ಕರ್ನಾಟಕ (Karnataka) ರಾಜ್ಯದಲ್ಲಿ ಕಳೆದ ತಿಂಗಳಿಡೀ ಚಳಿ ವಿಪರೀತವಾಗಿತ್ತು. ಅತ್ತ ಬಿಸಿಲೂ ಇಲ್ಲದೆ, ಮಳೆಯೂ ಇಲ್ಲದೆ ಜನ ಚಳಿಯಿಂದ ಗಢ ಗಢ ನಡುಗುತ್ತಿದ್ದರು. ಆದರೆ ಇದೀಗ ಫೆಬ್ರವರಿ ಅಂತ್ಯವಾಗುತ್ತಿದ್ದಂತೆ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ದಿನ ಹೋದಂತೆ ತಾಪಮಾನ ಏರಿಕೆಯಾಗುತ್ತಿದ್ದು, ಜನರೂ ಕಂಗಾಲಾಗಿದ್ದಾರೆ. ಆದ್ರೆ ಈ ವಾರದಲ್ಲಿ ಒಂದೆರಡು ದಿನ ಅಲ್ಲಲ್ಲಿ ಮಳೆಯಾಗಿದ್ದು (Rain), ಇಂದೂ (ಫೆ.28) ಕೂಡಾ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಪಮಾನ ಏರಿಕೆಯ ನಡುವೆಯೂ ಹಲವು ಕಡೆಗಳಲ್ಲಿ ಮಳೆಯಾಗಿರುವುದು ಆಶ್ಚರ್ಯಕರ ಸಂಗತಿ. ನಿರೀಕ್ಷೆಯೂ ಮಾಡದ ಸಮಯದಲ್ಲಿ ಮಳೆ ಬಂದಿದ್ದು, ಇದೀಗ ಇಂದೂ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಇಂದು ರಾಜ್ಯದಲ್ಲಿ ಸಣ್ಣ ಮಟ್ಟಿಗೆ ವರುಣಾರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹಲವೆಡೆ ಮಳೆಯಾಗಲಿದೆ, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾದರೆ, ಇನ್ನೂ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಎಲ್ಲೆಲ್ಲಿ ಮಳೆ?
ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ಮಳೆ ಅಲರ್ಟ್ ನೀಡಲಾಗಿದ್ದು, ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಸೂಚನೆ ನೀಡಲಾಗಿದೆ. ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಅಬ್ಬರಿಸುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಅಲ್ಲದೇ ರಾಜ್ಯದಲ್ಲಿ ಶುಷ್ಕ ಹವಾಮಾನ ಇರಲಿದೆ ಎನ್ನಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆಯ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಇಂದು ಕನಿಷ್ಠ ತಾಪಮಾನ ಸುಮಾರು 19-20 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 32-33 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಸೂಚನೆ ನೀಡಲಾಗಿದೆ. ಮುಂಜಾನೆ ಸಮಯದಲ್ಲಿ ಸ್ವಲ್ಪ ಮಂಜು ಆವರಿಸುವ ಸಾಧ್ಯತೆ ಇದೆ.
ಅದೇ ರೀತಿ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಅಂದರೆ, ಮೈಸೂರು, ಚಿಕ್ಕಮಗಳೂರು, ಹಾಸನ, ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ ಮತ್ತು ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುವ ನಿರೀಕ್ಷೆಯಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಮಾತ್ರ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪ್ರಭಾವದಿಂದ ಗುಡುಗು-ಮಿಂಚು ಸಹಿತ ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರಿಂದಾಗಿ ಯೆಲ್ಲೋ ಅಲರ್ಟ್ ಕೂಡಾ ನೀಡಲಾಗಿದೆ.
ಫೆಬ್ರವರಿ ಅಂತ್ಯದಲ್ಲಿ ತಾಪಮಾನದಲ್ಲಿ ಏರಿಕೆ!
ಫೆಬ್ರವರಿ ಅಂತ್ಯ, ಮಾರ್ಚ್ ಮೊದಲ ವಾರದಲ್ಲಿ ತಾಪಮಾನ ಮತ್ತೆ ಹೆಚ್ಚಾಗುವ ನಿರೀಕ್ಷೆಯಿಂದ ಮಾರ್ಚ್‌ನಿಂದ ಬೇಸಿಗೆ ತೀವ್ರತೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜನರೂ ಕೂಡಾ ಬಿಸಿಲಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಅಗತ್ಯ ಕೆಲಸಗಳಿದ್ದರೆ ಮಾತ್ರ ಹೊರಹೋಗಿ, ಇಲ್ಲದಿದ್ದರೆ ಬೆಳಿಗ್ಗೆ ಅಥವಾ ಸಂಜೆ ವೇಳೆ ಹೊರಾಂಗಣ ಕೆಲಸಗಳನ್ನು ಮಾಡಿಕೊಂಡರೆ ಉತ್ತಮ.


Click it and Unblock the Notifications