ಭಾರತದಲ್ಲಿ ಹಲವಾರು ವಸ್ತುಗಳ, ಆಹಾರ ಪದಾರ್ಥಗಳ, ತರಕಾರಿಗಳ ದರವು ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಿದೆ. ಈಗಾಗಲೇ ಜನರು ಸಾಮಾನ್ಯವಾಗಿ ದಿನ ನಿತ್ಯದ ಅಡುಗೆಗೆ ಬಳಸುವ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಬೆಲೆಯು ಹೆಚ್ಚಳವಾಗಿದೆ. ಈ ನಡುವೆ ಕರ್ನಾಟಕದಲ್ಲಿ ಈಗ ಅಕ್ಕಿ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಪ್ರಜಾವಾಣಿ ವರದಿ ಮಾಡಿದೆ.
ಈ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ. ಅದೆಷ್ಟೋ ಜಿಲ್ಲೆಗಳಲ್ಲಿ ಬರ ಕಾಡುತ್ತಿದೆ. ಪ್ರತಿ ವರ್ಷವು ಭತ್ತ ಬೆಳೆಗೆ ಒಂದು ಗುರಿತಯನ್ನು ನಿರ್ಧಾರ ಮಾಡಲಾಗಿರುತ್ತದೆ. ಆದರೆ ಈ ವರ್ಷ ನಿಗದಿತ ಗುರಿಗಿಂತ ಶೇಕಡ 35 ರಷ್ಟು ಭತ್ತ ಬೆಳೆ ಕಡಿಮೆಯಾಗಿದೆ. ಇದು ಸಾಮಾನ್ಯವಾಗಿಯೇ ಅಕ್ಕಿ ಬೆಲೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ.

ಅಕ್ಕಿ ಬೆಲೆ ಎಷ್ಟು ಏರಿಕೆ ಸಾಧ್ಯತೆ?
ಭತ್ತ ಬೆಳೆಯು ಕಡಿಮೆಯಾದ ಕಾರಣದಿಂದಾಗಿ ಮುಂದಿನ ನಾಲ್ಕು ತಿಂಗಳ ಒಳಗಾಗಿ ಕರ್ನಾಟಕ ರಾಜ್ಯದಲ್ಲಿ ಅಕ್ಕಿ ಬೆಲೆಯು ಸುಮಾರು ಶೇಕಡ 10 ರಿಂದ ಶೇಕಡ 20 ರಷ್ಟು ಏರಿಕೆಯಾಗಲಿದೆ. ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆ ಆರಂಭದಲ್ಲಿ ಅಕ್ಕಿ ಕೊರತೆಯಿಂದಾಗಿ ಧಾನ್ಯ ಕಡಿತ ಮಾಡಿ, ಹಣ ನೀಡುತ್ತಿದೆ. ಈಗ ಐದು ಕೆಜಿ ಅಕ್ಕಿ ಪೂರೈಕೆಗೂ ಸರ್ಕಾರಕ್ಕೆ ಕೊರತೆ ಉಂಟಾಗುವ ಸಾಧ್ಯತೆಯಿದೆ.
ಪ್ರಸ್ತುತ ಬೆಲೆ ಎಷ್ಟಿದೆ?
ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಸಾಮಾನ್ಯ ಸೋನಾ ಮಸೂರಿ ಅಕ್ಕಿ ದರ 6 ಸಾವಿರ ರೂಪಾಯಿ ಆಗಿದೆ. ಆರ್‌ಎನ್‌ಆರ್ ಸೋನಾ ತಳಿ ಅಕ್ಕಿ ಬೆಲೆ 6,500 ರೂಪಾಯಿ ಆಗಿದೆ.
ರಾಜಮುಡಿ ಅಕ್ಕಿ ಬೆಲೆ ಏರಿಕೆ
ಮೈಸೂರು ಜಿಲ್ಲೆಯ ತಿ.ನರಸೀಪುರ, ಕೆ.ಆರ್. ನಗರ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಅಧಿಕವಾಗಿ ರಾಜಮುಡಿ ಭತ್ತ ಬೆಳೆಯಲಾಗುತ್ತಿದೆ. "ಮೈಸೂರಿನಲ್ಲಿ ಎರಡು-ಮೂರು ತಿಂಗಳ ಹಿಂದೆ ಒಂದು ಕೆ.ಜಿಗೆ ರಾಜಮುಡಿ ಅಕ್ಕಿ ದರ ಸುಮಾರು 60 ರೂಪಾಯಿಯಿಂದ 63 ರೂಪಾಯಿ ಆಗಿತ್ತು. ಆದರೆ ಈಗ ಬರೋಬ್ಬರಿ 80 ರೂಪಾಯಿಯಿಂದ 90 ರೂಪಾಯಿವರೆಗೆ ತಲುಪಿದೆ," ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
"ರಾಜ್ಯದಲ್ಲಿ ಬೇಸಿಗೆಯಲ್ಲಿ ಭತ್ತದ ಉತ್ಪಾದನೆಯೂ ಶೇಕಡ 25ರಿಂದ 30ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಗಿರಣಿಗಳು ಹೊರರಾಜ್ಯದ ಭತ್ತವನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ," ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್ ತಿಳಿಸಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.
ಕಳೆದ ವರ್ಷ ಕರ್ನಾಟಕದಲ್ಲಿ ಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಭಿತ್ತನೆ ಮಾಡಲಾಗಿತ್ತು. ಈ ಬಾರಿ ಸುಮಾರು 7-8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆ ಮಾಡಲಾಗಿದೆ. ಇದು ಅಕ್ಕಿ ಉತ್ಪಾದನೆಯಲ್ಲಿ ಕುಸಿತವಾಗಲು ಕಾರಣವಾಗಿದೆ ಎಂದು ಅಕ್ಕಿ ಗಿರಣಿ ಮಾಲೀಕರು ಹೇಳುತ್ತಾರೆ.
ರಾಜ್ಯದಲ್ಲಿರುವ ಗಿರಣಿ ಮಾಹಿತಿ
ರಾಜ್ಯದಲ್ಲಿ ಒಟ್ಟಾರೆಯಾಗಿ ಎರಡು ಸಾವಿರಕ್ಕೂ ಅಧಿಕ ಅಕ್ಕಿ ಗಿರಣಿಗಳಿವೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಭತ್ತವು ಈ ಗಿರಣಿಗಳಿಗೆ ಪೂರೈಕೆ ಮಾಡಲಾಗುತ್ತದೆ.
ಆದರೆ ಈ ಬಾರಿ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಮಳೆಯ ಅಭಾವ ಕಾಣಿಸಿಕೊಂಡಿದೆ. ಮಳೆ ಕಡಿಮೆಯಾದ ಕಾರಣ ಭಿತ್ತನೆಯು ಕೂಡಾ ಕಡಿಮೆಯಾಗಿದೆ. ಪ್ರಸ್ತುತ ಕರ್ನಾಟಕದ ಗಿರಣಿಗಳು ತೆಲಂಗಾಣದ ಗೋದಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಭತ್ತದ ಮೇಲೆ ಅವಲಂಭಿಸಿದೆ. ತೆಲಂಗಾಣದಿಂದ ರಾಯಚೂರು ಸೇರಿದಂತೆ ಇತರೆ ಭಾಗದಲ್ಲಿರುವ ಗಿರಣಿಗಳಿಗೆ ಪ್ರತಿದಿನ 40-60 ಸಾವಿರ ಚೀಲಗಳಷ್ಟು ಭತ್ತ ಪೂರೈಕೆಯಾಗುತ್ತಿದೆ.


Click it and Unblock the Notifications