ಬಹುಕೋಟಿ ಪಿಎನ್‍ಬಿ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅಂಟಿಗುವಾ ಮತ್ತು ಬರ್ಬುಡಾ ದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಟಿಗುವಾ ರಾಯಭಾರ ಕಚೇರಿಯಿಂದ ಸಿಬಿಐ ಮಾಹಿತಿ ಕೇಳಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 14,000 ಕೋಟಿ ವಂಚಿಸಿದ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಮೆಹುಲ್ ಚೋಕ್ಸಿ ಇದೀಗ ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗುವಾದಿಂದಲೂ ನಾಪತ್ತೆಯಾಗಿದ್ದಾನೆ.

ಸಾವಿರಾರು ಕೋಟಿ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ತನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅರಿತ ಚೋಕ್ಸಿ, 2018ರಲ್ಲಿ ಆಂಟಿಗುವಾಕ್ಕೆ ಪರಾರಿಯಾಗಿದ್ದ. ಆತನ ಪತ್ತೆಗೆ ಸಿಬಿಐ ಹಾಗೂ ಇ.ಡಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದವು. ಕೊನೆಗೂ ಆತನ ಸುಳಿವು ಪತ್ತೆಯಾಗಿ, ಭಾರತಕ್ಕೆ ಮರಳಿ ಕರೆತರುವ ಪ್ರಯತ್ನಗಳು ನಡೆದಿದ್ದವು. ಆದರೆ ಚೋಕ್ಸಿ ಅಲ್ಲಿಂದ ಕಣ್ಮರೆಯಾಗಿದ್ದಾನೆ. ಚೋಕ್ಸಿ ಕುಟುಂಬದವರು ಆತನಿಗಾಗಿ ಹುಡುಕಾಡುತ್ತಿದ್ದಾರೆ ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರವಾಲ್ ತಿಳಿಸಿದ್ದಾರೆ.
ಮೆಹುಲ್ ಚೋಕ್ಸಿಗಾಗಿ ಆಂಟಿಗುವಾ ಪೊಲೀಸರು ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿ ಎಲ್ಲಿದ್ದಾರೆ ಎನ್ನುವುದನ್ನು ಕಂಡುಕೊಳ್ಳಲು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಲ್ಲಿನ ಪೊಲೀಸ್ ಕಮಿಷನರ್ ಅಟ್ಲೀ ರಾಡ್ನಿ ತಿಳಿಸಿದ್ದಾರೆ
ನೀರವ್ ಮೋದಿ ಹಾಗೂ ಚೋಕ್ಸಿ ಅವರು 14,000 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಲಂಡನ್‌ನಲ್ಲಿ ಬಂಧಿತರಾಗಿರುವ ನೀರವ್ ಮೋದಿ ಅವರನ್ನು ಅಲ್ಲಿನ ನ್ಯಾಯಾಲಯ ಭಾರತಕ್ಕೆ ಗಡಿಪಾರು ಮಾಡಿದೆ. ಆದರೆ ಅದೇ ರೀತಿ 2018ರಲ್ಲಿ ಅಂಟಿಗುವಾ ಪೌರತ್ವ ಪಡೆದು ಅಲ್ಲೇ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಚೋಕ್ಸಿ ಕಣ್ಮರೆಯಾಗಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.


Click it and Unblock the Notifications