ಕರ್ನಾಟಕ (Karnataka) ಮಾತ್ರವಲ್ಲದೇ ದೇಶದ ಬಹುತೇಕ ರಾಜ್ಯಗಳಲ್ಲಿ ನಿರಂತರ ಮಳೆ ಸುರಿಯುತ್ತಲೇ ಇದೆ. ಅತ್ತ ದೀಪಾವಳಿ ಹಬ್ಬವನ್ನೂ ಸರಿಯಾಗಿ ಆಚರಿಸಲೂ ಆಗುತ್ತಿಲ್ಲ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಾತ್ರಿಯಾದ್ರೆ ಸಾಕು ಮಳೆರಾಯ ಇಳಿದಾಯ್ತು. ಈ ಸಮಯದಲ್ಲಿ ದೀಪ ಹಚ್ಚೋಕು ಆಗಲ್ಲ, ಪಟಾಕಿ ಸಿಡಿಸೋಕು ಆಗಲ್ಲ. ಇದೀಗ ಹವಾಮಾನ ಇಲಾಖೆ (IMD) ಕರ್ನಾಟಕದಲ್ಲಿ ಮಳೆ ಅಲರ್ಟ್ ಘೋಷಣೆ ಮಾಡಿದೆ. ಕಳೆದೊಂದು ವಾರದಿಂದ ವರುಣಾರ್ಭಟ ಜೋರಾಗಿದೆ. ಈ ಮಧ್ಯೆ ಮುಂದಿನ ವಾರವಿಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸಲಿದೆ (Rain Alert) ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಕರ್ನಾಟಕದಲ್ಲಿ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ರೆ, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ಈ ಜಿಲ್ಲೆಗಳಲ್ಲಿ ಅಕ್ಟೋಬರ್ 29ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್!
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಅದೇ ರೀತಿ ಶಿವಮೊಗ್ಗ, ಮೈಸೂರು, ದಾವಣಗೆರೆ, ವಿಜಯನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದಣೆ ಮಾಡಲಾಗಿದೆ.
ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಭಾರತ ಹವಾಮಾನ ಇಲಾಖೆ (IMD)ಯ ಮುನ್ಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ನೈಋತ್ಯ ಮುಂಗಾರುವಿನ ಪ್ರಭಾವದಿಂದಾಗಿ ಅಕ್ಟೋಬರ್ 23ರಿಂದ 29 ವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಪರಿಣಾಮ ನಗರ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದ್ದು, ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಈ ತಿಂಗಳು ಸರಾಸರಿಯಾಗಿ 205 ಮಿ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಇದು ಐತಿಹಾಸಿಕವಾಗಿ ಎರಡನೇ ಅತಿ ಹೆಚ್ಚು ಮಳೆಯ ತಿಂಗಳಾಗಲಿದೆ ಎಂದು ವರದಿಯಾಗಿದೆ.
ಇನ್ನು ಬಳ್ಳಾರಿ, ಬೆಂಗಳೂರು ಗ್ರಾಮಾಂತರ/ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ್, ಕೊಡಗು, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಉತ್ತರ ಮತ್ತು ಮಧ್ಯ ಕರ್ನಾಟಕ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ ಮುಂತಾದ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಟ್ರಾಫಿಕ್ ಸಮಸ್ಯೆಗಳು ಉಂಟಾಗಲಿವೆ ಎಂದು ವರದಿಯಾಗಿದೆ.
ಜನರಿಗೆ ಸಲಹೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಮತ್ತು ಐಎಂಡಿ ಸಲಹೆಯಂತೆ, ಮಳೆಯ ಸಮಯದಲ್ಲಿ ವಾಹನ ಚಾಲನೆ ಮಾಡುವುದನ್ನು ತಪ್ಪಿಸಿ, ವಿದ್ಯುತ್ ತಂತಿಗಳಿಂದ ದೂರವಿರಿ. ಹೆಚ್ಚಿನ ಮಾಹಿತಿಗಾಗಿ ವರುಣ ಮಿತ್ರ ಹೆಲ್ಪ್‌ಲೈನ್ 9243345433 ಸಂಪರ್ಕಿಸಿ ಎಂದು ಸಲಹೆ ನೀಡಲಾಗಿದೆ.
ಈ ಮಳೆಯಿಂದಾಗಿ ರಾಜ್ಯದಲ್ಲಿ ಕೃಷಿ ಮತ್ತು ಪರಿಸರಕ್ಕೆ ಉತ್ತಮ ಪ್ರಯೋಜನವಾಗುತ್ತಿದ್ದರೂ, ಅತಿಯಾದ ಮಳೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗರೂಕರಾಗಿರಿ ಎಂದು ಸಲಹೆ ನೀಡಲಾಗಿದೆ.


Click it and Unblock the Notifications