11 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ: ಡಿಸಿಎಂ ಡಿ.ಕೆ. ಶಿವಕುಮಾರ್

"ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ 11 ಸಾವಿರ ಕೋಟಿ ಮೊತ್ತದ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಜತೆಗೆ ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

"ರಾಜಸ್ಥಾನದ ಉದಯಪುರದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ 34 ಜಲಸಂಪನ್ಮೂಲ ಸಚಿವರು, 4-5 ಮುಖ್ಯಮಂತ್ರಿಗಳು, ಕೆಲವು ರಾಜ್ಯಗಳ ಉಪಮುಖ್ಯಮಂತ್ರಿಗಳು ಭಾಗವಹಿಸಿದ್ದರು. ನಮ್ಮ ರಾಜ್ಯದಿಂದ ನಾನು ಹಾಗೂ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭಾಗವಹಿಸಿದ್ದೆವು. ನಮ್ಮ ರಾಜ್ಯದ ನೀರಾವರಿ ಯೋಜನೆಗಳ ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದೆ. ಈ ವಿಚಾರವಾಗಿ ಜಲಶಕ್ತಿ ಸಚಿವರ ಬಳಿಯೂ ವೈಯಕ್ತಿಕವಾಗಿ ಈ ವಿಚಾರ ಪ್ರಸ್ತಾಪಿಸಿದ್ದೆವು. ನಂತರ ಕೇಂದ್ರ ಜಲಶಕ್ತಿ ಸಚಿವರು ನಿನ್ನೆ ಸಭೆ ಮಾಡಲು ಸಮಯ ನೀಡಿದ್ದರು. ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ರಾಜ್ಯದ ಎಲ್ಲಾ ಅಧಿಕಾರಿಗಳ ಸಭೆ ಮಾಡಿದೆವು" ಎಂದು ತಿಳಿಸಿದರು

11,000 ಕೋಟಿ ಮೊತ್ತದ ನೀರಾವರಿ ಯೋಜನೆ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ

ನವಲಿ ಅಣೆಕಟ್ಟು ವಿಚಾರವಾಗಿ ಆಂಧ್ರ ಸಿಎಂ ಜತೆ ಚರ್ಚೆ

ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 30 ಟಿಎಂಸಿ ನೀರು ನಷ್ಟವಾಗುತ್ತಿದೆ. ಹೀಗಾಗಿ ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ಮಾಡಲಾಯಿತು. ಅದನ್ನು ಕೇಂದ್ರ ಸಚಿವರ ಗಮನಕ್ಕೂ ತರಲಾಯಿತು. ಈ ಬಗ್ಗೆ ನೀವೆ ಕೂತು ಚರ್ಚೆ ಮಾಡಿ. ನೀವು ಒಮ್ಮತಕ್ಕೆ ಬಂದರೆ ನಮಗೂ ಒಪ್ಪಿಗೆ ಇದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಈ ವಿಚಾರವಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪ್ರತ್ಯೇಕವಾಗಿ ಕರೆ ಮಾಡಿ ಮಾರ್ಚ್ ಮೊದಲ ವಾರದಲ್ಲಿ ಚರ್ಚೆ ಮಾಡಲು ಸಮಯಾವಕಾಶ ನೀಡಿ ಎಂದು ಕೇಳಿದ್ದೇವೆ. ಈ ಯೋಜನೆಗೆ ನಮ್ಮ ತಾಂತ್ರಿಕ ಸಲಹಾ ಸಮಿತಿಯು ಪರ್ಯಾಯ ಮಾರ್ಗವನ್ನು ಸೂಚಿಸಿದ್ದು, ಇದನ್ನು ಉಭಯ ರಾಜ್ಯಗಳ ಜತೆ ಚರ್ಚೆ ಮಾಡದೇ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ" ಎಂದು ತಿಳಿಸಿದರು.

"ಈ ಹಿಂದೆ ಹೂಳೆತ್ತಲು ಅನೇಕ ಪ್ರಸ್ತಾವನೆಗಳು ಬಂದಿದ್ದವು. 24-30 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳನ್ನು ಎತ್ತಿ ಎಲ್ಲಿ ಹಾಕಬೇಕು? ಇದಕ್ಕೆ ತಗಲುವ ವೆಚ್ಚ ಗಮನಿಸಿ ತಾಂತ್ರಿಕ ಸಮಿತಿ ಈ ಪ್ರಸ್ತಾವನೆ ನೀಡಿದೆ. ಆಂಧ್ರ ಪ್ರದೇಶ ಸಿಎಂ ಮಾರ್ಚ್ ಮೊದಲ ವಾರದಲ್ಲಿ ಸಭೆಗೆ ಕಾಲಾವಕಾಶ ನೀಡಲಿದ್ದು, ಅವರು ಸಮಯ ನಿಗದಿ ಮಾಡಿದ ಬಳಿಕ ನಾನು ಹಾಗೂ ಇಡೀ ತಂಡ ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದೇವೆ" ಎಂದರು.

