ನವದೆಹಲಿ, ಸೆಪ್ಟೆಂಬರ್ 23: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಈ ಭೇಟಿಯ ಸಂದರ್ಭದಲ್ಲಿ ಪ್ರಮುಖ ಟೆಕ್ ಬಾಸ್‌ಗಳೊಂದಿಗೆ ಸಂವಾದ ನಡೆಸಿದ್ದಾರೆ. ಸಿಲಿಕಾನ್ ವ್ಯಾಲಿಯ ಪ್ರಮುಖ ಸಿಇಒಗಳು ನ್ಯೂಯಾರ್ಕ್‌ನಲ್ಲಿ ನಡೆದ ಟೆಕ್-ರೌಂಡ್‌ಟೇಬಲ್ ಸಭೆಯ ಬಳಿಕ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ ಅವರು , " ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟೆಕ್ ದೈತ್ಯರಾದ ನಮಗೆ ಸವಾಲು ಹಾಕಿದ್ದಾರೆ" ಎಂದು ಹೇಳಿದ್ದಾರೆ.
ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸ್ಕೂಲ್ ಆಫ್ ಇಂಜಿನಿಯರಿಂಗ್ ಆಯೋಜಿಸಿದ ಟೆಕ್-ರೌಂಡ್‌ಟೇಬಲ್ ಸಭೆಯಲ್ಲಿ ಎನ್‌ವಿಡಿಯಾದ ಜೆನ್ಸನ್ ಹುವಾಂಗ್, ಗೂಗಲ್ ನ ಸಿಇಒ ಸುಂದರ್ ಪಿಚೈ, ಅಡೋಬ್‌ನ ಶಾಂತನು ನಾರಾಯಣ್, ಆಕ್ಸೆಂಚರ್‌ನ ಜೂಲಿ ಸ್ವೀಟ್, ಎಎಮ್‌ಡಿಯ ಲಿಸಾ ಸು, ಬಯೋಜೆನ್‌ನ ಕ್ರಿಸ್ ವಿಹ್‌ಬಾಚೆರ್, ಎಚ್‌ಪಿ, ಆರ್ವಿನ್ ಕೃಷ್ಣಾ ಲೊರೆಸ್ ಮತ್ತು ಇತರರು ಭಾಗವಹಿಸಿದ್ದರು.

ಸಭೆಯ ಬಳಿಕ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ , ಭಾರತದ ಡಿಜಿಟಲ್ ರೂಪಾಂತರವನ್ನು ಶ್ಲಾಘಿಸಿದ್ದು ಈ ವೇಳೆ ಪ್ರಧಾನಿಯವರ ಜೊತೆ ನಡೆಸಿದ ಚರ್ಚೆಯ ಮುಖ್ಯಾಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಆರೋಗ್ಯ, ಶಿಕ್ಷಣ ಮತ್ತು ಕೃಷಿ ಇತ್ಯಾದಿಗಳ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ಯನ್ನು ಯಾವ ರೀತಿ, ಹೇಗೆ ಅನ್ವಯಿಸಬಹುದು ಎಂಬುವುದರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ. "ಭಾರತದೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಹೆಮ್ಮೆಯಿದ್ದು, ನಾವು ಭಾರತದಲ್ಲಿ AI ನಲ್ಲಿ ದೃಢವಾಗಿ ಹೂಡಿಕೆ ಮಾಡುತ್ತಿದ್ದು, ಇದಕ್ಕೂ ಹೆಚ್ಚಿಗೆ ಇರುವ ಅವಕಾಶಗಳನ್ನು ನಾವು ಎದುರು ನೋಡುತ್ತೇವೆ. ಇದಕ್ಕಾಗಿ MeitY, ಕೃಷಿ ಮತ್ತು ಆರೋಗ್ಯ ಸಚಿವಾಲಯಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದೇವೆ" ಅವರು ಹೇಳಿದರು.
