ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಚಳಿಗಾಲ (Winter) ಶುರುವಾಗಿದೆ. ಆದ್ರೆ ಇನ್ನೂ ವರುಣಾರ್ಭಟ ನಿಂತಿಲ್ಲ. ಬೆಂಗಳೂರಿನಲ್ಲಿ (Bengaluru) ಅಲ್ಲಲ್ಲಿ ನಿನ್ನೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಇದೀಗ ರಾಜ್ಯದ ಹಲವು ಕಡೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲೆಯಲ್ಲಿ ಉಂಟಾಗುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ (Karnataka) ಮಳೆ ಪರಿಣಾಮ ಬೀರಲಿದೆ. ಆದ್ದರಿಂದ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ಆದರೆ ಉತ್ತರ ಒಳನಾಡಿನಲ್ಲಿ ಒಣ ಹವೆಯ ವಾತಾವರಣ ಇರಲಿದ್ದು, ಬೆಂಗಳೂರಿನಲ್ಲಿ ಮಾತ್ರ ವಾರವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.
ಈ ಜಿಲ್ಲೆಗಳಲ್ಲಿ ಭಾರೀ ಮಳೆ!
ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮುಂದಿನ ದಿನಗಳಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಇನ್ನು ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಮೈಸೂರು, ತುಮಕೂರು, ರಾಮನಗರ, ಮಂಡ್ಯ, ಚಿಕ್ಕಮಗಳೂ, ಹಾಸನ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಲ್ಲಿ ಮಳೆ ಇಲ್ಲ!
ಉತ್ತರ ಒಳನಾಡಿನ, ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯನಗರ, ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನ ಹವಾಮಾನ ವರದಿ
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ವೇಳೆಗೆ ಲಘು ಮಳೆಯಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮಳಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಆದರೆ ತಾಪಮಾನ ನೋಡುವುದಾದರೆ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಲಿಯಸ್ ಇರಲಿದೆ. ಆದರೂ ಅಲ್ಲಲ್ಲಿ ಸಾಧಾರಣ ಮಳೆಯಾಗಬಹುದು ಎಂದು ವರದಿಯಾಗಿದೆ.
ಕೇರಳ, ತಮಿಳುನಾಡಿನಲ್ಲೂ ಮಳೆ ಅಲರ್ಟ್
ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ ಸೇರಿ ದಕ್ಷಿಣ ರಾಜ್ಯಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಹಗುರದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಮಳೆಯ ಜೊತೆಗೆ ಕರಾವಳಿ ಪ್ರದೇಶಗಳಲ್ಲೂ ಗುಡುಗು ಸಹಿತ ಮಳೆ ಮತ್ತು ಗಾಳಿ ಬೀಸುವ ಸಾಧ್ಯತೆ ಇದೆ. ಅಲ್ಲದೇ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮಣಿಪುರ ಹಾಗೂ ಮಿಜೋರಾಂನಂತಹ ಈಶಾನ್ಯ ರಾಜ್ಯಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಅಲ್ಲದೇ ಚಳಿ ಕೂಡಾ ಆಯಾ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದ್ದು, ಈ ಬಾರಿ ಚಳಿ ಕೂಡಾ ವಿಪರೀತವಾಗಿ ಇರಲಿದೆ ಎಂದು ಸೂಚನೆ ನೀಡಲಾಗಿದೆ.


Click it and Unblock the Notifications