ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ಎಂಟು ಅಡಿ ಎತ್ತರದ ಚಿನ್ನದ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮ ವಿಗ್ರಹವನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ಮಂಗಳವಾರ ತಿಳಿಸಿದ್ದಾರೆ. ರಾಜಸ್ಥಾನದ ಕುಶಲಕರ್ಮಿಗಳಿಂದ ಸಿಂಹಾಸನವನ್ನು ತಯಾರಿಸಲಾಗುತ್ತಿದ್ದು, ಡಿಸೆಂಬರ್ 15 ರೊಳಗೆ ಅದು ಅಯೋಧ್ಯೆಗೆ ತಲುಪಲಿದೆ ಎಂದು ತಿಳಿಸಲಾಗಿದೆ.
ರಾಮಮಂದಿರದ ಗರ್ಭಗುಡಿಯಲ್ಲಿ ಸಿಂಹಾಸನವನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಮಂಗಳವಾರ ತಿಳಿಸಿದ್ದಾರೆ. ಇದು ಎಂಟು ಅಡಿ ಎತ್ತರ, ಮೂರು ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲ ಇರಲಿದೆ ಎಂದ ಮಿಶ್ರಾ, ಗರ್ಭಗುಡಿಯ ನಿರ್ಮಾಣ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಇದರ ಬೆಲೆ ಎಷ್ಟಿರಲಿದೆ?
ಚಿನ್ನ ಲೇಪಿತ ಸಿಂಹಾಸನದ ಬೆಲೆಯು ನಿಖರವಾಗಿ ತಿಳಿದಿಲ್ಲ. ಆದರೆ ಒಟ್ಟಾರೆಯಾಗಿ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ 1,800 ಕೋಟಿ ರೂಪಾಯಿ ವೆಚ್ಚದ ಅಂದಾಜು ಮಾಡಲಾಗಿದೆ. ಇನ್ನು ಇತ್ತೀಚೆಗೆ ವಿದೇಶಿ ದೇಣಿಗೆ ಪಡೆಯಲು ಎಫ್‌ಸಿಆರ್‌ಎ ಪರವಾನಗಿಯನ್ನು ಕೂಡಾ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಪಡೆದುಕೊಂಡಿದೆ. ಹಾಗೆಯೇ ಭಕ್ತರು ಭಾರೀ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ದಾನ ಮಾಡಿದ್ದು, ಇದನ್ನು ಕರಗಿಸಿ ಬೇರೆ ಬೇರೆ ಅಲಂಕಾರಕ್ಕೆ ಬಳಕೆ ಮಾಡಲಾಗುತ್ತಿದೆ. ಈ ಸಿಂಹಾಸನಕ್ಕೂ ಭಕ್ತರು ದಾನ ಮಾಡಿದ ಚಿನ್ನ ಬಳಸಬಹುದು ಎಂದು ವರದಿ ಹೇಳುತ್ತದೆ.
ಡಿಸೆಂಬರ್ 15 ರೊಳಗೆ ರಾಮ ಮಂದಿರದ ನೆಲ ಅಂತಸ್ತು ಸಿದ್ಧವಾಗಬೇಕಿದೆ. ಮೊದಲ ಅಂತಸ್ತಿನ ಶೇಕಡ 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಮೊದಲ ಮಹಡಿಯಲ್ಲಿ 17 ಸ್ಥಂಭಗಳನ್ನು ಅಳವಡಿಸಲಾಗಿದ್ದು, ಇನ್ನೆರಡು ಮಾತ್ರ ಉಳಿದಿವೆ. ಡಿಸೆಂಬರ್ 15 ರೊಳಗೆ ಮೊದಲ ಮಹಡಿಯ ಮೇಲ್ಛಾವಣಿಯನ್ನು ನಿರ್ಮಿಸುವ ನಿರೀಕ್ಷೆಯಿದೆ ಎಂದು ಮಿಶ್ರಾ ಹೇಳಿದರು.
ಪರಿಕ್ರಮ ಮಾರ್ಗದ ನೆಲದ ಕಾಮಗಾರಿಯೂ ಪೂರ್ಣಗೊಂಡಿದೆ. ಈಗ ಗೃಹ ಮಂಟಪದ ನೆಲದ ಮೇಲೆ ಮಾರ್ಬಲ್ ಹಾಕುವ ಕೆಲಸ ನಡೆಯುತ್ತಿದೆ. ರಾಮಮಂದಿರದ ಹೊರಗೋಡೆಯ ('ಪಾರ್ಕೋಟ') ಪ್ರವೇಶ ದ್ವಾರದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಪ್ರಯಾಣಿಕರಿಗೆ ತಂಗಲು ಇರುವ ಕೇಂದ್ರದ ಎಲ್ಲಾ ಮೂರು ಮಹಡಿಗಳ ಮೇಲ್ಛಾವಣಿಗಳನ್ನು ನಿರ್ಮಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ತಿಳಿಸಿದರು.
ಭಕ್ತರು ಹೆಚ್ಚಿನ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ದಾನ ಮಾಡಿದ್ದಾರೆ. ಅವುಗಳನ್ನು ಸಂಗ್ರಹಿಸಲು ಕಷ್ಟವಾಗಿದೆ. ಆದ್ದರಿಂದಾಗಿ ಈ ಚಿನ್ನ, ಬೆಳ್ಳಿಗಳನ್ನು ಕರಗಿಸಲಾಗುತ್ತದೆ. ಪ್ರತಿಷ್ಠಿತ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಈ ಲೋಹಗಳನ್ನು ಕರಗಿಸುವ ಕಾರ್ಯವನ್ನು ನಡೆಯಲಿದೆ ಎಂದು ಮಾಹಿತಿ ನೀಡಿದರು.


Click it and Unblock the Notifications