ಬೆಂಗಳೂರು, ಸೆಪ್ಟೆಂಬರ್ 26: ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಹಂತ ಹಂತವಾಗಿ ರಾಮನಗರಕ್ಕೆ ಸ್ಥಳಾಂತರಿಸಲು ಮತ್ತು ಕನಕಪುರ ಮೆಡಿಕಲ್ ಕಾಲೇಜಿಗೆ ಮೂಲಸೌಕರ್ಯವನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಇದೇ ಸಂಬಂಧ ಎನ್ ಎಮ್ ಸಿ (ನ್ಯಾಷನಲ್ ಮೆಡಿಕಲ್ ಕಮಿಷನ್)ಗೆ ಮರು ಅರ್ಜಿ ಸಲ್ಲಿಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಹಾಗೂ ಕನಕಪುರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಯ ಕುರಿತಂತೆ ವಿಧಾನಸೌಧದಲ್ಲಿ ಡಿಸಿಎಂ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ವಸತಿ ಸಚಿವ ಜಮೀರ್ ಅಹ್ಮದ್ ಮತ್ತು ಉಪಕುಲಪತಿ ಹಾಗೂ ಶಾಸಕ ಶಿವಲಿಂಗೇಗೌಡ ಅವರೊಂದಿಗೆ ಸಭೆ ನಡೆಸಿದ್ದರು.

ಸಭೆಯ ನಂತರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಡಿಕೆಶಿಯವರು, "ರಾಮನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂ ಸ್ವಾಧೀನ ಸಮಸ್ಯೆ ಪರಿಹಾರ ಪಡೆಯುವ ಕುರಿತು ಪ್ರಯತ್ನ ಮಾಡಲಾಗುತ್ತಿದೆ. ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ವೈದ್ಯಕೀಯ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯನ್ನು ರಾಮನಗರಕ್ಕೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಹಿಂದೆಯೇ ಸರ್ಕಾರದ ಆದೇಶ ಹೊರಡಿಸಲಾಗಿದ್ದು, ಇದು ನಿಧಾನವಾಗಿ ಹಂತ ಹಂತವಾಗಿ ಸ್ಥಳಾಂತರವಾಗುವುದು" ಎಂದು ಹೇಳಿದರು.
"ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಗೃಹ ಮಂಡಲಿಯಿಂದ ಮಣ್ಣು ಪಡೆದು ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಆದರೆ, ಕನಕಪುರದಲ್ಲಿ ಮೂಲಸೌಕರ್ಯ ಇಲ್ಲ ಎಂದು ಎನ್ ಎಮ್ ಸಿ ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ದರಿಂದ, ಮೂಲಸೌಕರ್ಯವನ್ನು ಹೆಚ್ಚಿಸಿ ಪುನಃ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ" ಎಂದರು.
"ಹಿಂದೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಟೆಂಡರ್ ಕರೆದು ಭೂಮಿ ಪೂಜೆ ಮಾಡಲಾಗಿತ್ತು, ಆದರೆ ನಂತರ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಾಜಿ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಆ ಮೆಡಿಕಲ್ ಕಾಲೇಜು ಸ್ಥಳಾಂತರಿಸಿದರು. ಆಗ ₹450 ಕೋಟಿ ಇದ್ದ ಇದರ ವೆಚ್ಚವು ₹850 ಕೋಟಿಗೆ ಏರಿಕೆಯಾಗಿದೆ.
ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದೇವೆ ಮತ್ತು ಹಂತ ಹಂತವಾಗಿ ಇದನ್ನು ಪೂರ್ಣಗೊಳಿಸುತ್ತೇವೆ. ಕಾಲೇಜು ನಿರ್ಮಾಣಕ್ಕೆ ಅನುಮತಿ ನೀಡುವಂತೆ ಮರು ಅರ್ಜಿ ಸಲ್ಲಿಸುತ್ತೇವೆ. ರಾಮನಗರದ ಕಟ್ಟಡ ಕಾಮಗಾರಿಗಾಗಿ ₹600 ಕೋಟಿ ಬಿಡುಗಡೆ ಮಾಡಲಾಗಿದೆ ಮತ್ತು ಕಾಮಗಾರಿ ಸುಗಮವಾಗಿ ಸಾಗುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ" ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯವನ್ನು ಯಾವಾಗ ಸ್ಥಳಾಂತರಿಸಲಾಗುವುದು ಎಂದು ಕೇಳಿದಾಗ, "ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ರಾಮನಗರದಲ್ಲಿ ನಿರ್ಮಾಣ ಮಾಡಲು 2008ರಲ್ಲಿ ಸರ್ಕಾರದ ಆದೇಶ ಹೊರಡಿಸಲಾಗಿತ್ತು. ಇದನ್ನು ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು" ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಬಗ್ಗೆ:
ಕರ್ನಾಟಕ ರಾಜ್ಯದಲ್ಲಿ ಆಧುನಿಕ ವೈದ್ಯಪದ್ಧತಿ ಹಾಗೂ ಭಾರತೀಯ ವೈದ್ಯಪದ್ಧತಿಗಳಲ್ಲಿ ಸೂಕ್ತ ಮತ್ತು ವ್ಯವಸ್ಥಿತವಾದ ಶಿಕ್ಷಣ, ಬೋಧನೆ, ತರಬೇತಿ ಮತ್ತು ಸಂಶೋಧನೆಯನ್ನು ಖಚಿತ ಪಡಿಸುವ ಉದ್ದೇಶದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು 1994ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿತು. 996ರ ಜೂನ್ 1ರಂದು ವಿಶ್ವವಿದ್ಯಾಲಯ ಕಾರ್ಯಾರಂಭಿಸಿತು. ಬಳಿಕ ರಾಜ್ಯದಲ್ಲಿರುವ ಇತರೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜನೆ ಹೊಂದಿದ್ದ ಆರೋಗ್ಯ ವಿಜ್ಞಾನಗಳ ವಿಷಯದ ಸುಮಾರು 210 ಮಹಾವಿದ್ಯಾಲಯಗಳು ನೂತನವಾಗಿ ಸ್ಥಾಪಿತವಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸುಪರ್ದಿಗೆ ಕೊಡಲಾಗಿತ್ತು.
ಕರ್ನಾಟಕ ರಾಜ್ಯದಾದ್ಯಂತ ಹರಡಿರುವ ಸುಮಾರು 700ಕ್ಕಿಂತಲೂ ಅಧಿಕ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಹಾಗೂ ಯೋಗಶಿಕ್ಷಣ, ಯುನಾನಿ, ಫಾರ್ಮಸಿ, ನರ್ಸಿಂಗ್, ಫಿಜಿಯೋಥೆರಪಿ ಹಾಗೂ ಇತರೆ ಅರೆವೈದ್ಯಕೀಯ ಮಹಾವಿದ್ಯಾಲಯಗಳಿಗೆ ಸಂಯೋಜನೆ ನೀಡಿ, ದೇಶದಲ್ಲಿಯೇ ಅತಿ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೆಂಬ ಖ್ಯಾತಿಯನ್ನು ಹೊಂದಿದೆ.


Click it and Unblock the Notifications