ವಿಶ್ವದಲ್ಲೇ ಈ ಸಾಧನೆ ಮಾಡಿದ ಮೊದಲ ದೇಶ ಎಂಬ ಅಗ್ಗಳಿಕೆ ಲಕ್ಸಂಬರ್ಗ್ ಪಾಲಾಗಿದೆ. ಏನು ಆ ಸಾಧನೆ ಗೊತ್ತೆ? ಶನಿವಾರದಂದು ಸರ್ಕಾರಿ ಸ್ವಾಮ್ಯದ ರೈಲು, ಟ್ರಾಮ್ಸ್ ಮತ್ತು ಬಸ್ ಗಳ ಪ್ರಯಾಣ ದರವನ್ನು ರದ್ದು ಮಾಡಿದೆ. ರಸ್ತೆ ದಟ್ಟಣೆ, ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಯುರೋಪ್ ಖಂಡದ ಸಣ್ಣ ಮತ್ತು ಶ್ರೀಮಂತ ದೇಶ ಲಕ್ಸಂಬರ್ಗ್ ನಲ್ಲಿ ಸರ್ಕಾರಿ ಸಾರಿಗೆ ಎಲ್ಲವೂ ಉಚಿತವಾಗಲಿದೆ. "ಕಡಿಮೆ ಅಥವಾ ಕನಿಷ್ಠ ಕೂಲಿ ಪಡೆಯುವವರಿಗೆ ಈಗಿನ ಘೋಷಣೆಯಿಂದ ಅನುಕೂಲವಾಗಲಿದೆ" ಎಂದು ಸಾರಿಗೆ ಸಚಿವ ಫ್ರಾಂಕೋಯಿಸ್ ಬೌಷ್ ತಿಳಿಸಿದ್ದಾರೆ.
ಸಾರಿಗೆ ಸಮಸ್ಯೆ ನಿವಾರಿಸುವುದು ಈ ನಿರ್ಧಾರದ ಹಿಂದಿನ ಮುಖ್ಯ ಕಾರಣವಾದರೆ, ಪರಿಸರದ ಸಮಸ್ಯೆಗಳನ್ನು ನಿವಾರಿಸುವುದು ಮತ್ತೊಂದು ಕಾರಣವಾಗಿದೆ. ಲಕ್ಸಂಬರ್ಗ್ ನಲ್ಲಿ 6 ಲಕ್ಷ ಜನ ಮೂಲ ನಿವಾಸಿಗಳಿದ್ದಾರೆ. ಆದರೆ ಪ್ರತಿ ನಿತ್ಯ ಕೆಲಸದ ಸಲುವಾಗಿ ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಫ್ರಾನ್ಸ್ ನಿಂದ 2,14,000 ಮಂದಿ ಲಕ್ಸಂಬರ್ಗ್ ಗೆ ಬರುತ್ತಾರೆ.

ಆ ಕಾರಣಕ್ಕೆ ಭಾರೀ ಸಂಚಾರ ದಟ್ಟಣೆ ಆಗುತ್ತದೆ. ಕೆಲಸದ ಸಲುವಾಗಿ ಬರುವವರು ತಮ್ಮ ಸಂಚಾರಕ್ಕೆ ಬಹುತೇಕ ಕಾರನ್ನು ಬಳಸುತ್ತಾರೆ. ಸಂಚಾರಿಗಳ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ 2018ರಿಂದ 28ರ ಮಧ್ಯೆ ರೈಲ್ವೆಗಾಗಿಯೇ 3.9 ಬಿಲಿಯನ್ ಯುರೋ ಹೂಡಿಕೆ ಮಾಡಲು ನಿರ್ಧರಿಸಿದೆ. ಇದರ ಜತೆಗೆ ಬಸ್ ಜಾಲವನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ, ಗಡಿ ಭಾಗದಲ್ಲಿ ಪಾರ್ಕ್ ಅಂಡ್ ರೈಡ್ ಪ್ರದೇಶಗಳನ್ನು ರೂಪಿಸಲು ತೀರ್ಮಾನಿಸಿದೆ.


Click it and Unblock the Notifications