ಅಂತೂ 2025 ನೇ ವರ್ಷಕ್ಕೆ ವಿದಾಯ ಹೇಳಿ, 2026ನೇ ವರ್ಷವನ್ನೇ ಸ್ವಾಗತಿಸಾಯಿತು. ಇನ್ನೇನು ಇಂದಿನಿಂದ ಹೊಸ ಕ್ಯಾಲೆಂಡರ್ ಜೊತೆಗೆ ಹೊಸ ಉತ್ಸಾಹದಿಂದ ಕೆಲಸ ಮಾಡುವ ಸಮಯ. ಕಳೆದೊಂದು ತಿಂಗಳಿಂದ ದೇಶದೆಲ್ಲೆಡೆ ಭಾರೀ ಚಳಿಯಾಗುತ್ತಿದೆ. ಇದೀಗ ಇಂದಿನಿಂದ ಹೊಸ ವರ್ಷ (New Year). ಇನ್ನಾದರೂ ಚಳಿ ಕಡಿಮೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಇದೀಗ ಹವಾಮಾನ ಇಲಾಖೆ ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿ ಮಾಡಿದೆ. ಅಲ್ಲದೇ ಡಿಸೆಂಬರ್ 31ರಂದು ಬೆಂಗಳೂರು ಸೇರಿ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಇಂದು (ಜನವರಿ 1) ಮೋಡಕವಿದ ವಾತಾವರಣ ಇರಲಿದೆ ಎಂದು ಹೇಳಿದೆ.

ಹೌದು, ಬೆಂಗಳೂರಲ್ಲಿ ಡಿಸೆಂಬರ್ 31 ರ ರಾತ್ರಿ, ಹೊಸ ವರ್ಷ ಆಗಮನವಾಗುತ್ತಿದ್ದಂತೆ ಮಳೆಯಾಗಿದೆ. ಅದರಲ್ಲೂ ಯಲಹಂಕದಲ್ಲಿ 30 ನಿಮಿಷಕ್ಕೂ ಅಧಿಕ ಮಳೆ ಸುರಿದಿದೆ ಎನ್ನಲಾಗಿದೆ. ಇದೀಗ ಹೊಸ ವರ್ಷದ ಸಂಭ್ರಮದಲ್ಲಿರುವವರಿಗೆ ಇಂದು ಸಂಜೆ ಅಥವಾ ರಾತ್ರಿ ಮತ್ತೆ ಮಳೆಯಾಗಬಹುದು ಎಂದು ಸೂಚನೆ ನೀಡಲಾಗಿದೆ.
ಮುಂದುವರೆದ ಚಳಿ!
2025ರ ಅಂತ್ಯದಂತೆ 2026 ರಲ್ಲೂ ಚಳಿ ಮುಂದುವರೆಯುತ್ತದೆ. ಅದರಲ್ಲೂ ಬೆಂಗಳೂರು ಇಂದು ತಂಪಾಗಿರಲಿದ್ದು, ಕರ್ನಾಟಕ ಕೆಲ ಭಾಗಗಳಲ್ಲಿ ತಾಪಮಾನ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕೆಲವು ನಗರಗಳಲ್ಲಿ ಇಂದು (ಜನವರಿ 1) ಬೆಳ್ಳಂಬೆಳ್ಳಗೆಯೇ ಮಂಜು ಕವಿದ ವಾತಾವರಣದೊಂದಿಗೆ ದಿನ ಆರಂಭವಾಗಿದೆ.
ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ಮತ್ತು 19 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಇನ್ನು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಶೀತ ಅಲೆಯ ಅಬ್ಬರ!
ಬೀದರ್, ವಿಜಯಪುರ, ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತ ಅಲೆಯ ಪರಿಸ್ಥಿತಿ ಎದುರಾಗಲಿದ್ದು, ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡಿನಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಹವಾಮಾನ
ಮುಂದಿನ ಕೆಲವು ದಿನಗಳವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಅಲ್ಲದೇ ಹಗಲಿನಲ್ಲಿ ಕೆಲವೊಮ್ಮೆ ಹೆಚ್ಚಿನ ತಾಪಮಾನವಿದ್ದರೂ, ರಾತ್ರಿ ಮತ್ತು ಮುಂಜಾನೆ ಮಾತ್ರ ಚಳಿ ಹೆಚ್ಚಾಗುತ್ತದೆ ಎಂದು ವರದಿಯಾಗಿದೆ.
ಸಾರ್ವಜನಿಕರಿಗೆ ಸಲಹೆ
ಆಯಾ ಪ್ರದೇಶಗಳ ವಾತಾವರಣಕ್ಕೆ ತಕ್ಕಂತೆ ಚಳಿ ಮುಂದುವರೆಯುತ್ತದೆ. ಆದ್ರೆ ಈ ಸಂದರ್ಭದಲ್ಲಿ ಜನರೂ ಕೂಡಾ ಎಚ್ಚರಿಕೆಯಿಂದ ಇರಬೇಕು. ಹವಾಮಾನ ಬದಲಾದಂತೆ ಆರೋಗ್ಯದಲ್ಲೂ ಏರುಪೇರಾಗೋದು ಸಾಮಾನ್ಯ. ಆದ್ದರಿಂ ಚಳಿ ಸಂದರ್ಭದಲ್ಲಿ ಆದಷ್ಟು ಬೆಚ್ಚಗಿನ ಮತ್ತು ಆರೋಗ್ಯಯುತ ಆಹಾರವನ್ನೇ ಸೇವಿಸಿ. ಬೆಚ್ಚಗಿನ ಬಟ್ಟೆ ಧರಿಸಿ. ಬಿಸಿ ನೀರು ಕುಡಿಯುತ್ತಿರಿ. ಆದ್ದರಿಂದ ಚಳಿ ಹೆಚ್ಚಾದಂತೆ ಕೆಲವೊಮ್ಮೆ ಜ್ವರ, ಶೀತ, ಕೆಮ್ಮು ಬರುವ ಸಾಧ್ಯತೆಗಳಿರುತ್ತದೆ. ಅದಕ್ಕಾಗಿ ಅಗತ್ಯ ಕ್ರಮ ತೆಗೆದುಕೊಂಡರೆ ಉತ್ತಮ.


Click it and Unblock the Notifications