"ಮೊದಲೇ ಹೆದರಿದವನ ಮೇಲೆ ಹಾವು ಎಸೆದರಂತೆ" ಎಂಬುದು ಗಾದೆ ಮಾತು. ಸೋಮವಾರದಂದು (ಮಾರ್ಚ್ 9, 2020) ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ ಕಂಡ ಮೇಲೆ ಬರುತ್ತಿರುವ ವಿಶ್ಲೇಷಣೆಗಳು ಈ ಮಾತನ್ನು ನಿಜ ಮಾಡಿವೆ. ತೀರಾ ಇತ್ತೀಚಿನ ವರ್ಷಗಳ ತನಕ ಕೂಡ ಷೇರು ಮಾರ್ಕೆಟ್ ಈ ಪರಿಯ ರಭಸದ ಏರಿಳಿತ ಕಾಣುತ್ತಿರಲಿಲ್ಲ.
ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೆಲವೊಮ್ಮೆ ಈ ಬೆಳವಣಿಗೆಗಳಿಗೆ ಫಂಡಮೆಂಟಲ್ಸ್ ಕಾರಣವಾದರೆ, ಕೆಲವೊಮ್ಮೆ ಟೆಕ್ನಿಕಲ್ಸ್. ಇನ್ನೂ ಕೆಲ ಬಾರಿ ದೇಶೀಯ ಬೆಳವಣಿಗೆಗಳು ಕಾರಣವಾದರೆ, ಹಲವು ಬಾರಿ ಅಂತರರಾಷ್ಟ್ರೀಯ ಬೆಳವಣಿಗೆಗಳು ಮಾರುಕಟ್ಟೆಯ ಏರಿಳಿತಕ್ಕೆ ಚಾಲನೆ ನೀಡುತ್ತವೆ.
ಅಲ್ಪಕಾಲದಲ್ಲಿ ಅವಕಾಶ ಸೃಷ್ಟಿಸಿಕೊಡುತ್ತವೆ
ಸಾಮಾನ್ಯವಾಗಿ ಏರಿಕೆ ಕಾಣುವಾಗ ಸೆನ್ಸೆಕ್ಸ್ ಮೆಟ್ಟಿಲುಗಳನ್ನು ಏರುವಂತೆ ನಿಧಾನಕ್ಕೆ ಏರಿದರೆ, ಇಳಿಕೆ ಕಾಣುವಾಗ ಮಾತ್ರ ಸರಕ್ಕನೆ ಲಿಫ್ಟ್ ನಲ್ಲಿ ಇಳಿಯುವಂತೆ ಕುಸಿಯುತ್ತದೆ. ಅತ್ಯುತ್ತಮ ಎನಿಸಿದ ಕಂಪೆನಿಗಳ ಷೇರುಗಳು ಅಲ್ಪಕಾಲದಲ್ಲಿ ಹೇಗೆ ಅವಕಾಶ ಸೃಷ್ಟಿಸಿಕೊಡುತ್ತವೆ ಎಂಬುದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಅತ್ಯುತ್ತಮವಾದ ಉದಾಹರಣೆ.
2019ರ ಡಿಸೆಂಬರ್ ನಲ್ಲಿ 1,617 ರುಪಾಯಿ
ಒಂದು ತ್ರೈಮಾಸಿಕದಿಂದ ಮತ್ತೊಂದು ತ್ರೈಮಾಸಿಕದ ಮಧ್ಯೆ ಕಾಣುವ ಅತ್ಯಂತ ವೇಗದ ಏರಿಳಿತಗಳು ಬೇಗ ಲಾಭ ಪಡೆಯಲು ಅವಕಾಶಗಳನ್ನು ಸೃಷ್ಟಿಸಿಕೊಡುತ್ತವೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರು 2019ರ ಆಗಸ್ಟ್ ನಲ್ಲಿ ಪ್ರತಿ ಷೇರಿಗೆ 1,095 ರುಪಾಯಿ ತನಕ ಕುಸಿದಿತ್ತು. ಅಲ್ಲಿಮ್ದ ನಾಲ್ಕು ತಿಂಗಳೊಳಗೆ, ಅಂದರೆ 2019ರ ಡಿಸೆಂಬರ್ ನಲ್ಲಿ 1,617 ರುಪಾಯಿಯ ವಾರ್ಷಿಕ ಗರಿಷ್ಠ ಮಟ್ಟವನ್ನು ತಲುಪಿತು.
ತಲಾ 10 ಸಾವಿರ ಕೋಟಿ ರುಪಾಯಿಗಳ ಲಾಭ
ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ಎರಡು ತ್ರೈ ಮಾಸಿಕದಲ್ಲಿ ತಲಾ 10 ಸಾವಿರ ಕೋಟಿ ರುಪಾಯಿಗಳ ಲಾಭ ಗಳಿಸಿದೆ. ಇನ್ನು ಭಾರತದ ಕಂಪೆನಿಗಳಲ್ಲೇ ಮೊದಲ ಬಾರಿ ಹತ್ತು ಲಕ್ಷ ಕೋಟಿ ರುಪಾಯಿ ಬಂಡವಾಳ ಮೌಲ್ಯವನ್ನು ತಲುಪಿತು. ಎರಡೂವರೆ ತಿಂಗಳು ಕಳೆಯುವಷ್ಟರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 1,095 ರುಪಾಯಿಯೊಳಗೆ ಕುಸಿದು, ಮತ್ತೊಮ್ಮೆ ವಾರ್ಷಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಬಂಡವಾಳ ಮೌಲ್ಯ 7 ಲಕ್ಷ ಕೋಟಿ ರುಪಾಯಿಗೆ ಕುಸಿತ
ಸದ್ಯಕ್ಕೆ ಕಂಪೆನಿಯ ರಿಲಯನ್ಸ್ ಮಾರುಕಟ್ಟೆ ಬಂಡವಾಳ ಮೌಲ್ಯ 7 ಲಕ್ಷ ಕೋಟಿ ರುಪಾಯಿಗೆ ಕುಸಿದಿದೆ. ಈಗ ಮಾರ್ಚ್ ನಲ್ಲಿ ಹತ್ತು ದಿನ ಕಳೆದಿದೆ. ಮಾರ್ಚ್ ಕೊನೆಗೆ ಈ ತ್ರೈಮಾಸಿಕ ಹಾಗೂ ವಾರ್ಷಿಕ ಫಲಿತಾಂಶ ಬರಲಿದ್ದು, ಆಕರ್ಷಕ ಲಾಭಾಂಶದ ನಿರೀಕ್ಷೆಯೊಂದಿಗೆ ಪುಟಿದೇಳುವ ಸಾಧ್ಯತೆ ಇದೆ. ಈ ಕಂಪೆನಿಯು ಹಿಂದಿನ ವರ್ಷ ಪ್ರತಿ ಷೇರಿಗೆ 6.50 ರುಪಾಯಿ ಲಾಭಾಂಶ ಘೋಷಿಸಿತ್ತು. 2017ರಲ್ಲಿ 1:1 ಅನುಪಾತದಲ್ಲಿ ಬೋನಸ್ ಷೇರು ವಿತರಿಸಿದೆ. ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ಭಾರೀ ಪ್ರಮಾಣದಲ್ಲಿ ಏರಿಳಿತ ಪ್ರದರ್ಶಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಲ್ಪಕಾಲೀನ ಹೂಡಿಕೆಗೆ ಪರಿಗಣಿಸಬಹುದು ಅಲ್ಲವೆ?


Click it and Unblock the Notifications