ಬೆಂಗಳೂರು: ಸರ್ಕಾರಿ ಸೇವೆಗಳ (Govt Service) ವಿರುದ್ಧ ಯಾವುದೇ ದೂರುಗಳನ್ನು ನೀಡಬೇಕೆಂದರೆ ಹತ್ತಿರದ ಪಂಚಾಯತ್ ಅಥವಾ ಆಡಳಿತ ಮಂಡಳಿಗೆ ದೀರ್ಘವಾದ ಪತ್ರದ ಮೂಲಕ ದೂರು ಸಲ್ಲಿಸಬೇಕು. ಆದ್ರೆ ಇನ್ಮೇಲೆ ಉದ್ದ ಉದ್ದ ಪತ್ರ ಬರೀಬೇಕು, ಪಂಚಾಯತ್ ಹೋಗ್ಬೇಕು, ಪೋಸ್ಟ್ ಮಾಡ್ಬೇಕು ಅನ್ನೋ ಟೆನ್ಷನ್ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಇ-ಆಡಳಿತ ಕೇಂದ್ರ (E-governance Center) ಕೃತಕ ಬುದ್ಧಿಮತ್ತೆ (AI) ಆಧಾರಿತ ದೂರು ನಿಯಂತ್ರಣಾ ವ್ಯವಸ್ಥೆ (Artificial Intelligence-Enabled Grievance Redressal System) ಜಾರಿಗೆ ತರಲು ಸಜ್ಜಾಗಿದೆ. ಈ ವ್ಯವಸ್ಥೆಯನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರುವ ನಿರೀಕ್ಷೆಯಿದ್ದು, ಇದು ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಗೆ ಪತ್ರದ ಮೂಲಕ ದೂರುಗಳನ್ನು ಸಲ್ಲಿಸುವ ಸಮಯವನ್ನು ಉಳಿಸಲಿದೆ ಎನ್ನಲಾಗಿದೆ.

ವಿದ್ಯುತ್ ಸಂಪರ್ಕ, ನೀರಿನ ಸರಬರಾಜು, ರಸ್ತೆ ಸಮಸ್ಯೆ ಮತ್ತು ಸರ್ಕಾರಿ ಯೋಜನೆಗಳ ಕುರಿತು ದೂರು ನೀಡಲು ಇನ್ಮೇಲೆ ದೀರ್ಘ ಪತ್ರಗಳನ್ನು ಬರೆಯುವ ಅಗತ್ಯವಿಲ್ಲ. ಈ ಹೊಸ ವ್ಯವಸ್ಥೆಯಿಂದಾಗಿ ಕೇವಲ ಅಗತ್ಯ ಮಾಹಿತಿಯನ್ನು ಈ ಟೆಕ್ನಾಲಜಿ ಮೂಲಕ ನೀಡಿದ್ರೆ ಸಾಕು, ಕ್ಷಣ ಮಾತ್ರದಲ್ಲಿ ಎಐ ಸ್ವಯಂಚಾಲಿತವಾಗಿ ದೂರು ಪತ್ರವನ್ನು ರಚಿಸುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುತ್ತದೆ.
