ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದಲ್ಲೇ ಬೆಟ್ಟಿಂಗ್ ಆಪ್‌ಗಳಿಗೆ ನಿಷೇಧ (Betting Apps Ban) ಹೇರಲಾಗಿದೆ. ಅಲ್ಲದೆ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡುವವರಿಗೂ ಎಚ್ಚರಿಕೆ ನೀಡಲಾಗಿದೆ. ಆದರೆ ಇದೀಗ ಕರ್ನಾಟಕ ಸರ್ಕಾರವು ಕುದುರೆ ರೇಸಿಂಗ್‌ಗೆ (Horse Racing) ಸಂಬಂಧಿಸಿದ ಆನ್‌ಲೈನ್ ಬೆಟ್ಟಿಂಗ್‌ಗೆ (Online Betting) ಪರವಾನಗಿ ನೀಡಲು ಹೊಸ ಮಸೂದೆಯನ್ನು ತರಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಕಾನೂನು ಸವಾಲುಗಳ ನಡುವೆಯೂ ಇತರ ರಾಜ್ಯಗಳ ಮಾದರಿಯೊಂದಿಗೆ ಮತ್ತು ಹೆಚ್ಚಿನ ಆದಾಯ ಗಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಹೌದು, ರಾಜ್ಯದಲ್ಲಿ ಪ್ರಸ್ತುತ ಕುದುರೆ ರೇಸ್‌ಗೆ ಬೆಟ್ಟಿಂಗ್ ಮಾಡುವುದಾದರೆ, ರೇಸ್ ಕೋರ್ಸ್‌ಗೆ ಹೋಗಲೇಬೇಕು. ಆದರೆ ಇದೀಗ ಕರ್ನಾಟಕ ಸರ್ಕಾರ, ಕೂತಲ್ಲಿಂದಲೇ ಬೆಟ್ಟಿಂಗ್ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಮಸೂದೆ ತರಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ರೇಸ್ ಕೋರ್ಸ್‌ಗಳ ಪರವಾನಗಿ ಕಾಯ್ದೆ 1952ಕ್ಕೆ ತಿದ್ದುಪಡಿ ತರುವ ಈ ಮಸೂದೆಯನ್ನು ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ಕುದುರೆ ರೇಸ್ ಬೆಟ್ಟಿಂಗ್ 'ಕೌಶಲ್ಯ ಮತ್ತು ಜ್ಞಾನ' ಆಧಾರಿತವಾಗಿದೆ ಎಂದು ನ್ಯಾಯಾಂಗ ತೀರ್ಪುಗಳು ಸ್ಪಷ್ಟಪಡಿಸಿವೆ ಎನ್ನಲಾಗಿದೆ. ಅಲ್ಲದೇ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ರೇಸ್ ಕ್ಲಬ್‌ಗಳಲ್ಲಿ ಈಗಾಗಲೇ ಇಂತಹ ಪದ್ಧತಿಗಳು ಜಾರಿಯಲ್ಲಿವೆ. ಈ ತಿದ್ದುಪಡಿಗಳು ಕರ್ನಾಟಕದಲ್ಲೂ ತರಲು ಮತ್ತು ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್‌ಗೆ ಕಾನೂನು ಚೌಕಟ್ಟನ್ನು ಸೃಷ್ಟಿಸಲು ಉದ್ದೇಶಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತರ ಆನ್‌ಲೈನ್ ಗೇಮಿಂಗ್ ಪ್ರಕಾರಗಳಿಗಿಂತ ಕುದುರೆ ರೇಸಿಂಗ್ ವಿಭಿನ್ನ ವರ್ಗಕ್ಕೆ ಸೇರುತ್ತದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಪರಿಗಣಿಸಿದಂತೆ, "ಕುದುರೆ ರೇಸ್ ಬೆಟ್ಟಿಂಗ್ ಹೆಚ್ಚಾಗಿ ಕೌಶಲ್ಯ ಮತ್ತು ಜ್ಞಾನದಿಂದ ನಡೆಸಲ್ಪಡುತ್ತದೆ, ಆದರೆ ಅದನ್ನು ಅಧಿಕೃತ ವೇದಿಕೆಗಳ ಮೂಲಕ ಮಾತ್ರ ನಡೆಸಬೇಕು" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
ಕರ್ನಾಟಕವು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಆನ್‌ಲೈನ್ ಜೂಜಾಟ ನಿಷೇಧ ಕಾಯಿದೆ (PROGA) ಅನ್ನು ಪ್ರಶ್ನಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಆನ್‌ಲೈನ್ ರೇಸಿಂಗ್ ಬೆಟ್ಟಿಂಗ್ ತಿದ್ದುಪಡಿಯನ್ನು ಕೈಗೊಳ್ಳುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.
ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ:
ಇನ್ನು ಈ ಮಸೂದೆಯು ಚಳಿಗಾಲದ ಅಧಿವೇಶನದಲ್ಲಿ ತೆಗೆದುಕೊಳ್ಳುವ 31 ಕ್ರಮಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಸಾಮಾಜಿಕ ಸುಧಾರಣೆಗಾಗಿ ಆನ್‌ಲೈನ್ ಬೆಟ್ಟಿಂಗ್ ಕುರಿತ ಆರ್ಥಿಕ ಮಸೂದೆಯ ಜೊತೆಗೆ, ಕರ್ನಾಟಕ ಸರ್ಕಾವು ಸಾಮಾಜಿಕ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವಾರು ಅಗತ್ಯ ಮಸೂದೆಗಳನ್ನು ಜಾರಿಗೆ ತರಲು ಸಿದ್ಧವಾಗಿದೆ.
ಅವುಗಳೆಂದರೆ:
ಕರ್ನಾಟಕ ತಪ್ಪು ಮಾಹಿತಿ ನಿಯಂತ್ರಣ ಮಸೂದೆ 2025
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ 2025
ಕರ್ನಾಟಕ ರೋಹಿತ್ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ 2025. ಈ ಮಸೂದೆಯು ಬಡ ಅಥವಾ ಹಿಂದುಳಿದ ವಿದ್ಯಾರ್ಥಿಗಳನ್ನು ಅನ್ಯಾಯವಾಗಿ ಶಿಕ್ಷಣ ಸಂಸ್ಥೆಗಳಿಂದ ಹೊರಹಾಕುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಕಾನೂನು ಮತ್ತು ಗೃಹ ಸಚಿವಾಲಯಗಳ ನಡುವೆ ಸುದೀರ್ಘ ಚರ್ಚೆಯ ನಂತರ ಈ ಮಸೂದೆಗಳು ಅಧಿಕೃತವಾಗಿ ಬರಲಿದೆ.
ಸುಪ್ರೀಂ ಕೋರ್ಟ್‌ನ ನಿರ್ಧಾರ:
ಇನ್ನು ಕುದುರೆ ರೇಸಿಂಗ್ ಅನ್ನು ಕೌಶಲ್ಯ ಮತ್ತು ಜ್ಞಾನದ ಕ್ರೀಡೆ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಆದ್ದರಿಂದ ಲೈಸೆನ್ಸ್ ಪಡೆದ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ನಡೆಸಲು ಅವಕಾಶ ನೀಡಲು ಶಾಸನ ರಚನೆ ಮಾಡುವಂತೆ ಹಣಕಾಸು ಇಲಾಖೆ ಸದ್ಯ ಪ್ರತಿಪಾದಿಸಿದೆ. ಇನ್ನು ಈ ಕ್ರಮದಿಂದ ರಾಜ್ಯದ ಖಜಾನೆಗೆ ಮತ್ತಷ್ಟು ಹಣ ತುಂಬಲಿದ್ದು, ಕರ್ನಾಟಕ ರೇಸ್ ಕೋರ್ಸ್ ಲೈಸೆನ್ಸಿಂಗ್ ಆಕ್ಟ್ 1952ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ಸಜ್ಜಾಗಿದೆ. ಅಲ್ಲದೇ ಈ ಕ್ರಮಕ್ಕಾಗಿ ಇತರ ರಾಜ್ಯಗಳ ಆನ್‌ಲೈನ್ ಬೆಟ್ಟಿಂಗ್ ಕ್ರಮಗಳನ್ನು ಉದಾಹರಣೆಯಾಗಿ ಸರ್ಕಾರ ನೀಡಿದೆ ಎನ್ನಲಾಗಿದೆ.


Click it and Unblock the Notifications