ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಕೆನರಾ ಬ್ಯಾಂಕ್ ಮೇಲೆ ಸುಮಾರು 2.92 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಕೇಂದ್ರ ಬ್ಯಾಂಕ್‌ನ ಹಲವಾರು ನಿಯಮಗಳನ್ನು ಕೆನರಾ ಬ್ಯಾಂಕ್ ಉಲ್ಲಂಘನೆ ಮಾಡಿದೆ ಎಂದು ಆರ್‌ಬಿಐ ಹೇಳಿದೆ. ಪ್ರಮುಖವಾಗಿ ಬಾಹ್ಯ ಬೆಂಚ್‌ಮಾರ್ಕ್, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮವನ್ನು ಉಲ್ಲಂಘಿಸಿದೆ ಎಂದು ಆರ್‌ಬಿಐ ತಿಳಿಸಿದೆ.
ಕೇಂದ್ರ ಬ್ಯಾಂಕ್ ಮಾರ್ಚ್ 31, 2021ರವರೆಗಿನ ಕೆನರಾ ಬ್ಯಾಂಕ್‌ನ ಹಣಕಾಸು ಸ್ಥಿತಿಯ ಬಗ್ಗೆ ಆರ್‌ಬಿಐ ಪರಿಶೀಲನೆ ಮಾಡಿದೆ. ಇದಾದ ಬಳಿಕ ಆರ್‌ಬಿಐ ಕೆನರಾ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ. "ಬೇರೆ ಬ್ಯಾಂಕ್‌ಗಳಲ್ಲಿ ನಿಯಮ ಉಲ್ಲಂಘನೆ ಕಂಡುಬರುತ್ತಿದ್ದಂತೆ ಜುಲೈ 2020ರಂದು ಈ ಪರಿಶೀಲನೆಯನ್ನು ನಡೆಸಲಾಗಿದೆ," ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಬ್ಯಾಂಕ್ ಪರಿಶೀಲನೆಯನ್ನು ನಡೆಸಿದಾಗ ಕೆನರಾ ಬ್ಯಾಂಕ್‌ನ ಆರ್‌ಬಿಐನ ಹಲವಾರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಬದಲಾಗುತ್ತಿರುವ ಬಡ್ಡಿದರವನ್ನು ಹೊಂದಿರುವ ರಿಟೇಲ್ ಸಾಲದ ಮೇಲೆ ಬಡ್ಡಿದರವನ್ನು ಲಿಂಕ್ ಮಾಡುವಲ್ಲಿ ಕೆನರಾ ಬ್ಯಾಂಕ್ ವಿಫಲವಾಗಿದೆ ಎಂದು ಪರಿಶೀಲನೆಯ ವೇಳೆ ಕಂಡು ಬಂದಿದೆ. ಹಾಗೆಯೇ ಎಂಎಸ್‌ಎಂಇಗೆ ನೀಡುವ ಸಾಲದ ಬೇಂಚ್‌ಮಾರ್ಕ್‌ಗೆ ಸಂಬಂಧಿಸಿದಂತೆಯೂ ನಿಯಮ ಉಲ್ಲಂಘಿಸಲಾಗಿದೆ.
ಇನ್ನು ಹಣಕಾಸು ವರ್ಷ 2020-21ರಲ್ಲಿ ಮಂಜೂರಾತಿ ಮಾಡಲಾದ ಮತ್ತು ರಿನಿವಲ್ ಮಾಡಲಾದ ಪ್ಲೋಟಿಂಗ್ ರೇಟ್ ರುಪೀ ಲೋನ್‌ಗೆ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಆಧಾರದಲ್ಲಿ ಬಡ್ಡಿದರವನ್ನು ಲಿಂಕ್ ಮಾಡುವಲ್ಲಿಯೂ ಕೂಡಾ ಕೆನರಾ ಬ್ಯಾಂಕ್ ನಿಯಮ ಉಲ್ಲಂಘಿಸಿದೆ.
ಕೆನರಾ ಬ್ಯಾಂಕ್ ಯಾವೆಲ್ಲ ನಿಯಮ ಉಲ್ಲಂಘನೆ ಮಾಡಿದೆ?
