ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿಗಾಲ (Winter Season) ಆರಂಭವಾಗಿದೆ. ಆ ನಡುವೆಯೂ ಅಲ್ಲಲ್ಲಿ ಭಾರೀ ಮಳೆಯಾಗುತ್ತಿದೆ. ಗುರುವಾರ (ನ.13) ಸಂಜೆ ವೇಳೆಗೆ ದಕ್ಷಿಣ ಕನ್ನಡ, ಉಡುಪಿ ಸೇರಿ ಹಲವು ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮೊದಲೇ ರಾಜ್ಯದಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ ಮುನ್ಸೂಚನೆ (Rain Alert) ನೀಡಿತ್ತು. ಆದ್ರೆ ಇದೀಗ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ, ಮತ್ತೆ ಆಗಮನವಾಗಿದೆ.

ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಹೆಚ್ಚಾಗುವ ನಿರೀಕ್ಷೆಯಿದೆ. ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಗಂಟೆಗೆ 40 ರಿಂದ 60 ಕಿ.ಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ವಿವರಿಸಿದೆ.
ಈ ಜಿಲ್ಲೆಗಳಲ್ಲೂ ಭಾರೀ ಮಳೆ:
ಕಲಬುರಗಿ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಳೆ ಅಲರ್ಟ್ ನೀಡಿದೆ.
ಬೆಂಗಳೂರಿನಲ್ಲೂ ಮಳೆ ಎಚ್ಚರಿಕೆ
ಇನ್ನು ಕರಾವಳಿ ಜಿಲ್ಲೆಗಳು ಮಾತ್ರವಲ್ಲ ರಾಜಧಾನಿ ಬೆಂಗಳೂರಿಗೂ ಭಾರತೀಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆಯನ್ನು ನೀಡಿದೆ. ಆದ್ದರಿಂದ ಮುಂದಿನ ಕೆಲವು ದಿನಗಳವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಮಳೆ ಬರುವ ಕಾರಣ ಬೆಂಗಳೂರಿನಲ್ಲಿ ತಾಪಮಾನದಲ್ಲಿ ಇಳಿಕೆಯಾಗಲಿದ್ದು, ಎರಡದಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆ ಕಾಣಲಿದೆ.
ನವೆಂಬರ್ 17 ರಿಂದ ಮಳೆಯಾರ್ಭಟ ಶುರು!
ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 17 ರಿಂದ ಮಳೆ ಆರಂಭವಾಗಲಿದೆ ಎಂದು ಮೊದಲೇ ಮುನ್ಸೂಚನೆ ನೀಡಿತ್ತು. ಆದ್ರೆ ಅದಕ್ಕೂ ಮುನ್ನವೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆರಾಯನ ಆಗಮನವಾಗಿದೆ. ಸೂಚನೆ ಪ್ರಕಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ನವೆಂಬರ್ 17 ರಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಕೆಲವು ದಿನಗಳ ನಂತರ ಮಳೆ ಬೀಳುವ ಸಾಧ್ಯತೆ ಇರುವುದರಿಂದ, ಯಾವ ರೀತಿ ಮಳೆ ಬೀಳಬಹುದು ಎಂದು ಅಂದಾಜಿಸಲು ಸಾಧ್ಯವಿಲ್ಲ. ಆದ್ರೆ ಎಲ್ಲಾದರೂ ಟ್ರಾವೆಲ್ ಮಾಡಬೇಕೆಂದು ಪ್ಲಾನ್ ಮಾಡಿದ್ದವರು ಮೊದಲೇ ಹವಾಮಾನ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಭಾರತೀಯ ಹವಾಮಾನ ಇಲಾಖೆಯ ವೆಬ್‌ಸೈಟ್ ಅಥವಾ ಯಾವುದೇ ಮಾಧ್ಯಮ ವರದಿಯನ್ನು ನೋಡಿಕೊಂಡು ಟ್ರಿಪ್, ಟ್ರಾವೆಲ್ ಪ್ಲಾನ್ ಮಾಡಿ. ಇನ್ನು ಬೆಂಗಳೂರಿನಂತಹ ರಸ್ತೆಗಳು ನೀರಿನಿಂದ ಜಲಾವೃತವಾಗುವ ಸಾಧ್ಯತೆ ಇರುವುದರಿಂದ ಚಾಲಕರು ಎಚ್ಚರಿಕೆ ವಹಿಸುವುದು ಮುಖ್ಯ.


Click it and Unblock the Notifications