ರಾಜ್ಯ ರಾಜಧಾನಿಯ ಬೆಳವಣಿಗೆ ಕಣ್ಣು ಕುಕ್ಕುವಂತಿದೆ. ಇತ್ತೀಚಿನ ವರ್ಷಗಳಲ್ಲಂತೂ ಕೇಳೋದೇ ಬೇಡ. ದಿನಕ್ಕೊಂದು ಬೆಳವಣಿಗೆಯಾಗುತ್ತಿದೆ. ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿರುವ ಬೆಂಗಳೂರಿನಲ್ಲಿ ವಾಸ ಮಾಡುವುದು ಸುಲಭವಲ್ಲ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಬದುಕಬೇಕೆಂದರೆ ಇಂತಿಷ್ಟು ಹಣವನ್ನ ಉಳಿಸಲೇಬೇಕಾಗುತ್ತದೆ.

ನಗರದಲ್ಲಿ ಐಟಿ ಉದ್ಯಮ, ಸ್ಟಾರ್ಟ್‌ಅಪ್‌ಗಳ ಬೆಳವಣಿಗೆ, ವಿದೇಶೀ ಹೂಡಿಕೆ ಮತ್ತು ನಗರೀಕರಣದಿಂದಾಗಿ ಬೆಂಗಳೂರಿನ ಜನಸಂಖ್ಯೆ ಹಾಗೂ ಜೀವನ ಶೈಲಿ ಬೆಳೆಯುತ್ತಲೇ ಇದೆ. ಆದರೆ, ಈ ಬೆಳವಣಿಗೆಗೆ ಅನುಗುಣವಾಗಿ ಜೀವನ ವೆಚ್ಚವೂ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದರಿಂದ ಆರ್ಥಿಕ ಒತ್ತಡ, ದಿನನಿತ್ಯದ ವೆಚ್ಚಗಳು, ಸಾರಿಗೆ, ಆಸ್ತಿ ತೆರಿಗೆ, ಆಹಾರ ಬೆಲೆಗಳು, ವಿದ್ಯುತ್ ಮತ್ತು ಇಂಧನ ದರಗಳ ಏರಿಕೆ ಮುಂತಾದ ಹಲವಾರು ಅಂಶಗಳು ನಗರದಲ್ಲಿ ವಾಸಿಸುವ ಜನರಿಗೆ ಭಾರೀ ಸವಾಲಾಗಿವೆ.
ಸಾರ್ವಜನಿಕ ಸಾರಿಗೆ ದರ ಏರಿಕೆ:
ಬೆಂಗಳೂರಿನಲ್ಲಿ ವಾಸಿಸುವ ಜನ ತಮ್ಮ ಸ್ವಂತ ವಾಹನಗಳನ್ನೇ ಬಳಸಲಾಗುವುದಿಲ್ಲ. ಸ್ವಂತ ವಾಹನಕ್ಕೆ ತಗಲುವ ವೆಚ್ಚ ಭರಿಸಲಾಗುವುದಿಲ್ಲ. ಅಲ್ಲದೇ ಟ್ರಾಫಿಕ್ ಜಾಮ್ ನಡುವೆ ಸ್ವಂತ ವಾಹನಗಳಲ್ಲಿ ತಮ್ಮ ಕೆಲಸಗಳಿಗೆ ತೆರಳುವುದಕ್ಕೂ ಆಗುವುದಿಲ್ಲ. ಹೀಗಾಗಿ ಹೆಚ್ಚು ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೋ ಮೇಲೆಯೇ ಅವಲಂಬಿತರಾಗಿದ್ದು, ಅವುಗಳ ಟಿಕೆಟ್ ದರವೂ ಹೆಚ್ಚಳವಾಗಿದೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಸಾರಿಗೆ ಸಂಸ್ಥೆಗಳು ದರಗಳನ್ನು ಹೆಚ್ಚಿಸುತ್ತಿರುವುದು