ಕಳೆದ ಕೆಲವು ತಿಂಗಳುಗಳಿಂದ ಕುಸಿತ ಕಾಣುತ್ತಿದ್ದ ರಿಟೇಲ್ ಹಣದುಬ್ಬರವು ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಳವಾಗಿದೆ. ಭಾರತದ ರಿಟೇಲ್ ಹಣದುಬ್ಬರವು ಜೂನ್ ತಿಂಗಳಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಮೇ ತಿಂಗಳಿನಲ್ಲಿ ಶೇಕಡ 4.31ರಷ್ಟಿದ್ದ ಹಣದುಬ್ಬರವು ಜೂನ್ ವೇಳೆಗೆ ಶೇಕಡ 4.81ರ ಮಟ್ಟಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ ಟೊಮೆಟೊ ಸೇರಿದಮತೆ ಹಲವಾರು ಆಹಾರ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ಹಣದುಬ್ಬರವು ಕೂಡಾ ಜಿಗಿದಿದೆ.
ಇನ್ನು ಆಹಾರ ಹಣದುಬ್ಬರವು ಕೂಡಾ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ತಿಂಗಳು ಅಂದರೆ ಮೇ ಯಲ್ಲಿ ಶೇಕಡ 3ಕ್ಕೆ ತಗ್ಗಿದ್ದ ಆಹಾರ ಹಣದುಬ್ಬರವು ಜೂನ್‌ನಲ್ಲಿ ಶೇಕಡ 4.5ಕ್ಕೆ ಜಿಗಿತವಾಗಿದೆ. ಪ್ರಮುಖವಾಗಿ ಮನೆಯಲ್ಲಿ ಪ್ರತಿ ನಿತ್ಯ ಬಳಕೆ ಮಾಡಲಾಗುವ ಧಾನ್ಯಗಳು, ಬೇಳೆಕಾಳುಗಳು, ಹಾಲು ಮತ್ತು ಟೊಮೆಟೊಗಳ ಬೆಲೆ ಏರಿಕೆಯಿಂದಾಗಿ ಆಹಾರ ಹಣದುಬ್ಬರವು ಏರಿಕೆಯಾಗಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 7ರಷ್ಟಿತ್ತು.

ಗ್ರಾಹಕರ ದರದ ವಿಚಾರಕ್ಕೆ ನಾವು ಬಂದಾಗ ಜನವರಿಯ ಬಳಿಕ ಈಗ ಜೂನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ನಗರ ಪ್ರದೇಶದಲ್ಲಿನ ಹಣದುಬ್ಬರವು ಸುಮಾರು ಶೇಕಡ 5ಕ್ಕೆ ತಲುಪಿದೆ. ನಗರ ಪ್ರದೇಶದಲ್ಲಿ ಆಹಾರ ಹಣದುಬ್ಬರವು ಒಟ್ಟಾರೆಯಾಗಿ ದುಪ್ಪಟ್ಟಾಗಿದೆ. ಮೇ ತಿಂಗಳಿನಲ್ಲಿ ಶೇಕಡ 2.4ರಷ್ಟಿದ್ದ ಹಣದುಬ್ಬರ, ಈಗ ಶೇಕಡ 4.3ಕ್ಕೆ ಏರಿಕೆ ಕಂಡಿದೆ.
ಆರ್‌ಬಿಐ ಸಹಿಷ್ಣು ಮಟ್ಟಕ್ಕಿಂತ ಕಡಿಮೆ
ಜೂನ್‌ನಲ್ಲಿ ರಿಟೇಲ್ ಹಣದುಬ್ಬರ ಏರಿಕೆಯಾಗಿದ್ದರೂ ಕೂಡಾ ಸತತ ನಾಲ್ಕನೇ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಹಣದುಬ್ಬರ ಸಹಿಷ್ಣು ದರ ಶೇಕಡ 6ಕ್ಕಿಂತ ಕಡಿಮೆಯಾಗಿ ಉಳಿದಿದೆ. ಜೂನ್ ತಿಂಗಳಿನಲ್ಲಿ ಮಾನ್ಸೂನ್ ಕಾರಣದಿಂದಾಗಿ ಆಹಾರ ಉತ್ಪನ್ನಗಳ ದರವು ಹೆಚ್ಚಳವಾಗುವುದು ಸಾಮಾನ್ಯವಾಗಿದೆ, ಆದ್ದರಿಂದಾಗಿ ಹಣದುಬ್ಬರವು ಕೂಡಾ ಅಧಿಕವಾಗಲಿದೆ ಎಂದು ಈ ಹಿಂದೆಯೇ ತಜ್ಞರುಗಳು ಅಭಿಪ್ರಾಯಿಸಿದ್ದರು.
ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಶೇಕಡ 6.52ಕ್ಕೆ ಏರಿಕೆಯಾಗಿದೆ. ಆದರೆ ಫೆಬ್ರವರಿ 2023ರಲ್ಲಿ ಸಿಪಿಐ ಹಣದುಬ್ಬರ ಕೊಂಚ ಇಳಿಕೆಯಾಗಿ ಶೇಕಡ 6.44ಕ್ಕೆ ತಲುಪಿದೆ. ಆದರೆ ಮಾರ್ಚ್‌ನಲ್ಲಿ ಶೇಕಡ 6ಕ್ಕಿಂತ ಕಡಿಮೆ ರಿಟೇಲ್ ಹಣದುಬ್ಬರವಿದ್ದು ಶೇಕಡ 5.66 ಆಗಿದೆ. ಏಪ್ರಿಲ್ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 4.70ರಷ್ಟಿದೆ. ಮೇ ರಿಟೇಲ್ ಹಣದುಬ್ಬರ 25 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದ್ದು ಶೇಕಡ 4.25 ಆಗಿತ್ತು. ಆದರೆ ಜೂನ್‌ನಲ್ಲಿ ಶೇಕಡ 4.81ಕ್ಕೆ ಏರಿಕೆಯಾಗಿದೆ.
ತಜ್ಞರುಗಳು ಏನು ಹೇಳುತ್ತಾರೆ?
ಇನ್ನು ಐಸಿಆರ್‌ಎನ ಮುಖ್ಯ ಅರ್ಥಶಾಸ್ತ್ರಜ್ಞೆ ಆಗಿರುವ ಅಧಿತಿ ನಾಯರ್, "ತರಕಾರಿಗಳ ದರ ಏರಿಕೆಯಿಂದಾಗಿ ಜುಲೈನ ರಿಟೇಲ್ ಹಣದುಬ್ಬರವು ಶೇಕಡ 5.3-5.5ರ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.2ರಷ್ಟಿರಲಿದೆ ಎಂದು ಆರ್‌ಬಿಐ ಈ ಹಿಂದೆ ತಿಳಿಸಿದೆ. ಆದರೆ ಅದಕ್ಕಿಂತ ಅಧಿಕ ಹಣದುಬ್ಬರ ಈ ತ್ರೈಮಾಸಿಕದಲ್ಲಿ ಇರಲಿದೆ," ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತರಕಾರಿಗಳ ದರವು ಜೂನ್, ಜುಲೈ ತಿಂಗಳಿನಲ್ಲಿ ಏರಿಕೆಯನ್ನು ಕಾಣುತ್ತಿದೆ. ಅದರಲ್ಲೂ ಪ್ರಮುಖವಾಗಿ ಟೊಮೆಟೊ ದರ ಹೆಚ್ಚಳವಾಗಿದೆ. ಆದರೆ ನಾವು ಕಳೆದ ವರ್ಷಕ್ಕೆ ಹೋಳಿಕೆ ಮಾಡಿದಾಗ ಶೇಕಡ 0.1ರಷ್ಟು ದರ ಕಡಿಮೆಯಿದೆ. ಕಳೆದ ಮೇನಲ್ಲಿದ್ದ ದರಕ್ಕೆ ಮತ್ತು ಈ ವರ್ಷದ ಮೇ ತಿಂಗಳ ದರಕ್ಕೆ ಹೋಲಿಕೆ ಮಾಡಿದಾಗ ಶೇಕಡ 8ರಷ್ಟು ದರ ಕಡಿಮೆಯಾಗಿದೆ.
ಪ್ರಮುಖವಾಗಿ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ತಿಂಗಳಿನಲ್ಲಿ ಹಣದುಬ್ಬರವು ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನು ಧಾನ್ಯಗಳು, ಬೇಳೆಕಾಳುಗಳ ದರವು ಇನ್ನಷ್ಟು ಹೆಚ್ಚಳವಾಗುತ್ತಾ ಸಾಗುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನಾವೀಸ್ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications