ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕ ಸರ್ಕಾರ ಅಕ್ಟೋಬರ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ಆಸ್ತಿಗಳ ನೋಂದಣಿಯಲ್ಲಿ ಮಹತ್ವದ ಬದಲಾವಣೆ ಮಾಡಲಿದೆ. ಈಗಾಗಲೇ ಕಂದಾಯ ಇಲಾಖೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಈಗಾಗಲೇ ಸಂಯೋಜಿಸಲಾಗಿರುವ ಈ ಆಸ್ತಿ ತಂತ್ರಾಂಶವನ್ನು ಇತರೆ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಆಸ್ತಿಗಳ ನೋಂದಣಿ ಮಾಡಲು ಇ-ಖಾತಾ ಕಡ್ಡಾಯವಗಿದೆ.
ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೆಲವು ದಿನಗಳ ಹಿಂದೆ ಮಾಹಿತಿ ನೀಡಿದ್ದರು, "ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗೆ ಬಳಸಲಾಗುವ ಜಮೀನನ್ನು ಇ-ಸ್ವತ್ತು ಎಂದು ಕರೆದರೆ ನಗರ ಭಾಗದಲ್ಲಿ ಇ-ಆಸ್ತಿ ಎಂದು ಕರೆಯಲಾಗುತ್ತದೆ" ಎಂದು ಹೇಳಿದ್ದರು.

"ಸೆಪ್ಟೆಂಬರ್ ತಿಂಗಳಿನಲ್ಲಿ ನೋಂದಣಿ ಪ್ರಕ್ರಿಯೆಗೆ ಇ-ಖಾತಾ ಕಡ್ಡಾಯ ಎಂಬುದನ್ನು 12 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಮುಂದಿನ ವಾರದಿಂದ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ಅಕ್ಟೋಬರ್‌ನಿಂದ ರಾಜ್ಯದಲ್ಲಿ ಪೇಪರ್ ಖಾತಾಗಳ ಆಧಾರದಲ್ಲಿ ಆಗುತ್ತಿರುವ ನಕಲಿ ನೋಂದಣಿ ತಡೆಯಲು ಇ-ಖಾತಾ ಕಡ್ಡಾಯಗೊಳಿಸಲಾಗಿದೆ" ಎಂದು ಸಚಿವರು ತಿಳಿಸಿದ್ದರು.
ಇಲಾಖೆಯಿಂದ ಅಧಿಕೃತ ಆದೇಶ: ಇ-ಖಾತಾ ಕಡ್ಡಾಯಗೊಳಿಸುವ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎ. ಜಿ. ವೀಣಾ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ) ಆದೇಶವನ್ನು ಹೊರಡಿಸಿದ್ದಾರೆ. ಈ ವ್ಯವಸ್ಥೆಯನ್ನು ನೋಂದಣಿಗಾಗಿ ಅನುಷ್ಠಾನಗೊಳಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕ್ರಮ ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಮಾಹಿತಿ ಪಡೆಯದೇ ಬೇರೆ ಯಾವುದೇ ವಿಧಾನದಲ್ಲಿ ಸ್ಥಿರಾಸ್ತಿಗಳ ನೋಂದಣಿ ಮಾಡಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ/ ನೌಕರರ ವಿರುದ್ಧ ಕಾನೂನಿನನ್ವಯ ಕ್ರಮ ಹಾಗೂ ಇಲಾಖಾ ವಿಚಾರಣೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ಈಗಾಗಲೇ ಸಂಯೋಜಿಸಲಾಗಿದೆ.
ಈ ತಂತ್ರಾಂಶದ ಸಂಯೋಜನೆಯನ್ನು ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿ (18 ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಉಡುಪಿ, ಕಾರವಾರ, ಮಂಗಳೂರು, ಧಾರವಾಡ, ವಿಜಯಪುರ, ವಿಜಯನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ಕೋಲಾರ, ಕಲಬುರಗಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಿಗೆ) ದಿನಾಂಕ 07-10-2024ರಿಂದ ಇ-ಆಸ್ತಿ ತಂತ್ರಾಂಶ ಹಾಗೂ ಕಾವೇರಿ-2 ತಂತ್ರಾಂಶದ ಸಂಯೋಜನೆಯಿಂದ ಮಾತ್ರ ಮಾಹಿತಿ ಪಡೆದು ನೋಂದಾಯಿಸಲು ಆದೇಶಿಸಿದೆ.
ಈಗ ಜನರು ಏನು ಮಾಡಬೇಕು?; ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಆಸ್ತಿಗಳ ನೋಂದಣಿ ಮಾಡಲು ಇ-ಖಾತಾ ಕಡ್ಡಾಯಗೊಳಿಸಿದೆ. ಅಕ್ಟೋಬರ್ 7ರ ಬಳಿಕ ಇದು ಅಧಿಕೃತವಾಗಿ ಜಾರಿಗೆ ಬರಲಿದೆ. ಆದ್ದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕು ಎಂದರೆ ತತ್‌ಕ್ಷಣ ಹೋಗಿ ಇ-ಖಾತಾ ಪಡೆದುಕೊಳ್ಳಬೇಕು. ಇದರ ಸಹಾಯದಿಂದ ಮಾತ್ರ ನಕಲಿ ನೋಂದಣಿ ತಡೆಯಬಹುದಾಗಿದೆ ಎಂದು ಕಂದಾಯ ಇಲಾಖೆ ಕರೆ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ)ಯಲ್ಲಿಯೂ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಕೈ ಬರಹದ ಮೂಲಕ ಖಾತೆಯ ನೋಂದಣಿ ಸೆಪ್ಟೆಂಬರ್ 27ಕ್ಕೆ ಕೊನೆಯಾಗಿದೆ. ಸೆಪ್ಟೆಂಬರ್ 30ರ ಸೋಮವಾರದಿಂದಲೇ ಇ-ಖಾತಾ ಮೂಲಕ ಮಾತ್ರ ಆಸ್ತಿಗಳ ನೋಂದಣಿ ನಡೆಯಲಿದೆ ಎಂದು ಹೇಳಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆ ಮತ್ತು ವಸತಿ ಯೋಜನೆಗಳ ಆಸ್ತಿಗಳಿಗೆ ಯುನಿಫೈಡ್ ಲ್ಯಾಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಲ್ಲಿ ಇ-ಖಾತಾ ನೀಡಲಾಗಿದೆ. ಇದನ್ನು ಕಾವೇರಿ 2.0 ತಂತ್ರಾಶಕ್ಕೂ ಸಂಯೋಜನೆ ಮಾಡಲಾಗಿದ್ದು, ಇಲ್ಲಿಂದಲೇ ಮಾಹಿತಿ ಪಡೆದು ಆಸ್ತಿಗಳ ನೋಂದಣಿ ಮಾಡಬೇಕಿದೆ.


Click it and Unblock the Notifications