ರಾಜ್‌ಕುಮಾರ್-ಕಲ್ಪನಾ ಅಭಿನಯದ 1974 ರ ಎರಡು ಕನಸು ಚಿತ್ರದ ಕನ್ನಡ ಹಾಡಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಚೆನ್ನೈ ಮೂಲದ ಗಾಯಕರಾದ ಶಿವಶ್ರೀ ಸ್ಕಂದಪ್ರಸಾದ್ ಅವರ ಧ್ವನಿಮುದ್ರಣದ ವೀಡಿಯೊ ತುಣುಕನ್ನು ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇದೀಗ ಟ್ರೆಂಡ್ ಆಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಪೂರ್ವಭಾವಿಯಾಗಿ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪ್ರಧಾನಿ ಹಾಡಿನ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಹಾಡು ಶ್ರೀ ರಾಮನಿಗೆ ಸಮರ್ಪಿತವಾಗಿರುವ ಹಾಡಾಗಿದೆ. ಯಾವ ಹಾಡು?, ಇಲ್ಲಿದೆ ವಿವರ ಮುಂದೆ ಓದಿ....

ಯಾವ ಹಾಡಿಗೆ ಮೆಚ್ಚುಗೆ?
ರಾಜ್‌ಕುಮಾರ್ ಅಭಿನಯದ ಸಿನಿಮಾದ ಕನ್ನಡ ಹಾಡು 'ಪೂಜಿಸಲೆಂದೇ... ಹೂಗಳ ತಂದೆ' ಹಾಡಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ಸಹಾಯ ಮಾಡುತ್ತವೆ," ಎಂದು ಹೇಳಿದರು.
ಈ ಹಾಡನ್ನು ಮೂಲತಃ ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್ ಜಾನಕಿ ಹಾಡಿದ್ದಾರೆ. ಚಿ ಉದಯಶಂಕರ್ ಬರೆದಿದ್ದಾರೆ. ಇದನ್ನು ಹೆಸರಾಂತ ಸಂಗೀತ ನಿರ್ದೇಶಕ ಜೋಡಿ ರಾಜನ್ ಮತ್ತು ನಾಗೇಂದ್ರ ಸಂಯೋಜಿಸಿದ್ದಾರೆ. ಪ್ರಧಾನಮಂತ್ರಿಯವರ ಟ್ವೀಟ್‌ನಲ್ಲಿರುವ ಶಿವಶ್ರೀ ಅವರ ನಿರೂಪಣೆಯ ವೀಡಿಯೊಗೆ 962,000 ವೀವ್ಸ್ ಬಂದಿದೆ. ಭರತನಾಟ್ಯ ನರ್ತಕಿ ಮತ್ತು ಅರೆಕಾಲಿಕ ರೂಪದರ್ಶಿಯೂ ಆಗಿರುವ ಶಾಸ್ತ್ರೀಯ ಗಾಯಕರು ರಾಷ್ಟ್ರೀಯ ಪ್ರಸಿದ್ಧರಾಗಿದ್ದಾರೆ.
ಈ ಬಗ್ಗೆ ಶಿವಶ್ರೀ ಪ್ರತಿಕ್ರಿಯಿಸಿ, "ನನ್ನಂತಹ ವಿನಮ್ರ ಕಲಾವಿದನಿಗೆ ಈ ಮನ್ನಣೆ ನಿಜಕ್ಕೂ ದೊಡ್ಡದು. ಭಾರತಕ್ಕೆ ನಿರಂತರವಾಗಿ ಸೇವೆ ಸಲ್ಲಿಸಲು ಮತ್ತು ನಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಮುಂದುವರಿಸಲು ನಮ್ಮನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು," ಎಂದು ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುತ್ತಾ ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಪೋಸ್ಟ್ ಅನ್ನು ಒಂದು ರೋಮಾಂಚನ ಕ್ಷಣ (goosebump moment) ಭಗವಾನ್ ರಾಮನ ಆಶೀರ್ವಾದದಂತೆ ಎಂದು ಬಣ್ಣಿಸಿದ್ದಾರೆ. ಈ ಹಾಡನ್ನು ಒಂದು ವರ್ಷದ ಹಿಂದೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಮತ್ತು ಮೋದಿ ಅವರ ಎಕ್ಸ್ ಪೋಸ್ಟ್ ಬಳಿಕ ಇದು ಈಗ ಫೇಮಸ್ ಆಗುತ್ತಿದೆ.
"ನಾನು ಈ ಸಮಯಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದೇನೆ. ಯಾಕೆಂದರೆ ಇದು ದಕ್ಷಿಣದ ನನ್ನಂತಹ ಸರಳ ಕಲಾವಿದನಿಗೆ ದೊಡ್ಡ ಮನ್ನಣೆಯಾಗಿದೆ. ಇದು ಸಂಸ್ಕೃತಿ ಮತ್ತು ಕರ್ನಾಟಕ ಸಂಗೀತ ಮತ್ತು ಭಾರತದ ದಕ್ಷಿಣ ಭಾಗದ ಎಲ್ಲಾ ಕಲಾ ಪ್ರಕಾರಗಳಿಗೆ ಮನ್ನಣೆಯಾಗಿದೆ," ಎಂದು ಹೇಳಿದರು.
ಕಲೆ ಮತ್ತು ಸಂಗೀತಕ್ಕೆ ವಿಶಿಷ್ಟವಾದ ವೇದಿಕೆಯಾದ ಆಹುತಿಯ ಸ್ಥಾಪಕರು ಶಿವಶ್ರೀ. "ಹಾಡು, ನೃತ್ಯ, ಪಠಣ ಪಾಠ, ಒಗಟುಗಳನ್ನು ಬಿಡಿಸುವುದು, ಹೆಣಿಗೆ, ಪೇಂಟಿಂಗ್, ಹೂಮಾಲೆ ತಯಾರಿಕೆ, ಮೇಕಪ್, ಸಂಭಾಷಣೆ ಮೊದಲಾದ ಪ್ರತಿಭೆ ಹೊಂದಿರುವವರು," ಎಂದು ಲಿಂಕ್ಡ್‌ಇನ್ ಪ್ರೊಫೈಲ್ ಹೇಳುತ್ತದೆ.


Click it and Unblock the Notifications