"ಭಾರತಕ್ಕಾಗಿ ಇನ್ನು ಹೆಚ್ಚಿನದನ್ನು ಮಾಡಲು ಪ್ರಧಾನಿ ನಮಗೆ ಸವಾಲು ಹಾಕಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಚಿಸುವ ಅವಕಾಶದ ವಿಷಯದಲ್ಲಿ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದಾರೆ, ಆದರೆ ಅಂತಿಮವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಭಾರತದ ಜನರಿಗೆ ಪ್ರಯೋಜನಕಾರಿಯಾಗಿರುತ್ತದೆ" ಎಂದು ಖಚಿತಪಡಿಸಿಕೊಳ್ಳಲು ಅವರು ಬಯಸುತ್ತಾರೆ ಎಂದು ಪಿಚೈ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಅವರು ಪ್ರಧಾನಿ ಮೋದಿಯನ್ನು "ಇನ್ಕ್ರೆಡಿಬಲ್ ವಿದ್ಯಾರ್ಥಿ" ಎಂದು ಕರೆದಿದ್ದಾರೆ. ಪ್ರಧಾನಿ ಮೋದಿಯವರು ತಂತ್ರಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಕುತೂಹಲಕಾರಿ ವಿದ್ಯಾರ್ಥಿಯಾಗಿದ್ದಾರೆ. ಭಾರತವು ವಿಶ್ವದ ಕೆಲವು ಶ್ರೇಷ್ಠ ಕಂಪ್ಯೂಟರ್ ವಿಜ್ಞಾನಿಗಳಿಗೆ ನೆಲೆಯಾಗಿದೆ. ಕೃತಕ ಬುದ್ಧಿಮತ್ತೆಯು ಹೊಸ ಉತ್ಪಾದನಾ ಉದ್ಯಮವಾಗಿದ್ದು ಬೆಳೆಯುತ್ತಿದ್ದು, ಆದ್ದರಿಂದ ನಾನು ಭಾರತದೊಂದಿಗೆ ಅತ್ಯಂತ ಆಳವಾದ ರೀತಿಯಲ್ಲಿ ಪಾಲುದಾರಿಕೆಯನ್ನು ಹೊಂದಲು ಎದುರು ನೋಡುತ್ತಿದ್ದೇನೆ ಎಂದು ಹುವಾಂಗ್ ಹೇಳಿದ್ದಾರೆ.
"ನಾನು ಅವರನ್ನು ಭೇಟಿಯಾದಾಗಲೆಲ್ಲಾ, ಅವರು ತಂತ್ರಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ. ಕೃತಕ ಬುದ್ಧಿಮತ್ತೆಯು ಹೊಸ ಉದ್ಯಮವಾಗಿದೆ ಮತ್ತು ನಾನು ಭಾರತದೊಂದಿಗೆ ಪಾಲುದಾರಿಕೆಗಾಗಿ ಎದುರು ನೋಡುತ್ತಿದ್ದೇನೆ. ನಾವು ಭಾರತದಲ್ಲಿ ಹಲವಾರು ಕಂಪನಿಗಳು, ಸ್ಟಾರ್ಟ್ ಅಪ್‌ಗಳು ಮತ್ತು ಐಐಟಿಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ" ಎಂದು ಅವರು ಹೇಳಿದ್ದಾರೆ.
ಟೆಕ್ ಸಿಇಒಗಳೊಂದಿಗೆ ಟೆಕ್-ರೌಂಡ್‌ಟೇಬಲ್ ಸಭೆಯೂ ಫಲಪ್ರದವಾಗಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಅಂಶಗಳನ್ನು ಕುರಿತು ಚರ್ಚಿಸಿದ್ದಾರೆ. ಈ ಕ್ಷೇತ್ರದಲ್ಲಿ ಭಾರತ ಮಾಡಿರುವ ದಾಪುಗಾಲುಗಳನ್ನೂ ಈ ಸಭೆಯೂ ಎತ್ತಿ ತೋರಿಸಿದೆ. ಭಾರತದ ಬಗ್ಗೆ ಅಪಾರ ಆಶಾವಾದವನ್ನು ನೋಡಲು ನನಗೆ ಸಂತೋಷವಾಗಿದೆ" ಎಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನ ಮಂತ್ರಿ ಹೇಳಿದ್ದಾರೆ.


Click it and Unblock the Notifications