ಸಾರ್ವಜನಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತರಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ 50-90% ಹೆಚ್ಚಳ ಮಾಡಿದೆ. ಇದು ಸಾವಿರಾರು ಪ್ರಯಾಣಿಕರನ್ನು ಆಘಾತಕ್ಕೊಳಗಾಗಿಸಿದೆ. ವಿಶೇಷವಾಗಿ ಪ್ರತಿದಿನ ಮೆಟ್ರೋ ಬಳಸುವವರಿಗೆ ಈ ಆರ್ಥಿಕ ಹೊರೆ ದೊಡ್ಡದಾಗಿದೆ. ಇನ್ನು ಜನವರಿಯಲ್ಲಿ ಕರ್ನಾಟಕ ಸರ್ಕಾರ BMTC ಬಸ್ ಪಾಸ್ ದರವನ್ನು 15% ಹೆಚ್ಚಿಸಿತು. ಇದರಿಂದಾಗಿ ಸಾಪ್ತಾಹಿಕ, ಮಾಸಿಕ ಬಸ್ ಪಾಸ್‌ಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರಿಗೆ ಸಾರಿಗೆ ಸೇವೆ ದುಬಾರಿಯಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ:
ಜೀವನ ಸಾಗಿಸೋಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಬೆಲೆಯೇ ಹೆಚ್ಚಳವಾಗಿವೆ. ದಿನಸಿ ವಸ್ತುಗಳು, ಹಾಲು, ಅಕ್ಕಿ, ಗೋಧಿ, ತರಕಾರಿಗಳು ಮುಂತಾದವುಗಳ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ತಂದಿದೆ. ಕರ್ನಾಟಕ ಹಾಲು ಒಕ್ಕೂಟ ಏಪ್ರಿಲ್ 1 ರಿಂದ ನಂದಿನಿ ಹಾಲಿನ ಬೆಲೆಯನ್ನು ಲೀಟರ್‌ಗೆ ₹4 ಹೆಚ್ಚಿಸಿದೆ. ಇದರೊಂದಿಗೆ, ಹಾಲಿನ ದರ ಪ್ರತಿ ಲೀಟರ್‍ಗೆ ₹46 ಆಗಿದ್ದು, ಸಾಮಾನ್ಯ ಕುಟುಂಬದ ಖರ್ಚನ್ನು ಹೆಚ್ಚಿಸಿದೆ.
ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ನಿರಂತರ ಏರಿಕೆ ಕಾಣುತ್ತಿದೆ. ಸದ್ಯ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ ₹102.84 ಆಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‍ಗೆ ₹88.95 ಆಗಿದೆ. ಇದರ ಪರಿಣಾಮವಾಗಿ, ಪ್ರಯಾಣ ದರ, ಲಾಜಿಸ್ಟಿಕ್, ಮತ್ತು ದೈನಂದಿನ ಖರ್ಚುಗಳಿಗೂ ಅಧಿಕ ವೆಚ್ಚ ಆಗುತ್ತಿದೆ.
