ದೇಶದ ಬಹುಬೇಡಿಕೆಯ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಆರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜನವರಿ 17, 2026 ರ ಶನಿವಾರದಂದು ಪಶ್ಚಿಮ ಬಂಗಾಳದ ಮಾಲ್ಡಾ ಟೌನ್ ರೈಲು ನಿಲ್ದಾಣದಲ್ಲಿ ಹೌರಾ ಮತ್ತು ಗುವಾಹಟಿ (ಕಾಮಾಕ್ಯ) (Howrah-Guwahati) ನಡುವೆ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದರು. ಭಾರತೀಯ ರೈಲ್ವೆಯ ಅಭಿವೃದ್ಧಿಯ ನಡೆಗೆ ಇದು ಮಹತ್ವದ ಮೈಲಿಗಲ್ಲಾಗಿದೆ. ಇನ್ನು ವಂದೇ ಭಾರತ್ ಸ್ಲೀಪರ್ ರೈಲು ದೂರದ ರೈಲು ಪ್ರಯಾಣಕ್ಕೆ ಮತ್ತು ಗುಣಮಟ್ಟದ ಸೇವೆ ನೀಡುವುದೇ ಇದ ಉದ್ದೇಶವಾಗಿದೆ.

ಆಧುನಿಕ ಭಾರತದ ಸಾರಿಗೆ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಂಡ ಈ ಸಂಪೂರ್ಣ ಹವಾನಿಯಂತ್ರಿತ ವಂದೇ ಭಾರತ್ ಸ್ಲೀಪರ್ ರೈಲು, ಕೈಗೆಟಕುವ ದರದಲ್ಲಿ ಅದ್ಭುತ ಅನುಭವ ನೀಡಲಿದೆ. ಇದು ದೂರದ ಪ್ರಯಾಣಗಳನ್ನು ವೇಗವಾಗಿ, ಸುರಕ್ಷಿತ ಹಾಗೂ ಹೆಚ್ಚು ಆರಾಮದಾಯಕವಾಗಿಸುತ್ತದೆ.
ಕಡಿಮೆ ಸಮಯ, ಹೆಚ್ಚು ವೇಗದ ಸಂಚಾರ
ಹೌರಾ-ಗುವಾಹಟಿ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಸ್ಲೀಪರ್ ರೈಲು, ಪ್ರಯಾಣದ ಅವಧಿಯನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಇದು ಧಾರ್ಮಿಕ ಮತ್ತು ಪ್ರವಾಸಿ ಪ್ರಯಾಣಕ್ಕೆ ಭಾರಿ ಉತ್ತೇಜನ ನೀಡುವ ನಿರೀಕ್ಷೆಯಿದೆ.
ವಂದೇ ಭಾರತ್ ರೈಲಿನ ಫೀಚರ್ಸ್
ವಂದೇ ಭಾರತ್ ಸ್ಲೀಪರ್ 180 ಕಿ.ಮೀ/ಗಂ ವಿನ್ಯಾಸ ವೇಗ ಹೊಂದಿದೆ. ಇದರಲ್ಲಿ ಹನ್ನೊಂದು 3-ಟೈರ್, ನಾಲ್ಕು 2-ಟೈರ್ ಮತ್ತು ಒಂದು ಎಸಿ ಬೋಗಿ ಸೇರಿದಂತೆ ಒಟ್ಟು 16 ಬೋಗಿಗಳಿವೆ.
ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ 823 ಪ್ರಯಾಣಿಕರ ಆಸನ ಮತ್ತು ಸ್ಲೀಪರ್ ಸಾಮರ್ಥ್ಯ ಹೊಂದಿದೆ. ಇದರ 3-ಟೈರ್‌ನಲ್ಲಿ 611, 2-ಟೈರ್‌ನಲ್ಲಿ 188, 1 ಎಸಿ ಸೌಲಭ್ಯದಲ್ಲಿ 24 ಪ್ರಯಾಣಿಕರಿಗೆ ಅವಕಾಶವಿದೆ. ಉತ್ತಮ ಕುಷನಿಂಗ್‌ನೊಂದಿಗೆ ವಿನ್ಯಾಸಗೊಳಿಸಿದ ಬರ್ತ್‌ಗಳನ್ನು ಈ ರೈಲು ಒಳಗೊಂಡಿದೆ.
ವಂದೇ ಭಾರತ್ ಸ್ಲೀಪರ್ ರೈಲಿನ ದರ ಎಷ್ಟು?
ಭಾರತೀಯ ರೈಲ್ವೆ ಸೂಚಿಸಿದ ದರಗಳಂತೆ, 400 ಕಿ.ಮೀ.ವರೆಗಿನ ಎಸಿ 3-ಟೈರ್ ಟಿಕೆಟ್‌ಗಳು ₹960 ರೂ.ನಿಂದ ಆರಂಭವಾಗುತ್ತವೆ. ಎಸಿ 2-ಟೈರ್‌ಗೆ ಸುಮಾರು ₹1,240, ಮತ್ತು ಫಸ್ಟ್ ಕ್ಲಾಸ್ ಎಸಿಗೆ ಸುಮಾರು ₹1,520 ನಿಗದಿಪಡಿಸಲಾಗಿದೆ. 1,000 ಕಿ.ಮೀ.ವರೆಗಿನ ಪ್ರಯಾಣಕ್ಕೆ, ದರಗಳು ₹2,400 ರಿಂದ ₹3,800 ರೂ. ವ್ಯಾಪ್ತಿಯಲ್ಲಿವೆ. ವಿಮಾನ ಟಿಕೆಟ್‌ಗಳಿಗೆ ಹೋಲಿಸಿದ್ರೆ ಇವು ಅಗ್ಗವಾಗಿದ್ದು, ಪ್ರಯಾಣ ಭಾರೀ ಅಗ್ಗದಲ್ಲಿ ಮುಗಿಯುತ್ತದೆ.
ವಿಐಪಿ ಕೋಟಾಗಳಿಗೆ ಬ್ರೇಕ್
ವಂದೇ ಭಾರತ್ ಸ್ಲೀಪರ್ ರೈಲು ಅನ್ನು ಈ ಬಾರಿ ಸಾಮಾನ್ಯ ಜನರಿಗೂ ಲಭ್ಯವಾಗುವಂತೆ ಕಾರ್ಯರೂಪಕ್ಕೆ ತರಲಾಗಿದೆ. ಇದರಲ್ಲಿ ಯಾವುದೇ ವಿಐಪಿ ಅಥವಾ ತುರ್ತು ಎಂಟ್ರಿಯ ಕೋಟಾ ಟಿಕೆಟ್ ಆಸನಗಳಿಲ್ಲ. ಹಿರಿಯ ಮತ್ತು ಉನ್ನತ ರೈಲ್ವೆ ಅಧಿಕಾರಿಗಳೂ ಸಹ ಈ ರೈಲುಗಳಲ್ಲಿ ರೈಲ್ವೆ ಪಾಸ್‌ಗಳನ್ನು ಬಳಸುವಂತಿಲ್ಲ. ದೃಢಪಡಿಸಿದ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿದೆ.


Click it and Unblock the Notifications