ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಈ ವಾರವಿಡೀ ಹಲವು ಕಡೆಗಳಲ್ಲಿ ಪವರ್ ಕಟ್ ಎದುರಿಸಿದೆ. ಇದೀಗ ಇಂದೂ ಕೂಡಾ ಹಲವೆಡೆ ಪವರ್ ಕಟ್ (Today Power Cut) ಇರಲಿದೆ ಎಂದು ಬೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಶುಕ್ರವಾರ, ಫೆಬ್ರವರಿ 13, 2026 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಿದೆ. ನಗರದ ಸುಗಮ ವಿದ್ಯುತ್ ಪೂರೈಕೆಗಾಗಿ ವಿವಿಧ ಉಪಕೇಂದ್ರಗಳು ಮತ್ತು ಫೀಡರ್ ವಲಯಗಳಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದೆ. ಈ ತಾತ್ಕಾಲಿಕ ಸ್ಥಗಿತವು ನಗರದ ಅನೇಕ ಪ್ರದೇಶಗಳ ನಿವಾಸಿಗಳು ಮತ್ತು ವ್ಯಾಪಾರಗಳ ಮೇಲೆ ಪರಿಣಾಮ ಬೀರಲಿದೆ.

ಈ ನಿರ್ವಹಣಾ ಕಾರ್ಯಗಳಿಂದಾಗಿ ದಿನದ ಕೆಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 11:00 ರಿಂದ ಸಂಜೆ 4:00 ರವರೆಗೆ ಕೆಲವು ವಲಯಗಳಲ್ಲಿ ಮತ್ತು ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ ಇತರೆ ಭಾಗಗಳಲ್ಲಿ ವಿದ್ಯುತ್ ಕಡಿತವಿರಲಿದೆ. ಫೀಡರ್ ನಿರ್ವಹಣಾ ವೇಳಾಪಟ್ಟಿಯನ್ನು ಆಧರಿಸಿ ಈ ಪವರ್ ಕಟ್ ಆಗಲಿದೆ ಎಂದು ತಿಳಿಸಿದೆ. ಕೆಲಸ ಮುಗಿದ ನಂತರ ಮತ್ತೆ ಕರೆಂಟ್ ಯಥಾಸ್ಥಿತಿಗೆ ಬರಲಿದೆ.
ಈ ವಿದ್ಯುತ್ ಸ್ಥಗಿತವು ಮುಖ್ಯವಾಗಿ ಮೂರು ಪ್ರಮುಖ ಉಪಕೇಂದ್ರಗಳಾದ RBI/BMTC, ಪೀಣ್ಯ, ಮತ್ತು ಶಾಂತಿನಗರ/ಸೆಂಟ್ರಲ್ ಕ್ಲಸ್ಟರ್ ಫೀಡರ್ ವಲಯಗಳಿಗೆ ಒಳಪಟ್ಟಿದೆ. ಶಾಂತಿನಗರ, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಸುಬ್ಬಯ್ಯ ಸರ್ಕಲ್, ರಿಚ್ಮಂಡ್ ಸರ್ಕಲ್ ಮತ್ತು ಸುತ್ತಮುತ್ತಲಿನ ಅನೇಕ ಪ್ರಮುಖ ಪ್ರದೇಶಗಳು ಸೇರಿವೆ.
