ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ವರ್ಗಗಳಿಗೆ ಘೋಷಿಸಲಾದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ನ ಎರಡನೇ ಕಂತಿನ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ನೀಡಿದರು. ಆ ಪೈಕಿ ಮಧ್ಯಮ ವರ್ಗಕ್ಕೆ ಅನುಕೂಲ ನೀಡುವ ಯೋಜನೆಗಳು ಸಹ ಇದ್ದವು.
ಪ್ರಧಾನಮಂತ್ರಿ ಆವಾಸ ಯೋಜನಾ ಎಂಬುದು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ. ಅದನ್ನು 2021ರ ಮಾರ್ಚ್ 31ನೇ ತಾರೀಕಿನ ತನಕ ವಿಸ್ತರಣೆ ಮಾಡಲಾಗಿದೆ. ಇದರಿಂದ 6 ಲಕ್ಷದಿಂದ 18 ಲಕ್ಷದ ತನಕ ಆದಾಯ ಇರುವಂಥ ವರ್ಗಕ್ಕೆ ಅನುಕೂಲ ಆಗಲಿದೆ. ಮಧ್ಯಮ ವರ್ಗಕ್ಕೆ ಮನೆ ಕಟ್ಟುವ ಕನಸು ಈಡೇರಿಸಿಕೊಳ್ಳಲು ಅನುಕೂಲ ಆಗುತ್ತದೆ. ಖರ್ಚು ಕಡಿಮೆ ಆಗುತ್ತದೆ.
3.3 ಲಕ್ಷ ಕುಟುಂಬಗಳಿಗೆ ಅನುಕೂಲ
ಈ ಯೋಜನೆಯನ್ನು ಆರಂಭಿಸಿದ್ದು 2015ರಲ್ಲಿ. ಈ ತನಕ 3.3 ಲಕ್ಷ ಕುಟುಂಬಗಳು ಇದರಿಂದ ಅನುಕೂಲ ಪಡೆದಿವೆ. ಇನ್ನು ಈಗಿನ ಕಾಲಾವಧಿ ವಿಸ್ತರಣೆಯಿಂದ ಇನ್ನೂ 2 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೃಹಸಾಲಕ್ಕೆ ನೇರವಾಗಿ ಸಬ್ಸಿಡಿ ಸಿಗಲಿದೆ
ಮನೆ ನಿರ್ಮಾಣ ವಲಯವನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆ ತರಲಾಗಿದೆ. ಕೈಗೆಟುಕುವ ದರದ ಮನೆಗಳನ್ನು ಖರೀದಿ ಮಾಡುವ ನಗರವಾಸಿಗಳಿಗೆ ಕೇಂದ್ರದಿಂದ ಗೃಹ ಸಾಲದ ಮೇಲೆ ನೇರ ಸಬ್ಸಿಡಿ ಸಿಗಲಿದೆ. ನಿರ್ದಿಷ್ಟವಾಗಿ ಈ ಯೋಜನೆಯು ಆದಾಯ ಪ್ರಮಾಣದ ಮಿತಿಯ ಮೇಲೆ ನಿರ್ಧಾರವಾಗುತ್ತದೆ. ಇದೇ ವೇಳೆ ವಲಸಿಗರು ಹಾಗೂ ನಗರ ಪ್ರದೇಶದ ಬಡವರಿಗೆ ಕೈಗೆಟುಕುವ ದರದ ಬಾಡಿಗೆ ಮನೆ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
ಯೋಜನೆ ಬಗ್ಗೆ ಶೀಘ್ರವೇ ಮಾಹಿತಿ
ಈ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ, ಕಾರ್ಖಾನೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಯೋಜನೆಯನ್ನು ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ತರಲಾಗುತ್ತದೆ. ಮತ್ತು ಈ ಯೋಜನೆಯ ವಿವರಗಳನ್ನು ಶೀಘ್ರದಲ್ಲಿಯೇ ತಿಳಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


Click it and Unblock the Notifications