ಹಿರಿಯ ನಾಗರಿಕರಿಗೆ ಮೀಸಲಿರುವ ಉಳಿತಾಯ ಯೋಜನೆಗಳಲ್ಲಿ ಗರಿಷ್ಠ ಎಂದರೆ 30 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದಕ್ಕಿಂತ ಹೆಚ್ಚಿನ ಮೊತ್ತದ ಹೂಡಿಕೆ ಮಾಡಬಹುದಾದ, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಂ ರೀತಿಯ ರಿಸ್ಕ್ ಇಲ್ದೇ ಇರೋ ಹೆಚ್ಚಿನ ರಿಟರ್ನ್ ಸಿಗುವ ಹೂಡಿಕೆ ಅವಕಾಶ ಯಾವುದಾದರೂ ಇದೆಯಾ? ಎನ್ನುವುದನ್ನು ನಾವು ತಿಲಿದುಕೊಳ್ಳಬೇಕು.
ಇಂಥ ಹಿರಿಯ ನಾಗರಿಕರಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಪರಿಚಯಿಸಿದೆ. ಇದು ಉತ್ತಮ ಆಯ್ಕೆ. ಈ ಬಾಂಡ್ ಸರ್ಕಾರವೇ ಇಷ್ಯೂ ಮಾಡುತ್ತದೆ. ಹಾಗಾಗಿ ಇದು ಸಂಪೂರ್ಣ ಭದ್ರತೆ ಖಾತರಿಪಡಿಸುತ್ತದೆ. ಯಾವುದೇ ಭಾರತೀಯ ನಾಗರಿಕರು, ಅನಿವಾಸಿ ಭಾರತೀಯ ನಾಗರಿಕರು ಇದರಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆಗೆ ಕನಿಷ್ಠ ಮಿತಿ ಒಂದು ಸಾವಿರ ರೂಪಾಯಿ, ಹಾಗೇ ಗರಿಷ್ಠ ಮಿತಿ ಏನೂ ಇಲ್ಲ. ಆರ್ ಬಿ ಐ ನ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ನ ಲಾಕ್ ಇನ್ ಪೀರಿಯಡ್ 7 ವರ್ಷ. ಸಾಮಾನ್ಯ ನಾಗರಿಕರು ಇದನ್ನ ಅವಧಿಗೂ ಮೊದಲೇ ರಿಡೀಮ್ ಮಾಡೋಕೆ ಅವಕಾಶ ಇಲ್ಲ. ಆದಾಗ್ಯೂ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಮೆಚ್ಯುರಿಟಿಗೂ ಮೊದಲೇ ಇದರ ಮೇಲೆ ಕೆಲವು ಲಾಭ ಪಡೆಯಬಹುದು.

ಹೋಲ್ಡಿಂಗ್ ಅವಧಿಯ ಕೊನೆಯ ಆರು ತಿಂಗಳಲ್ಲಿ ಪ್ರಿಮೆಚ್ಯೂರ್ ವಿತ್ ಡ್ರಾ ಮಾಡಿದ್ರೆ ದಂಡ ನೀಡಬೇಕಾಗುತ್ತದೆ. ಅಂದರೆ ಹೂಡಿಕೆದಾರರಿಗೆ ಕಳೆದ ಆರು ತಿಂಗಳ ಬಡ್ಡಿಯ ಶೇಕಡ 50 ರಷ್ಟು ಬಡ್ಡಿ ಮಾತ್ರ ಸಿಗುತ್ತದೆ. ಹೆಸರೇ ಹೇಳುವಂತೆ ಇದೊಂದು ಫ್ಲೋಟಿಂಗ್ ರೇಟ್ ಬಾಂಡ್ ಆಗಿರುವುದರಿಂದ ಇಲ್ಲಿ ಸಂಪೂರ್ಣ ಅವಧಿಗೆ ನಿರ್ದಿಷ್ಟ ದರದಲ್ಲಿ ರಿಟರ್ನ್ಸ್ ಸಿಗುವುದಿಲ್ಲ. ಸರ್ಕಾರದ ಸಣ್ಣ ಉಳಿತಾಯ ಯೋಜನೆ ಅದರಲ್ಲೂ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಥವಾ ಎನ್ ಎಸ್ ಸಿ ಆಧಾರಿತವಾಗಿ ಇದರ ಬಡ್ಡಿ ದರ ನಿರ್ಧಾರ ಆಗುತ್ತದೆ. ಅಂದರೆ ಎನ್ ಎಸ್ ಸಿ ಬಡ್ಡಿ ದರವನ್ನ ಬೆಂಚ್ ಮಾರ್ಕ್ ಆಗಿ ಪರಿಗಣಿಸಲಾಗತ್ತದೆ. ಪ್ರತಿ ವರ್ಷದ ಜನವರಿ 1 ಮತ್ತು ಜುಲೈ 1 ರಂದು ಬಾಂಡ್ ದಾರರ ಖಾತೆಗೆ ಬಡ್ಡಿ ಜಮೆ ಆಗತ್ತದೆ. ಎನ್ ಎಸ್ ಸಿ ಯ ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸವಾದರೆ, ಆರ್ ಬಿ ಐ ನ ಸೇವಿಂಗ್ಸ್ ಬಾಂಡ್ ನಲ್ಲೂ ವ್ಯತ್ಯಾಸಗಳಾಗತ್ತವೆ. ಆದಾಗ್ಯೂ, ಈ ಬಾಂಡ್ ನಡಿ ಎನ್ ಎಸ್ ಸಿ ಗೆ ಹೋಲಿಕೆ ಮಾಡಿದರೆ ಇಲ್ಲಿ ಶೇಕಡ 0.35 ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ.
ಹಾಗಿದ್ದರೆ ಈ ಸ್ಕೀಂ ನಲ್ಲಿ ಹೂಡಿಕೆ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ. ಆರ್ ಬಿ ಐ ನ ಸೇವಿಂಗ್ಸ್ ಬಾಂಡ್ ನಲ್ಲಿ ಹೂಡಿಕೆ ಪ್ರಕ್ರಿಯೆ ಸರಳ, ಸುಲಭ. ಎಲ್ಲಾ ಸಾರ್ವಜನಿಕ ವಲಯ ಬ್ಯಾಂಕ್ ಗಳು, ಎಚ್ ಡಿ ಎಫ್ ಸಿ ಬಾಂಡ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ನಂತರ ಖಾಸಗಿ ಬ್ಯಾಂಕ್ ಗಳು ಈ ಬಾಂಡ್ ಇಷ್ಯೂ ಮಾಡುವುದಕ್ಕೆ ಆರ್ ಬಿ ಐ ಅನುಮತಿ ನೀಡಿದೆ. ವ್ಯಕ್ತಿಗಳು, ಜಂಟಿ ಖಾತೆದಾರರು ಅಥವಾ ಮೈನರ್ ಗಳ ಪರವಾಗಿ ಅವರ ಪೋಷಕರು ಈ ಬಾಂಡ್ ಗಳಲ್ಲಿ ಯಾವುದೇ ಸಮಯದಲ್ಲಿ ಹೂಡಿಕೆ ಮಾಡಬಹುದು. ಆನ್ ಲೈನ್ ಅಥವಾ ಆಫ್ಲೈನ್ ಎರಡೂ ವಿಧಗಳಲ್ಲಿ ಹೂಡಿಕೆ ಮಾಡಬಹುದು. ಆರ್ ಬಿ ಐ ಜಾಲತಾಣ rbiretaildirect.org.in ನಲ್ಲಿ ನೀವು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ಹೂಡಿಕೆ ಆರಂಭಿಸಬಹುದು.
ಆರ್ ಬಿ ಐ ಸೇವಿಂಗ್ಸ್ ಬಾಂಡ್ ನಲ್ಲಿ ಹೂಡಿಕೆ ಮೇಲಾಗಲೀ ಅಥವಾ ಮೆಚ್ಯುರಿಟಿ ಮೇಲಾಗಲೀ ನಿಮಗೆ ತೆರಿಗೆ ವಿನಾಯಿತಿ ಸಿಗೋದಿಲ್ಲ. ಹೂಡಿಕೆದಾರರು ಈ ಆದಾಯವೂ ಸೇರಿದ ತಮ್ಮ ಒಟ್ಟು ಆದಾಯಕ್ಕೆ ಯಾವ ಸ್ಲ್ಯಾಬ್ ಅನ್ವಯವಾಗುತ್ತದೆಯೋ ಅದರಂತೆ ತೆರಿಗೆ ಪಾವತಿಸಬೇಕು.
ನಿವೃತ್ತಿ ನಂತರ ನಿಯಮಿತ ಆದಾಯ ಗಳಿಕೆಗೆ ಆರ್ ಬಿ ಐ ನ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಉತ್ತಮ ಆಯ್ಕೆ. ತೆರಿಗೆ ವಿನಾಯಿತಿ ಇರುವಷ್ಟು ಮೊತ್ತದೊಳಗಿನ ಆದಾಯ ಹೊಂದಿರುವವರಿಗೆ ಇದೊಂದು ಉತ್ತಮ ಆಯ್ಕೆ. ಈ ಬಾಂಡ್ ಗಳನ್ನ ಟ್ರಾನ್ಸ್ ಫರ್ ಮಾಡಲು ಸಾಧ್ಯವಿಲ್ಲ ಅಥವಾ ಅಡವಿಡಲು ಸಾಧ್ಯವಿಲ್ಲ ಎನ್ನುವುದು ನೆನಪಿನಲ್ಲಿ ಇರಬೇಕು. ದೊಡ್ಡ ಮೊತ್ತದ ಹಣ ಕೈಯಲ್ಲಿದ್ದು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ಗೊತ್ತಾಗದ ಸ್ಥಿತಿ ಇದ್ದಾಗ ನಿಮಗೆ ಇದು ಸೂಟ್ ಆಗುತ್ತದೆ.


Click it and Unblock the Notifications