ಅದಲ್ಲದೆ, RBI ಲೇಔಟ್ ಮತ್ತು ಅದರ ಸುತ್ತಮುತ್ತಲಿನ ವಸತಿ ಕಾಲೋನಿಗಳು, ಜೆಪಿ ನಗರ 5ನೇ ಹಂತದ ಬೀದಿಗಳು, ಹಾಗೂ ಬ್ರಿಗೇಡ್ ಮಿಲೇನಿಯಮ್ ಮತ್ತು ಬ್ರಿಗೇಡ್ ಗಾರ್ಡನ್ ಅಪಾರ್ಟ್ಮೆಂಟ್‌ಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಪೀಣ್ಯ ವಲಯದ ಶಿವನಹಳ್ಳಿ ಪಾರ್ಕ್, ಮಂಜುನಾಥ್ ನಗರ, ಬೋವಿ ಕಾಲೋನಿ, ಆದರ್ಶ್ ನಗರ, ಮಹಾಗಣಪತಿ ನಗರ ಹಾಗೂ ಈ ಫೀಡರ್‌ಗಳಿಗೆ ಸಂಪರ್ಕ ಹೊಂದಿದ ಇತರ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಇವುಗಳಲ್ಲಿ ತಿಮ್ಮಯ್ಯ ರಸ್ತೆ, ಪುಷ್ಪಾಂಜಲಿ ಅಪಾರ್ಟ್ಮೆಂಟ್ಸ್, ಯೂನಿಕ್ಸ್ ಕಾಲೋನಿ, ಇಂದಿರಾ ನಗರ ಬಿ-ನಗರ, ಲಕ್ಷ್ಮಿ ನಗರ ಮತ್ತು ಇಎಸ್‌ಐ ಆಸ್ಪತ್ರೆ ರಸ್ತೆಗಳಂತಹ ಪ್ರಮುಖ ಸ್ಥಳಗಳಲ್ಲೂ ಪರಿಣಾಮ ಬೀರಲಿದೆ.
ಅಲ್ಲದೇ ಮಾನ್ಯತಾ ಟೆಕ್ ಪಾರ್ಕ್ ಉಪಕೇಂದ್ರ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 11:00 ರಿಂದ 4:00 ಗಂಟೆಯವರೆಗೆ ಕರೆಂಟ್ ಇರುವುದಿಲ್ಲ ಎಂದು ಹೇಳಲಾಗಿದೆ. ಆ ಪ್ರಕಾರ, ಫಿಡೆಲಿಟಿ, ಫಿಲಿಪ್ಸ್, ಇಂಕ್ಯುಬೇಟರ್, ಮಾನ್ಯತಾ ರೆಸಿಡೆನ್ಸಿ, ಬಿಟಿಎಸ್ ಲೇಔಟ್ ಗೋದ್ರೇಜ್ ಅಪಾರ್ಟ್‌ಮೆಂಟ್ಸ್, ಹೆಬ್ಬಾಳ ಕೆಂಪಾಪುರ, ವಿನಾಯಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ಜೆಎನ್ಸಿ, ರಾಚೇನಹಳ್ಳಿ, ಶ್ರೀರಾಮಪುರ, ಚಾಮುಂಡೇಶ್ವರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ವರದಿಯಾಗಿದೆ.
ವಿದ್ಯುತ್ ಪೂರೈಕೆ ಸ್ಥಗಿತಕ್ಕೆ ಮುಖ್ಯ ಕಾರಣವೆಂದರೆ, ಉಪಕೇಂದ್ರಗಳು ಮತ್ತು ಫೀಡರ್‌ಗಳಲ್ಲಿನ ನಿರ್ವಹಣಾ ಕಾರ್ಯ ಹಾಗೂ ತುರ್ತು ರಿಪೇರಿ ಕಾರ್ಯಗಳು. ಟ್ರಾನ್ಸ್‌ಫಾರ್ಮರ್ ಬದಲಾವಣೆ, ರಿಪೇರಿ, ವಿದ್ಯುತ್ ಲೈನ್‌ಗಳ ಸೇವೆ ಗುಣಮಟ್ಟಗೊಳಿಸುವುದು ಹೀಗೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ದೀರ್ಘಾವಧಿಯಲ್ಲಿ ವಿದ್ಯುತ್ ಪೂರೈಕೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಈ ಕ್ರಮ ಅತ್ಯಗತ್ಯ ಎಂದು ಬೆಸ್ಕಾಂ ಇಲಾಖೆಯ ಅಭಿಪ್ರಾಯ.


Click it and Unblock the Notifications