ಯಾವ ಉಳಿತಾಯಗಳನ್ನು ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ನಂಬಿ ಮಾಡಲಾಗುತ್ತೋ, ಕಷ್ಟ ಕಾಲಕ್ಕೆ ಇಷ್ಟ ದೈವದ ರೀತಿ ಅನುಕೂಲ ಆಗಬಹುದು ಎಂಬ ನಿರೀಕ್ಷೆ ಇರುತ್ತದೋ ಅಂಥ ಉಳಿತಾಯದ ಮೇಲಿನ ಬಡ್ಡಿ ದರಗಳು ದೊಪ್ಪನೆ ಬಿದ್ದಿವೆ. ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸಿಗಲಿ, ಅವರು ಈಗಾಗಲೇ ಕಟ್ಟುತ್ತಿರುವ ಸಾಲದ ಮೇಲಿನ ಬಡ್ಡಿ ಕಡಿಮೆ ಆಗಲಿ ಅಂತ ಆರ್‌ಬಿಐ ರೆಪೋ ದರ ಇಳಿಸಲಾಗಿತ್ತು.
ಕೊರೊನಾದಿಂದ ಆರ್ಥಿಕವಾಗಿ ಪೆಟ್ಟು ತಿಂದ ಜನರು ನಿಟ್ಟುಸಿರು ಬಿಡುವುದರೊಳಗೆ ಕೇಂದ್ರ ಸರ್ಕಾರವು ಏಪ್ರಿಲ್ ನಿಂದ ಜೂನ್ ಅವಧಿಗೆ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರಗಳನ್ನು ಮಂಗಳವಾರ 0.70 ಪರ್ಸೆಂಟ್ ರಿಂದ 1.40 ಪರ್ಸೆಂಟ್ ತನಕ ಕಡಿತ ಮಾಡಿದೆ.
ಪಿಪಿಎಫ್ ಸೇರಿದಂತೆ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಹಾಗೂ ಹಿರಿಯ ನಾಗರಿಕರ 5 ವರ್ಷಗಳ ಅವಧಿಯ ಉಳಿತಾಯ ಯೋಜನೆಗಳ ಬಡ್ಡಿಗಳನ್ನು ಕೂಡ ಇಳಿಸಲಾಗಿದೆ. ಹಾಗಿದ್ದರೆ ಸಣ್ಣ ಉಳಿತಾಯಗಳ ಯೋಜನೆಗಳ ಬಡ್ಡಿ ದರವು ಎಷ್ಟರ ಮಟ್ಟಿಗೆ ಇಳಿಕೆಯಾಗಿದೆ ಅನ್ನೋದು ನಿಮ್ಮ ಪ್ರಶ್ನೆಯಾದರೆ, ಇಲ್ಲಿದೆ ಮಾಹಿತಿ.
ಪಿಪಿಎಫ್ ಬಡ್ಡಿ ದರ ಇಳಿಕೆ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಡ್ಡಿ ದರವನ್ನು 7.9 ಪರ್ಸೆಂಟ್ ನಿಂದ 7.1 ಪರ್ಸೆಂಟ್ ಇಳಿದಿದೆ. ಈ ಮೂಲಕ ಹಿಂದಿನ ಬಡ್ಡಿ ದರಕ್ಕಿಂತ 0.8 ಪರ್ಸೆಂಟ್ ಕಡಿತವಾಗಿದೆ. ಅತಿ ಹೆಚ್ಚು ಬಡ್ಡಿ ದರ ಸಿಗುತ್ತದೆ ಎಂದು ಪಿಪಿಎಫ್ ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಈಗ ಆಘಾತವಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ
2020-21ರ ಮೊದಲ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಮೇಲಿನ ಬಡ್ಡಿ ಶೇಕಡಾ 7.6ಕ್ಕೆ ತರಲಾಗಿದೆ. ಇಲ್ಲಿಯವರೆಗೆ ಶೇ 8.4 ರಷ್ಟಿತ್ತು. ಹೆಣ್ಣುಮಕ್ಕಳ ಉತ್ತಮ ಭವಿಷ್ಯಕ್ಕಾಗಿ ರೂಪಿಸಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ ಬಡ್ಡಿದರ ಇಳಿಕೆಯಾಗಿರುವುದು ಹೆಣ್ಣುಮಕ್ಕಳ ಪೋಷಕರಿಗೆ ನಿರಾಸೆ ಮೂಡಿಸಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು
ಹಿರಿಯ ನಾಗರಿಕ ಉಳಿತಾಯ ಯೋಜನೆಯ ಮೇಲಿನ 5 ವರ್ಷದ ಅವಧಿಗೆ ಬಡ್ಡಿಯನ್ನು 1.2 ಪರ್ಸೆಂಟ್ ಕಡಿಮೆ ಮಾಡುವ ಮೂಲಕ 7.4 ಪರ್ಸೆಂಟ್ ಗೆ ಇಳಿಸಲಾಗಿದೆ. ಇದು ಇಲ್ಲಿಯವರೆಗೆ 8.6 ಪರ್ಸೆಂಟ್ ರಷ್ಟಿತ್ತು. ಹಿರಿಯ ನಾಗರಿಕ ಉಳಿತಾಯ ಯೋಜನೆಯ ಮೇಲಿನ ಬಡ್ಡಿಯನ್ನು ಸಹ ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ.
ಎನ್‌ಎಸ್‌ಇ , ಕಿಸಾನ್ ವಿಕಾಸ್ ಪತ್ರ
5 ವರ್ಷ ಅವಧಿಯ ರಾಷ್ಟ್ರೀಯ ಉಳಿತಾಯ ಪತ್ರದ (ಎನ್‌ಎಸ್‌ಇ) ಬಡ್ಡಿ ದರವನ್ನು 7.6 ಪರ್ಸೆಂಟ್ ನಿಂದ 6.6 ಪರ್ಸೆಂಟ್ ಗೆ ಕಡಿತಗೊಳಿಸಲಾಗಿದೆ. ಜೊತೆಗೆ ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರ 7.6 ಪರ್ಸೆಂಟ್ ನಿಂದ 6.9 ಪರ್ಸೆಂಟ್ ಗೆ ಇಳಿದಿದೆ. ಆದರೆ ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ವಾರ್ಷಿಕ 4 ಪರ್ಸೆಂಟ್ ಗೇ ಉಳಿಸಿಕೊಂಡಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.


Click it and Unblock the Notifications