ಗುಲಾಬಿ ಬಣ್ಣದ ನೋಟು ಯಾರಿಗೆ ತಾನೆ ನೆನಪಿಲ್ಲ. 2,000 ರೂ. ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಅಮಾನ್ಯಕರಣಗೊಂಡ ಸಂದರ್ಭದಲ್ಲಿ ಜಾರಿಗೆ ತಂದಿತ್ತು. ಇದಾದ ಬಳಿಕ ಮೇ 19, 2023 ರಂದು ಈ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿತ್ತು. ಇದೀಗ ಈ ನೋಟಿನ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಮಹತ್ವದ ಘೋಷಣೆ ಮಾಡಿದೆ. ಸೆಪ್ಟೆಂಬರ್ 30, 2024 ರ ವೇಳೆಗೆ ಹೆಚ್ಚಿನ 2,000 ರೂ ನೋಟುಗಳು ಹಿಂತಿರುಗಿವೆ ಅಂದರೆ 98% ನೋಟುಗಳು ಬ್ಯಾಂಕ್‌ಗಳಿಗೆ ವಾಪಾಸ್ ಆಗಿವೆ ಎಂದು ಮಾಹಿತಿಯನ್ನು ಹಂಚಿಕೊಂಡಿದೆ.
2016ರ ನವೆಂಬರ್‌ನಲ್ಲಿ 1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಪರಿಚಯಿಸಲಾದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಕೆಲ ವರ್ಷಗಳ ಬಳಿಕ ಕೇಂದ್ರ ಬ್ಯಾಂಕ್ ವಾಪಸು ಪಡೆಯುವಂತೆ ಆದೇಶ ಹೊರಡಿಸಿತ್ತು. 2023ರ ಮೇ 19ರಂದು, ಚಾಲನೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿ ಆಗಿತ್ತು. ಈಗ ಇದು ಕೇವಲ 7,117 ಕೋಟಿ ರೂಪಾಯಿಗೆ ಇಳಿದಿದೆ.

ಮೇ 19, 2023 ರಂದು ನೀಡಲಾದ ಆರ್ ಬಿಐ ರೂ. 2,000 ನೋಟುಗಳನ್ನು ಚಲಾವಣೆಯಿಂದ ಅಮಾನ್ಯಗೊಳಿಸಿತ್ತು. ಇದರ ನಂತರ, RBI ದೇಶದಾದ್ಯಂತ ಎಲ್ಲಾ ಜನರಿಗೆ ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಗಳ ಮೂಲಕ ಅವಕಾಶ ನೀಡಿತ್ತು. ಅಕ್ಟೋಬರ್ 7, 2023 ರ ಹೊತ್ತಿಗೆ, ದೇಶಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಠೇವಣಿ ಮಾಡಲು ಸೇವೆಗಳನ್ನು ಒದಗಿಸಿತ್ತು.
2023ರ ಮೇ 19ರಿಂದ, ವಿವಿಧ ನಗರಗಳಲ್ಲಿನ ಆರ್‌ಬಿಐನ 19 ಕಚೇರಿಗಳು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿತ್ತು. ಈ ಕಚೇರಿಗಳು ಅಹಮದಾಬಾದ್, ಬೆಂಗಳೂರು, ಬೆಲಾಪುರ, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂ ಸೇರಿದಂತೆ ಪ್ರಮುಖ ನಗರಗಳಲ್ಲಿವೆ.
2000 ಬ್ಯಾಂಕ್‌ನೋಟುಗಳ ವಿನಿಮಯದ ಸೌಲಭ್ಯವು ರಿಸರ್ವ್ ಬ್ಯಾಂಕ್‌ನ 19 ಇಶ್ಯೂ ಆಫೀಸ್‌ಗಳಲ್ಲಿ (RBI ಇಶ್ಯೂ ಆಫೀಸ್‌ಗಳು) ಲಭ್ಯವಿದೆ.
ಯಾವುದೇ ವ್ಯಕ್ತಿ ತನ್ನ 2,000 ರೂಪಾಯಿ ನೋಟುಗಳನ್ನು ಭಾರತೀಯ ಅಂಚೆ ಮೂಲಕ ಯಾವುದೇ ಆರ್‌ಬಿಐ ವಿತರಣಾ ಕಚೇರಿಗೆ ಕಳುಹಿಸಬಹುದು. ಠೇವಣಿ ಮಾಡಿದ ಮೊತ್ತವನ್ನು ನಂತರ ಕಳುಹಿಸುವವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಇದು ಸಾರ್ವಜನಿಕರಿಗೆ ವಾಪಸಾತಿ ಕ್ರಮವನ್ನು ಅನುಸರಿಸಲು ನ್ಯಾಯಯುತ ಮತ್ತು ಉತ್ತಮ ಮಾರ್ಗವಾಗಿದೆ.
2000 ರೂಪಾಯಿ ಮುಖಬೆಲೆಯ ನೋಟುಗಳನ್ನು 2016ರಲ್ಲಿ 1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಪರಿಚಯಿಸಲಾಯಿತು, ಇದರ ಉದ್ದೇಶ ಕಪ್ಪು ಹಣ ಮತ್ತು ನಕಲಿ ನೋಟುಗಳನ್ನು ನಿಗ್ರಹಿಸುವುದು. ಇತ್ತೀಚೆಗೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸು ಪಡೆಯುವುದು ದೇಶದ ಹಣಕಾಸಿನ ನಿಯಂತ್ರಣ ಮತ್ತು ವ್ಯವಸ್ಥೆಯನ್ನು ಸುಧಾರಿಸಲು ಆರ್‌ಬಿಐನ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ. ಈ ಕ್ರಮವು ಭಾರತದ ಮುದ್ರಾ ವ್ಯವಸ್ಥೆಯ ಸ್ಥಿರತೆ ಮತ್ತು ಅಖಂಡತೆಯನ್ನು ಕಾಪಾಡಿಕೊಳ್ಳುವ ಆರ್‌ಬಿಐನ ಬದ್ಧತೆಯನ್ನು ತೋರಿಸುತ್ತದೆ. ಆರ್‌ಬಿಐ ದೇಶದ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳುತ್ತದೆ .


Click it and Unblock the Notifications