ಖಾಸಗಿ ವಲಯದ ಬ್ಯಾಂಕ್ ಬಗ್ಗೆ ಮಾತನಾಡಿದ ಆರ್‌ಬಿಐ, "ಅರ್ಹವಲ್ಲದ ಸಂಸ್ಥೆಗಳ ಹೆಸರಿನಲ್ಲಿ ಹಲವಾರು ಉಳಿತಾಯ ಖಾತೆಗಳನ್ನು ಕೆನರಾ ಬ್ಯಾಂಕ್‌ನಲ್ಲಿ ತೆರೆಯಲಾಗಿದೆ. ಹಲವಾರು ಕ್ರೆಡಿಟ್ ಕಾರ್ಡ್ ಖಾತೆಗಳಲ್ಲಿ ತಪ್ಪಾದ, ಸುಳ್ಳಾದ ಮೊಬೈಲ್ ನಂಬರ್ ಅನ್ನು ರಿಜಿಸ್ಟಾರ್ ಮಾಡಲಾಗಿದೆ. ದೈನಂದಿನ ಹೂಡಿಕೆ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಯ ಮೇಲೆ ಬಡ್ಡಿದರವನ್ನು ಜಮೆ ಮಾಡುವಲ್ಲಿ ಬ್ಯಾಂಕ್ ವಿಫಲವಾಗಿದೆ," ಎಂದು ತಿಳಿಸಿದೆ.
ಕೆನರಾ ಬ್ಯಾಂಕ್ ಎಸ್‌ಎಂಎಸ್ ಅಲರ್ಟ್ ಶುಲ್ಕವನ್ನು ಗ್ರಾಹಕರಿಂದ ಪಡೆದುಕೊಂಡಿದೆ. ಆದರೆ ಇದು ಬಳಕೆಯ ಆಧಾರದಲ್ಲಿ ತೆಗೆದುಕೊಳ್ಳುತ್ತಿಲ್ಲ. ಕಡಿಮೆ ಎಸ್ಎಂಎಸ್ ಅಲರ್ಟ್ ಪಡೆದವರು ಕೂಡಾ ಅಧಿಕ ಮೊತ್ತ ಪಾವತಿಸಿದಂತಾಗುತ್ತಿದೆ. ಇಂತಹ ಹಲವಾರು ನಿಯಮಗಳನ್ನು ಕೆನರಾ ಬ್ಯಾಂಕ್ ಉಲ್ಲಂಘನೆ ಮಾಡಿರುವುದು ಆರ್‌ಬಿಐ ಗಮನಕ್ಕೆ ಬಂದಿದೆ.
"ಈ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕೆನರಾ ಬ್ಯಾಂಕ್ ಮೇಲೆ ಯಾಕೆ ದಂಡವನ್ನು ವಿಧಿಸಬಾರದು ಎಂದು ಸ್ಪಷ್ಟಣೆಯನ್ನು ನೀಡುವಂತೆ ತಿಳಿಸಲಾಗಿದೆ. ಆದರೆ ಕೆನರಾ ಬ್ಯಾಂಕ್ ಇದಕ್ಕೆ ಸರಿಯಾದ ಸ್ಪಷ್ಟಣೆಯನ್ನು ನೀಡಿಲ್ಲ," ಎಂದು ಕೂಡಾ ಆರ್‌ಬಿಐ ತಿಳಿಸಿದೆ.
ಇದಕ್ಕೂ ಮುನ್ನ ಹಲವಾರು ಬ್ಯಾಂಕ್‌ಗಳ ಮೇಲೆ ಆರ್‌ಬಿಐ ದಂಡವನ್ನು ವಿಧಿಸಿದೆ. ಪ್ರಮುಖವಾಗಿ ನಿಯಮ ಉಲ್ಲಂಘನೆ ಮಾಡಿದ ಕಾರಣದಿಂದಾಗಿಯೇ ದಂಡವನ್ನು ವಿಧಿಸಲಾಗಿದೆ. ಇತ್ತೀಚೆಗೆ ಆರ್‌ಬಿಐ ನಾಲ್ಕು ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ 44 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಎಚ್‌ಎಸ್‌ಬಿಸಿ ಬ್ಯಾಂಕ್ ಮೇಲೆ 1.73 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.


Click it and Unblock the Notifications