ಮೇಕೆದಾಟು ಯೋಜನೆ ಬಗ್ಗೆ ನಿಲುವು ಕೇಳಿದ್ದೇವೆ

"ಈ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವೇನು ಎಂದು ತಿಳಿಸುವಂತೆ ಕೇಳಿದ್ದೇವೆ. ಈ ವಿಚಾರದಲ್ಲಿ ಸಮಯವ್ಯರ್ಥ ಮಾಡುವುದು ಬೇಡ. ಈ ಯೋಜನೆ ಮಾಡಲು ನೀವು ಬದ್ಧರಾಗಿದ್ದೀರಾ ಅಥವಾ ಇಲ್ಲವೇ? ಕೇಂದ್ರ ಜಲಶಕ್ತಿ ಸಚಿವಾಲಯ ನ್ಯಾಯದ ಸ್ಥಾನದಲ್ಲಿ ಕೂತಿದ್ದು, ಈ ಯೋಜನೆ ಬಗ್ಗೆ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದ್ದೇವೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗವಾಗಬೇಕು. ಇನ್ನು ಪೆನ್ನಾರ್ ನದಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ತಿಕ್ಕಾಟವಿದ್ದು, ಸಂಧಾನದ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದೇ ಎಂದು ಕೇಳಿದ್ದೇವೆ. ಕಳೆದ ವರ್ಷ 300 ಟಿಎಂಸಿ, ಅದಕ್ಕೂ ಹಿಂದಿನ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಸೇರಿದೆ. ಇದನ್ನು ನಾವು ಬಳಸಿಕೊಳ್ಳಬೇಕು" ಎಂದು ತಿಳಿಸಿದರು.

ಮಾ.18ಕ್ಕೆ ಮತ್ತೊಮ್ಮೆ ಜಲಶಕ್ತಿ ಸಚಿವರೊಂದಿಗೆ ಸಭೆ

"ಉಳಿದಂತೆ ನದಿ ಜೋಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ಮುಂದೆ ಅನೇಕ ಪ್ರಸ್ತಾಪಗಳಿದ್ದು, ನಾವು ನಮ್ಮ ಪಾಲಿನ ನೀರಿನ ಬಗ್ಗೆ ಪ್ರಸ್ತಾವನೆ ಮಾಡಿದ್ದೇವೆ. ಇದರ ಜತೆಗೆ ರಾಜ್ಯದ ಆಣೆಕಟ್ಟುಗಳ ಗೇಟ್ ಬದಲಾವಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ನೇಮಿಸಲಾಗಿದೆ. ಇನ್ನು ಕಾಲುವೆಗಳ ನೀರು ಕೊನೆ ಭಾಗದವರೆಗೂ ತಲುಪಲು ಅಗತ್ಯ ಕ್ರಮ ಕೈಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಯೋಜನೆ ರೂಪಿಸಲಾಗಿದೆ.

ಮಾರ್ಚ್ 18ರ ಒಳಗಾಗಿ ಮತ್ತೆ ಭೇಟಿ ಮಾಡಿ ಸಭೆ ನಡೆಸಲು ಕೇಂದ್ರ ಸಚಿವರ ಬಳಿ ಕಾಲಾವಕಾಶ ಪಡೆಯಲಾಗಿದೆ. ಜಲಶಕ್ತಿ ಇಲಾಖೆ ರಾಜ್ಯ ಸಚಿವರಾದ ಸೋಮಣ್ಣ ಅವರ ಅಭಿಪ್ರಾಯವನ್ನು ಪಡೆದು ನಾವು ಸಭೆ ಮಾಡಿದ್ದೇವೆ. ನಮ್ಮ ರಾಜ್ಯದ ಹಿತಕ್ಕೆ ಪರವಾಗಿ ಅವರು ಚರ್ಚೆ ಮಾಡಿದ್ದಾರೆ" ಎಂದರು.

ಇನ್ನು ಸಣ್ಣ ನೀರಾವರಿ ಇಲಾಖೆಯ ಯೋಜನೆಗೆ ಸಂಬಂಧಿಸಿದಂತೆ ನಮ್ಮ ಸಚಿವರಾದ ಬೋಸರಾಜು ಅವರು ಚರ್ಚೆ ಮಾಡಿದ್ದು, 3 ಸಾವಿರ ಕೋಟಿಯಷ್ಟು ಅನುದಾನ ಕೋರಿದ್ದಾರೆ. ನೀರಾವರಿಗೆ ಹೆಚ್ಚು ಅವಕಾಶವಿರುವ ರಾಜ್ಯಗಳ ಪೈಕಿ ರಾಜಸ್ಥಾನದ ನಂತರ ಕರ್ನಾಟಕವಿದೆ. ನಮ್ಮಲ್ಲಿ ಒಣಭೂಮಿ ಹೆಚ್ಚಾಗಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅವಕಾಶವಿದೆ. ಕೇಂದ್ರ ಜಲಶಕ್ತಿ ಸಚಿವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+