವೆ ಎಂದಿದ್ದ ಆಯುರ್ವೇದ ಉತ್ಪನ್ನಗಳ ತಯಾರಿಕಾ ಸಂಸ್ಥೆ ಪತಂಜಲಿ ಇದೀಗ ಉಲ್ಟಾ ಹೊಡೆದಿದೆ.
ಕೊರೊನಿಲ್ ಕೊರೊನಾವೈರಸ್ ಅನ್ನು 'ಗುಣಪಡಿಸಬಹುದು ಅಥವಾ ನಿಯಂತ್ರಿಸಬಹುದು' ಎಂದು ತಾನು ಎಂದಿಗೂ ಹೇಳಿಕೊಂಡಿಲ್ಲ ಎಂದು ಪತಂಜಲಿಯ ಆಚಾರ್ಯ ಬಾಲಕೃಷ್ಣ ಮಂಗಳವಾರ ತಿಳಿಸಿದ್ದಾರೆ.
ಕಳೆದ ವಾರ ಯೋಗ ಗುರು ರಾಮದೇವ್ ಅವರ ಪತಂಜಲಿ ಕೊರೊನಿಲ್ ಔಷಧಿ ಕೊರೊನಾವೈರಸ್ ಪೀಡಿತ ರೋಗಿಗಳನ್ನು ನೂರಕ್ಕೆ ನೂರರಷ್ಟು ಗುಣಪಡಿಸುತ್ತದೆ ಎಂದು ಹೇಳಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಔಷಧಿಯ ಪರಿಣಾಮದ ಬಗ್ಗೆ ಸರ್ಕಾರ ಮತ್ತು ನಾಗರಿಕರು ಪುರಾವೆ ಕೇಳಿದ್ದರು.
ಕೊರೊನಿರಲ್ ಕೊರೊನಾವೈರಸ್ ರೋಗಿಗಳನ್ನು ಗುಣಪಡಿಸಬಹುದು ಅಥವಾ ನಿಯಂತ್ರಿಸಬಹುದು ಎಂದು ನಾವು ಎಂದಿಗೂ ಹೇಳಲಿಲ್ಲ, ನಾವು ಔಷಧಿ ತಯಾರಿಸಿದ್ದೇವೆ. ಅವುಗಳನ್ನು ಕೊರೊನಾವೈರಸ್ ರೋಗಿಗಳನ್ನು ಗುಣಪಡಿಸುವ ಕ್ಲಿನಿಕಲ್ ಪ್ರಯೋಗಗಳಲ್ಲಿ ಮಾತ್ರ ಬಳಸಿದ್ದೇವೆ. ಅದೇ ಕೊರೊನಾವೈರಸ್‌ಗೆ ಔಷಧಿ ಎಂದು ನಾವು ಎಲ್ಲೂ ಹೇಳಿಲ್ಲ. ಕ್ಲಿನಿಕಲ್ ಪ್ರಯೋಗ ನಡೆಸಲು ಸರ್ಕಾರದಿಂದ ಅಗತ್ಯ ಅನುಮತಿಯನ್ನು ಪಡೆದಿದ್ದೇವೆ ಎಂದು ನಾವು ಹೇಳಿದ್ದೇವೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಆಚಾರ್ಯ ಬಾಲ್ಕೃಷ್ಣ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರತದ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 5,66,840 ಕ್ಕೆ ಏರಿಕೆಯಾಗಿದೆ. 3,34,822 ಜನ ಚೇತರಿಸಿಕೊಂಡಿದ್ದಾರೆ. ಭಾರತದ ಚೇತರಿಕೆ ದರವು ಪ್ರಸ್ತುತ ಸುಮಾರು 60% ರಷ್ಟಿದೆ. 16,893 ಜನರು ಮಾರಕ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.


Click it and Unblock the Notifications