ನಮ್ಮ ಮೆಟ್ರೋದಲ್ಲಿ ಪ್ರಸ್ತುತ ಗ್ರೀನ್ ಹಾಗೂ ಪರ್ಪಲ್ ಲೇನ್‌ಗಳಿದೆ. ಆದರೆ ಈಗಾಗಲೇ ಯೆಲ್ಲೋ, ರೆಡ್, ಮೊದಲಾದ ಲೇನ್‌ಗಳ ಕಾರ್ಯಾಚರಣೆ ನಡೆಯುತ್ತಿದೆ. ಈ ಪೈಕಿ ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರದವರೆಗಿನ ಯೆಲ್ಲೋ ಲೇನ್ ಯಾವಾಗ ತೆರೆಯಲಿದೆ ಎಂಬ ಸುಳಿವಿಲ್ಲದಿದ್ದರೂ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಕೆದಾರರಿಗೆ ಸಿಹಿಸುದ್ದಿಯಿದೆ.
ನಗರದಲ್ಲಿ ಅತೀ ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಕೂಡಾ ಒಂದಾಗಿದೆ. ಯೆಲ್ಲೋ ಲೇನ್ ಭಾಗವಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿದ ಕಾರಣದಿಂದಾಗಿ ಈ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಕೊಂಚ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಅಧಿಕಾರಿಗಳು ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯ ಸುತ್ತಲೂ ನಿರ್ಮಿಸಲಾಗುತ್ತಿರುವ ಐದು ಇಳಿಜಾರುಗಳಲ್ಲಿ (ರಾಂಪ್) ಮೂರು ಫೆಬ್ರವರಿ 2024 ರ ವೇಳೆಗೆ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ಈ ಇಳಿಜಾರುಗಳು (ರಾಂಪ್‌ಗಳು) ಸಿದ್ಧಗೊಂಡ ನಂತರ, ಹಳದಿ ಲೈನ್ ಕಾರಿಡಾರ್‌ನ ಡಬಲ್ ಡೆಕ್ಕರ್ ರೋಡ್-ಕಮ್-ಮೆಟ್ರೋ ಫ್ಲೈಓವರ್ ಬಳಸಿ ರಾಗಿಗುಡ್ಡ ಕಡೆಯಿಂದ ಬರುವ ವಾಹನ ಬಳಕೆದಾರರು ಸಿಗ್ನಲ್‌ನಲ್ಲಿ ನಿಲ್ಲದೆ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಗೆ ತಲುಪಲು ಸಾಧ್ಯವಾಗುತ್ತದೆ.
ಮತ್ತೊಂದೆಡೆ, ಬಿಟಿಎಂ ಲೇಔಟ್‌ನಿಂದ ಬರುವವರು ಹೊರ ವರ್ತುಲ ರಸ್ತೆ (ಎಚ್‌ಎಸ್‌ಆರ್ ಲೇಔಟ್ ಕಡೆಗೆ) ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ಅಪ್-ರಾಂಪ್ ಅನ್ನು ಬಳಸಬಹುದು. ಡಬಲ್ ಡೆಕ್ಕರ್ ಫ್ಲೈಓವರ್ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಇರಲಿದ್ದು, ಕೆಳ ಹಂತದಲ್ಲಿ ಮೋಟಾರು ವಾಹನಗಳಿಗೆ ಮತ್ತು ಮೇಲಿನ ಹಂತದಲ್ಲಿ ಮೆಟ್ರೋ ರೈಲುಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು, "ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಒಆರ್‌ಆರ್ ಮತ್ತು ಹೊಸೂರು ರಸ್ತೆಗೆ ಸಂಪರ್ಕಿಸಲು ರ‍್ಯಾಂಪ್‌ಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಜನನಿಬಿಡ ಜಂಕ್ಷನ್‌ನಲ್ಲಿ ನಿರ್ಮಾಣ ಕಾರ್ಯವನ್ನು ನಿರ್ವಹಿಸುವಾಗ ನಾವು ಟ್ರಾಫಿಕ್ ಪೊಲೀಸರೊಂದಿಗೆ ಸಮನ್ವಯ ಮಾಡಿಕೊಳ್ಳುತ್ತೇವೆ," ಎಂದು ಹೇಳಿದರು.
ರ‍್ಯಾಂಪ್ ಅನ್ನು ನಿರ್ಮಿಸುವಲ್ಲಿ ಪ್ರಮುಖ ಕಾರ್ಯವೆಂದರೆ ಯು (U) ಆಕಾರದಲ್ಲಿ 100 ಮೀ ಉದ್ದದ ನಾಲ್ಕು ಸ್ಪ್ಯಾನ್‌ಗಳನ್ನು ನಿರ್ಮಿಸುವುದು ಆಗಿದೆ. ಈ ಕಾಂಕ್ರಿಟ್ ನಿರ್ಮಾಣ ಜನವರಿಯಲ್ಲಿ ನಡೆಯಲಿದೆ. ಕಾಮಗಾರಿ ವೇಳೆ 390 ಟ್ರಕ್‌ಗಳನ್ನು 2,320 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಅನ್ನು ಕಾಂಕ್ರಿಟ್‌ಗಳ ನಿರ್ಮಾಣಕ್ಕೆ ಬಳಸಲಾಗುವುದು. ನಾವು ಅಗರ ಮತ್ತು ಲಕ್ಕಸಂದ್ರದ ಎರಡು ಸ್ಥಾವರಗಳಿಂದ ಕಾಂಕ್ರೀಟ್ ಅನ್ನು ಉತ್ಪಾದಿಸುತ್ತೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.


Click it and Unblock the Notifications