ಲಂಡನ್, ಅ. 25: ಭಾರತ ಮೂಲದ ರಿಷಿ ಸುನಕ್ ಬ್ರಿಟನ್‌ನ ಹೊಸ ಪ್ರಧಾನಿಯಾಗಿ ಇತಿಹಾಸ ಬರೆದಿದ್ದಾರೆ. ಬ್ರಿಟನ್ ರಾಜಕಾರಣಕ್ಕೆ ಬರುವ ಮುನ್ನವೇ ರಿಷಿ ಸುನಕ್ ಭಾರತೀಯರಿಗೆ ನಾರಾಯಣಮೂರ್ತಿ ಅಳಿಯನಾಗಿ ಪರಿಚಿತ. ಕನ್ನಡತಿ ಅಕ್ಷತಾ ಮೂರ್ತಿ ರಿಷಿ ಸುನಕ್ ಪತ್ನಿ. 2009ರಲ್ಲಿ ಬೆಂಗಳೂರಿನಲ್ಲಿ ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್ ವಿವಾಹವಾಗಿತ್ತು. ಅಂದು ಯಾರೂ ಕೂಡ ರಿಷಿ ಸುನಕ್ ಮುಂದೆ ಯುಕೆ ನಾಡಿನ ಪ್ರಧಾನಿಯಾಗುತ್ತಾರೆಂದು ಭಾವಿಸಿರಲಿಕ್ಕಿಲ್ಲ.
ಭಾರತದ ಎರಡನೆ ಅತಿ ದೊಡ್ಡ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳಾದ ಅಕ್ಷತಾ ಮೂರ್ತಿ ಅಕ್ಷರಶಃ ಆಗರ್ಭ ಶ್ರೀಮಂತೆ ಎನ್ನಲಡ್ಡಿ ಇಲ್ಲ. ಇನ್ಫೋಸಿಸ್‌ನಲ್ಲಿ ಈಕೆ ಹೊಂದಿರುವ ಷೇರುಗಳಿಂದ ಈ ವರ್ಷ ಬಂದ ಡಿವಿಡೆಂಡ್ (ಲಾಭಾಂಶ) ಬರೋಬ್ಬರಿ 126 ಕೋಟಿ ಎನ್ನಲಾಗಿದೆ.
ಶೇ. 0.93 ಷೇರು
ಒಂದು ವರದಿ ಪ್ರಕಾರ, ಇನ್ಫೋಸಿಸ್‌ನಲ್ಲಿ ಅಕ್ಷತಾ ಮೂರ್ತಿ ಶೇ. 0.93 ಷೇರುಗಳನ್ನು ಹೊಂದಿದ್ದಾರೆ. ಇನ್ಫೋಸಿಸ್ ಮಟ್ಟಕ್ಕೆ ಶೇ. 0.93 ಸಾಮಾನ್ಯ ಸಂಖ್ಯೆಯಲ್ಲ. ಇನ್ಫೋಸಿಸ್‌ನ 3,89,57,096 ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ಅಂದರೆ, 3.9 ಕೋಟಿ ಈಕ್ವಿಟಿ ಷೇರುಗಳ ಒಡತಿ ಅಕ್ಷತಾ ಮೂರ್ತಿ.
ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಇನ್ಫೋಸಿಸ್‌ನ ಒಂದು ಷೇರು ಇಂದು ಸುಮಾರು 1500 ರೂ ಆಸುಪಾಸಿನ ಬೆಲೆಯಲ್ಲಿ ವಹಿವಾಟಾಗುತ್ತಿದೆ. ಮೇ 31ರಂದು ಇನ್ಫೋಸಿಸ್ 2021-22ರ ಹಣಕಾಸು ವರ್ಷಕ್ಕೆ ತನ್ನ ಪ್ರತೀ ಷೇರಿಗೆ 16 ರೂ ಡಿವಿಡೆಂಡ್ ನೀಡಿತು. ಈ ಹಣಕಾಸು ವರ್ಷಕ್ಕೆ ಪ್ರತೀ ಷೇರಿಗೆ 16.5 ರೂನಂತೆ ಇನ್ಫೋಸಿಸ್ ಮಧ್ಯಂತರ ಲಾಭಾಂಶವನ್ನು ಪ್ರಕಟಿಸಿತು. ಈ ಎರಡೂ ಡಿವಿಡೆಂಡ್‌ಗಳಿಂದ ಪ್ರತೀ ಷೇರಿಗೆ 32.5 ರೂ ಸಿಕ್ಕಿದೆ. 3.9 ಕೋಟಿ ಷೇರುಗಳನ್ನು ಹೊಂದಿರುವ ಅಕ್ಷತಾ ಮೂರ್ತಿಗೆ 2022ರ ಈ ಒಂದು ವರ್ಷದಲ್ಲೇ ಡಿವಿಡೆಂಡ್ ಆಗಿ 126.6 ಕೋಟಿ ರೂಪಾಯಿ ಹಣ ಪಡೆದಿದ್ದಾರೆ.
ಇವತ್ತಿನ ಇನ್ಫೋಸಿಸ್ ಷೇರು ಬೆಲೆ 1526 ರೂ ಇದೆ. ಅಕ್ಷತಾ ಮೂರ್ತಿ ಅವರ ಪಾಲಿನ ಷೇರುಗಳ ಒಟ್ಟು ಬೆಲೆ ಸುಮಾರು 5,945 ಕೋಟಿ ರೂಪಾಯಿ ಆಗುತ್ತದೆ. ಕಳೆದ ವರ್ಷವೂ ಅಕ್ಷತಾ ಮೂರ್ತಿ ಇನ್ಫೋಸಿಸ್‌ನ ಡಿವಿಡೆಂಡ್‌ನಿಂದ 119.5 ಕೋಟಿ ರೂ ಪಡೆದಿದ್ದರು. ಇವೆಲ್ಲವನ್ನೂ ಗಣಿಸಿದರೆ ಅಕ್ಷತಾ ಆಸ್ತಿ ಮೌಲ್ಯ ಇನ್ನೂ ಹೆಚ್ಚಾಗುತ್ತದೆ.
ಭಾರತೀಯ ಪೌರತ್ವ
ಮೇಲಾಗಿ ರಿಷಿ ಸುನಕ್ ಜೊತೆ ಬ್ರಿಟನ್‌ನಲ್ಲೇ ವಾಸವಾಗಿದ್ದರೂ ಅಕ್ಷತಾ ಮೂರ್ತಿ ಬ್ರಿಟನ್ ಪೌರತ್ವ ಪಡೆದಿಲ್ಲ. ಭಾರತೀಯ ಪ್ರಜೆಯಾಗಿಯೇ ಮುಂದುವರಿದಿದ್ದಾರೆ. ಭಾರತದಲ್ಲಿ ಗಳಿಸುವ ಆದಾಯಕ್ಕೆ ಆಕೆ ತೆರಿಗೆ ಕಟ್ಟಬೇಕಿಲ್ಲ. ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲೆಂದೇ ಅಕ್ಷತಾ ಮೂರ್ತಿ ನಾನ್-ಡಾಮಿಸೈಲ್ ಸ್ಟೇಟಸ್‌ನಲ್ಲಿದ್ದಾರೆ ಎಂಬ ಟೀಕೆ ಬ್ರಿಟನ್‌ನಲ್ಲಿ ಇದೆ. ನಾನ್-ಡಾಮಿಸೈಲ್ ಸ್ಥಿತಿಯಲ್ಲಿ ಬ್ರಿಟನ್‌ನ ಒಬ್ಬ ವ್ಯಕ್ತಿ 15 ವರ್ಷಗಳವರೆಗೆ ವಿದೇಶಗಳಲ್ಲಿ ಗಳಿಸುವ ಸಂಪಾದನೆಗೆ ತೆರಿಗೆ ಪಾವತಿಸಬೇಕಿಲ್ಲ. ಈ ನಿಯಮವನ್ನು ಅಕ್ಷತಾ ಮೂರ್ತಿ ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಅರೋಪವಿದೆ.
ಅಂದಹಾಗೆ, ಇನ್ಫೋಸಿಸ್‌ನಲ್ಲಿ ನಾರಾಯಣಮೂರ್ತಿ ಕುಟುಂಬದವರು ಶೇ. 3.6ರಷ್ಟು ಷೇರು ಪಾಲುದಾರಿಕೆ ಹೊಂದಿದ್ದಾರೆ. ಸಂಸ್ಥಾಪಕ ನಾರಾಯಣಮೂರ್ತಿ ಬಳಿ ಶೇ. 0.40, ಸುಧಾ ಮೂರ್ತಿ ಬಳಿ ಶೇ. 0.82, ಮಗ ರೋಹನ್ ಮೂರ್ತಿ ಬಳಿ ಶೇ. 1.45 ಮತ್ತು ಅಕ್ಷತಾ ಮೂರ್ತಿ ಬಳಿ ಶೇ.. 0.93 ಷೇರು ಇವೆ.
ಅಕ್ಷತಾ-ರಿಷಿ ಪರಿಚಯ
ಸುಧಾ ಮೂರ್ತಿ ಅವರ ಹುಟ್ಟೂರು ಹುಬ್ಬಳ್ಳಿಯಲ್ಲಿ ಜನಿಸಿದ ಅಕ್ಷತಾ ಮೂರ್ತಿ ಶಾಲಾ ಜೀವನ ಬೆಂಗಳೂರಿನಲ್ಲೇ ಆಗಿದ್ದು. ಅಮೆರಿಕ ಕ್ಯಾಲಿಫೋರ್ನಿಯಾದ ಕ್ಲಾರೆಮಾಂಟ್ ಮೆಕೆನ್ನಾ ಕಾಲೇಜಿನಲ್ಲಿ ಎಕನಾಮಿಕ್ಸ್ ಮತ್ತು ಫ್ರೆಂಚ್ ಸಬ್ಜೆಕ್ಟ್‌ನಲ್ಲಿ ಪದವಿ ಪಡೆದ ಬಳಿಕ ಅಕ್ಷತಾ ಮೂರ್ತಿ ಲಾಸ್ ಏಂಜಲಿಸ್‌ನಲ್ಲಿ ಫ್ಯಾಷನ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಮರ್ಚಾಂಡೈಸಿಂಗ್ ಸಂಸ್ಥೆಯಲ್ಲಿ ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಪ್ಲೊಮಾ ಮಾಡಿದರು. ನಂತರ ಸ್ವಲ್ಪ ದಿನ ಕೆಲಸ ಮಾಡಿ 2006ರಲ್ಲಿ ಸ್ಟಾನ್‌ಫೋರ್ಡ್ ವಿವಿಯಲ್ಲಿ ಎಂಬಿಎ ಮಾಡಿದರು. ಇದೇ ವಿವಿಯಲ್ಲಿ ಓದುವಾಗ ಅಕ್ಷತಾ ಮೂರ್ತಿಗೆ ರಿಷಿ ಸುನಕ್ ಪರಿಚಯವಾಗಿದ್ದು. 2009ರಲ್ಲಿ ಇಬ್ಬರೂ ವಿವಾಹವಾದರು. ಈಗ ಕೃಷ್ಣ ಮತ್ತು ಅನೌಷ್ಕಾ ಎಂಬಿಬ್ಬರು ಮಕ್ಕಳು ಇವರಿಗಿದ್ದಾರೆ.
ರಿಷಿಗೆ ಸವಾಲಿನ ಜವಾಬ್ದಾರಿ
42 ವರ್ಷದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಮೊದಲ ಬಿಳಿಯೇತರ ಜನಾಂಗದ ವ್ಯಕ್ತಿ ಎನಿಸಿದ್ದಾರೆ. ಎರಡು ಶತಮಾನಗಳಲ್ಲಿ ಬ್ರಿಟನ್ ಪ್ರಧಾನಿ ಆಗಿರುವ ಅತಿ ಕಿರಿಯ ವ್ಯಕ್ತಿಯೂ ಅವರೆನಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ಬ್ರಿಟನ್ ಇರುವ ಹೊತ್ತಿನಲ್ಲೇ ರಿಷಿ ಸುನಕ್ ಪ್ರಧಾನಿಯಾಗಿದ್ದಾರೆ. ಹಿಂದೆ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ರಿಷಿ ಸುನಕ್ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದು ಅವರಿಗೆ ಪ್ರಧಾನಿ ಪಟ್ಟ ಸಿಗಲು ಪ್ರಮುಖ ಕಾರಣವಾಗಿರಬಹುದು.


Click it and Unblock the Notifications