ಇಷ್ಟೆಲ್ಲಾ ದರ ಏರಿಕೆಯ ನಡುವೆ ಟೋಲ್ ದರವೂ ಹೆಚ್ಚಾಗಿರುವುದನ್ನು ನೋಡಬಹುದಾಗಿದೆ. ಬೆಂಗಳೂರಿನ ಪ್ರಮುಖ ಹೆದ್ದಾರಿಗಳು ಹಾಗೂ ವಿಮಾನ ನಿಲ್ದಾಣ ರಸ್ತೆಗಳಲ್ಲಿ ಟೋಲ್ ದರ 5% ಹೆಚ್ಚಿಸಲಾಗಿದೆ. ಇದರಿಂದ ಪ್ರಯಾಣದ ವೆಚ್ಚ ಹೆಚ್ಚಾಗಿದ್ದು, ಕಾರು, ಟ್ಯಾಕ್ಸಿ ಹಾಗೂ ಸಾರ್ವಜನಿಕ ಸಾರಿಗೆ ಮೇಲೂ ಪರಿಣಾಮ ಬೀರುತ್ತದೆ. ಕಾರು, ಟ್ಯಾಕ್ಸಿ ಓಡಿಸುವವರು ದಿನವಿಡೀ ದುಡಿದರು ಬೇಕಾದಷ್ಟು ಹಣ ಹೊಂದಿಸಲಾಗಲ್ಲ. ಇದರ ನಡುವೆ ಈ ರೀತಿಯ ಬೆಲೆ ಏರಿಕೆ ಮತ್ತಷ್ಟು ತಲೆ ಬಿಸಿ ಉಂಟುಮಾಡುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಮದ್ಯದ ದರಗಳು ಪ್ರಚಂಡವಾಗಿ ಹೆಚ್ಚಾಗಿವೆ, ಇದರಿಂದಾಗಿ ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮದ್ಯ ಹೆಚ್ಚು ದುಬಾರಿಯಾಗಿದೆ. ಜೀವನ ವೆಚ್ಚದಲ್ಲಿ ಈ ಏರಿಕೆಗಳು ನಾಗರಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿರುವವು. ಸರ್ಕಾರವು ಈ ಹೆಚ್ಚಳಗಳನ್ನು ಅನಿವಾರ್ಯ ಕ್ರಮವೆಂದು ಸಮರ್ಥಿಸಿಕೊಂಡರೆ, ವಿರೋಧ ಪಕ್ಷಗಳು ಇದನ್ನು ಜನ ವಿರೋಧಿ ನೀತಿಗಳೆಂದು ಟೀಕಿಸುತ್ತಿವೆ.ಕೆಲವು ಜನರು ಹಣಕಾಸು ಯೋಜನೆಗಳ ಮೂಲಕ ಖರ್ಚನ್ನು ನಿಯಂತ್ರಿಸಲು ಸಲಹೆ ನೀಡುತ್ತಿದ್ದಾರೆ. ಇನ್ನು ಕೆಲವರು ಸರ್ಕಾರದ ನಿರ್ಧಾರಗಳನ್ನು ನ್ಯಾಯೋಚಿತವೆಂದು ಪರಿಗಣಿಸುತ್ತಿದ್ದಾರೆ.ಆದರೆ, ಹೆಚ್ಚಿನವರು ಬೆಂಗಳೂರು ನಗರದಲ್ಲಿ ಜೀವನ ನಡೆಸುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಜನರ ಜೀವನವೆಚ್ಚದ ಭಾರಿಯ ಏರಿಕೆಯಿಂದ ಸಾಮಾನ್ಯ ನಾಗರಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರಿಗೆ, ಆಹಾರ, ಇಂಧನ, ವಿದ್ಯುತ್, ಮದ್ಯ, ಹಾಗೂ ಆಸ್ತಿ ತೆರಿಗೆ ಮುಂತಾದ ಕ್ಷೇತ್ರಗಳಲ್ಲಿ ದರಗಳು ಏರಿಕೆಯಾಗಿದೆ. ಇದರಿಂದಾಗಿ ಸಾಧಾರಣ ವರ್ಗದ ಜನರು ತೀವ್ರ ಪೆಚ್ಚಿನಲ್ಲಿದ್ದಾರೆ. ರಾಜ್ಯ ಸರ್ಕಾರ ಈ ಎಲ್ಲ ದರ ಏರಿಕೆಗೆ ಅನಿವಾರ್ಯತೆಯನ್ನು ಕಾರಣವನ್ನಾಗಿ ನೀಡಿದರೆ, ಸಾರ್ವಜನಿಕ ವಲಯದಲ್ಲಿ ಈ ನಿರ್ಧಾರಗಳ ವಿರುದ್ಧ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ, ನಾವು ಖರ್ಚನ್ನು ತಗ್ಗಿಸಿಕೊಳ್ಳಲು ಸೂಕ್ತ ಬಜೆಟ್ ಯೋಜನೆಗಳ ಕಡೆಗೆ ಸಾಗುವುದು ಅತ್ಯಗತ್ಯ.


Click it and Unblock the Notifications