ದೂರು ನೀಡುವುದು ಮತ್ತಷ್ಟು ಸುಲಭ
ಇನ್ಮೇಲೆ ಸಾರ್ವಜನಿಕರು ಯಾವುದೇ ಸರ್ಕಾರಿ ಸಂಬಂಧಿತ ಸಮಸ್ಯೆಗಳ ಬಗ್ಗೆ ದೂರುಗಳನ್ನು ಬಾಯಿ ಮೂಲಕ ವಿವರಿಸಬಹುದು ಅಥವಾ ಕೆಲವೇ ಕೆಲವೂ ಕೀವರ್ಡ್‌ಗಳನ್ನು ಬಳಸಿಕೊಂಡು ದೂರಿನ ಪತ್ರವನ್ನು ರಚಿಸಬಹುದು. ಈ ಮೂಲಕ ಎಐ ಸಿಸ್ಟಮ್ ದೂರನ್ನು ಸ್ವತಃ ಪತ್ರದ ರೀತಿಯಲ್ಲ ರಚಿಸುತ್ತದೆ. ಇನ್ನು ಎಐ ದೂರಿನ ಸಿಸ್ಟಮ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಲಭ್ಯವಿರುತ್ತದೆ ಎಂದು ಇ-ಗವರ್ನಾನ್ಸ್ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರು ಸಲ್ಲಿಸಲು ಪ್ರಸ್ತುತ ಇರುವ ವೆಬ್‌ಸೈಟ್:
ಎಐ ಆಧಾರಿತ ದೂರು ನೀಡುವ ವ್ಯವಸ್ಥೆಯು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿ. ಆದರೆ, 2021 ರಿಂದ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (iPGRS) ಜಾರಿಯಲ್ಲಿದೆ. ಇದರ ಮೂಲಕ ವೆಬ್‌ಸೈಟ್ ಬಳಸಿ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದು. ಇಲ್ಲಿ, ದೂರುದಾರರು ತಮ್ಮ ಹೆಸರು, ಸ್ಥಳ, ಫೋನ್ ನಂಬರ್ ಸೇರಿದಂತೆ ವಿವರಗಳನ್ನು ನಮೂದಿಸಬೇಕು ಮತ್ತು ನಂತರ ದೂರು ಸಲ್ಲಿಸಲು ಇಲಾಖೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಅಧಿಕಾರಿಯೊಬ್ಬರು ವಿವರಿಸಿದಂತೆ, "ಪ್ರಸ್ತುತ ವ್ಯವಸ್ಥೆಯಲ್ಲಿ, ದೂರು ಸಲ್ಲಿಸಲು ಇಲಾಖೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಜನರು ನಿಜವಾದ ಸಮಸ್ಯೆಗಳನ್ನು ಹೊಂದಿದ್ದರೂ, ಯಾವ ಇಲಾಖೆಯನ್ನು ಸಂಪರ್ಕಿಸಬೇಕೆಂದು ಅವರಿಗೆ ತಿಳಿದಿರುವುದಿಲ್ಲ. ಆದರೆ ಮುಂಬರುವ ಹೊಸ AI-ಸಕ್ರಿಯಗೊಳಿಸಿದ ವ್ಯವಸ್ಥೆಯಲ್ಲಿ, ದೂರುದಾರರ ಮೂಲಭೂತ ಮಾಹಿತಿ ಮತ್ತು ಇಲಾಖೆ ಸಂಬಂಧಿತ ಕೆಲವು ಮಾಹಿತಿಗಳನ್ನು ನೀಡಿದರೆ ಸಾಕಾಗುತ್ತದೆ. ಸ್ವಯಂ ಚಾಲಿತವಾಗಿ ಪತ್ರ ಇಲಾಖೆಗೆ ತಲುಪಲಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
7 ದಿನಗಳಲ್ಲಿ ಪರಿಹಾರ!
ಇನ್ನು ಸಾರ್ವಜನಿಕರು ದೂರು ಸಲ್ಲಿಸಿದ 7 ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡಬೇಕು. ಒಂದು ವೇಳೆ 7 ದಿನದಲ್ಲಿ ಕಿರಿಯ ಅಧಿಕಾರಿ ಸಮಸ್ಯೆ ಪರಿಹರಿಸಲು ವಿಫಲವಾದ್ರೆ, 8ನೇ ದಿನದಲ್ಲಿ ಹಿರಿಯ ಅಧಿಕಾರಿಗೆ ದೂರು ಸ್ವಯಂಚಾಲಿತವಾಗಿ ವರ್ಗಾವಣೆ ಆಗುತ್ತದೆ. ಅಲ್ಲಿಯೂ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಒಂದು ವೇಳೆ ಅಲ್ಲಿಯೂ ವಿಫಲವಾದರೆ 15ನೇ ದಿನದಂದು ಇಲಾಖೆಯ ಮುಖ್ಯಸ್ಥರಿಗೆ ದೂರು ರವಾನೆಯಾಗುತ್ತದೆ. ಅಲ್ಲಿ 21 ದಿನಗಳಲ್ಲಿ ಸಮಸ್ಯೆಗೆ ತಕ್ಕ ಪರಿಹಾರ ನೀಡಬೇಕು ಎಂದು ಮೂಲಗಳು ತಿಳಿಸಿದೆ. ಸದ್ಯ ಈ ಯೋಜನೆ ಅಭಿವೃದ್ಧಿಯ ಹಂತದಲ್ಲಿದ್ದು, ಮುಂದಿನ ತಿಂಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications