ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಯಾವುದೇ ಬ್ಯಾಂಕ್ ನಿಯಮವನ್ನು ಉಲ್ಲಂಘನೆ ಮಾಡಿದರೆ, ಆ ಬ್ಯಾಂಕ್‌ನ ಮೇಲೆ ದಂಡವನ್ನು ವಿಧಿಸುತ್ತದೆ. ಅದರಂತೆಯೇ ಮಾರ್ಚ್ 27ರಂದು ಆರ್‌ಬಿಐ ಆರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಿದೆ. ಈ ಬ್ಯಾಂಕುಗಳು ನಿಯಮವನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂಬ ಆರೋಪದಲ್ಲಿ ಆರ್‌ಬಿಐ ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಲಾಗಿದೆ. ಈ ಬ್ಯಾಂಕ್‌ಗಳ ಮೇಲಿನ ವಿತ್ತೀಯ ದಂಡ ಅಥವಾ ದಂಡವು 1.10 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿ ಆಗಿದೆ.
ಆಲಿಗಢ ಜಿಲ್ಲಾ ಸಹಕಾರಿ ಬ್ಯಾಂಕ್ ಮೇಲೆ ಆರ್‌ಬಿಐ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ದೆಲ್ಲಿ ನಾಗರಿಕ ಸಹಕಾರಿ ಬ್ಯಾಂಕ್ ( Delhi Nagrik Sehkari Bank) ಮೇಲೆ ಆರ್‌ಬಿಐ 3 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಕೋಲ್ಕತ್ತಾ ಪೊಲೀಸ್ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ಕೇಂದ್ರ ಬ್ಯಾಂಕ್ 1.10 ಲಕ್ಷ ರೂಪಾಯಿ ದಂಡವನ್ನು ಹೇರಿದೆ. ಮೆಹ್‌ನಸ ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮೇಲೆಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡವನ್ನು ವಿಧಿಸಿದೆ. ಸುಮಾರು 2.10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

ವ್ಯಾಪಾರಿ ಸಹಕಾರಿ ಬ್ಯಾಂಕ್ ಮರ್ಯಾದಿತ ಮತ್ತು ಶ್ರೀ ಗಣೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮೇಲೆ ಆರ್‌ಬಿಐ 2 ಲಕ್ಷ ರೂಪಾಯಿ ದಂಡವನ್ನು ಹೇರಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಕಾಯ್ದೆ 1950 ಮತ್ತು ಠೇವಣಿಗಳ ಮೇಲಿನ ಬಡ್ಡಿದರಗಳಿಗೆ ಸಂಬಂಧಿಸಿದ ಆದೇಶದ ಅಡಿಯಲ್ಲಿ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಲಾಗಿದೆ. ಈ ಬ್ಯಾಂಕ್‌ಗಳ ವಿರುದ್ಧ ತನಿಖೆಯನ್ನು ನಡೆಸಿ ಆರ್‌ಬಿಐ ದಂಡ ವಿಧಿಸುವ ನಿರ್ಧಾರವನ್ನು ಮಾಡಿದೆ.
ಇತರೆ ಬ್ಯಾಂಕ್‌ಗಳ ಮೇಲೆಯೂ ದಂಡ ಹೇರಿದೆ ಆರ್‌ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ಆರ್‌ಬಿಐನ ನಿಯಮವನ್ನು ಉಲ್ಲಂಘನೆ ಮಾಡಿದರೆ ದಂಡವನ್ನು ವಿಧಿಸುತ್ತದೆ. ಅದರಂತೆಯೇ ಕರೂರ್ ವೈಶ್ಯ ಬ್ಯಾಂಕ್‌ಗೆ ಕೂಡಾ ಆರ್‌ಬಿಐ ದಂಡ ವಿಧಿಸಿದೆ. ಆರ್‌ಬಿಐ ನಿಯಮವನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕರೂರ್ ವೈಶ್ಯ ಬ್ಯಾಂಕ್ ಮೇಲೆ ಮಾರ್ಚ್ 24ರಂದು ಆರ್‌ಬಿಐ ಸುಮಾರು 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೇಂದ್ರ ಬ್ಯಾಂಕ್ ಬ್ಯಾಂಕ್‌ನಲ್ಲಿ ಪರಿಶೀಲನೆ, ತನಿಖೆ ನಡೆಸಿದ ಬಳಿಕ ಈ ದಂಡವನ್ನು ವಿಧಿಸಿದೆ.
ಕರೂರ್ ವೈಶ್ಯ ಬ್ಯಾಂಕ್‌ನಲ್ಲಿ ಆರ್‌ಬಿಐ ತಪಾಸಣೆ ಅಥವಾ ತನಿಖೆಯನ್ನು ನಡೆಸಿದಾಗ ಕರೂರ್ ವೈಶ್ಯ ಬ್ಯಾಂಕ್ ನಕಲಿ ಖಾತೆಗಳ ಬಗ್ಗೆ ಆರ್‌ಬಿಐಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬುವುದು ತಿಳಿದು ಬಂದಿದೆ. ನಮ್ಮ ದೇಶದ ಕೇಂದ್ರ ಬ್ಯಾಂಕ್‌ನ 2016ರ ಸೂಚನೆಯ ಪ್ರಕಾರ ಎಲ್ಲ ಬ್ಯಾಂಕುಗಳು ತಮ್ಮ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಆದರೆ ಈ ಮಾಹಿತಿಯನ್ನು ಕರೂರ್ ವೈಶ್ಯ ಬ್ಯಾಂಕ್ ಆರ್‌ಬಿಐ ನೀಡದಿರುವುದು ಪರಿಶೀಲನೆಯ ವೇಳೆ ತಿಳಿದು ಬಂದಿದೆ.
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆರ್‌ಬಿಎಲ್ ಬ್ಯಾಂಕ್ ಮೇಲೆ ಸುಮಾರು 2.27 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಆರ್‌ಬಿಎಲ್ ಬ್ಯಾಂಕ್ ಕೂಡಾ ನಿಯಮವನ್ನು ಪಾಲಿಸದ ಕಾರಣ ದಂಡವನ್ನು ವಿಧಿಸಿದೆ. ಸಾಲ ಮರುಪಡೆಯುವ ಏಜೆಂಟ್‌ಗಳಿಗೆ ಸಂಬಂಧಿಸಿದ ನಿಯಮವನ್ನು ಪಾಲಿಸಿಲ್ಲ ಎಂಬ ಆರೋಪ ಸಾಬೀತಾದ ಬಳಿಕ ದಂಡ ಹೇರಲಾಗಿದೆ. ಕೇಂದ್ರ ಬ್ಯಾಂಕ್ ಆರ್‌ಬಿಎಲ್ ವಿರುದ್ಧ ಹಲವಾರು ದೂರುಗಳನ್ನು ಪಡೆದ ಹಿನ್ನೆಲೆ ತನಿಖೆ ನಡೆಸಿ ದಂಡ ವಿಧಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ. ಕೇಂದ್ರ ಬ್ಯಾಂಕ್‌ನ ಕೆಲವು ನಿರ್ದೇಶನಗಳನ್ನು ಅನುಸರಿಸದ ಕಾರಣಕ್ಕಾಗಿ ಸುಮಾರು 57.50 ಲಕ್ಷ ವಿತ್ತೀಯ ದಂಡವನ್ನು ವಿಧಿಸಿದೆ ಎಂದು ತಿಳಿಸಿದೆ. ಎಟಿಎಂ ಕಾರ್ಡ್ ಕ್ಲೋನಿಂಗ್ ಮತ್ತು ಸ್ಕಿಮ್ಮಿಂಗ್ ಒಳಗೊಂಡ ವಂಚನೆಗಳ ಕೆಲವು ಘಟನೆಗಳು ಪತ್ತೆಯಾದ ಮೂರು ವಾರದ ಒಳಗಾಗಿ ಆರ್‌ಬಿಐಗೆ ಈ ಬಗ್ಗೆ ವರದಿ ಸಲ್ಲಿಸಲು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ವಿಫಲವಾಗಿದೆ ಎಂದು ಕೇಂದ್ರ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.


Click it and Unblock the Notifications