ಗುಲಾಬಿ ಬಣ್ಣದ ನೋಟು ಯಾರಿಗೆ ನೆನಪಿಲ್ಲ ಹೇಳಿ..ನೋಟ್ ಬ್ಯಾನ್ ಆದ ಸಂದರ್ಭ 2000 ರೂ. ಮುಖಬೆಲೆಯ ಪಿಂಕ್ ನೋಟ್ ಭಾರೀ ಸದ್ದು ಮಾಡಿತ್ತು. ಆದರೆ ಚಲಾವಣೆಗೆ ಬಂದು ಕೇವಲ ಏಳೇ ವರ್ಷದಲ್ಲಿ ಮತ್ತೆ ಇತಿಹಾಸದ ಕಾಲಗರ್ಭಕ್ಕೆ ಸರಿದುಹೋಗಿತ್ತು. ಈಗ್ಯಾಕೆ ಈ ವಿಷಯ ಅಂದ್ರೆ ಸಾರ್ವಜನಿಕರ ಬಳಿ ಇನ್ನು 6,691 ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟು ಇವೆಯಂತೆ.! ಹೌದು ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್‌ಬಿಐ ಈ ಕುರಿತ ಹೇಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದ್ದು 2000 ರೂ.ಗಳ ಕರೆನ್ಸಿ ನೋಟುಗಳಲ್ಲಿ 98% ಬ್ಯಾಂಕ್ ಗಳಿಗೆ ವಾಪಸಾತಿಯಾಗಿದ್ದು ಜನರ ಬಳಿ ಕೇವಲ 6,691 ಕೋಟಿ ರೂಪಾಯಿ ಮೌಲ್ಯದ ಕರೆನ್ಸಿಮಾತ್ರ ಉಳಿದುಕೊಂಡಿದೆ. ಒಂದು ರೀತಿ 2,000 ರೂ ನೋಟುಗಳ ಚಲಾವಣೆಯಲ್ಲಿ ಇದು ಭಾರಿ ಕುಸಿತವನ್ನು ಸೂಚಿಸುತ್ತದೆ. ಇದಕ್ಕೂ ಮೊದಲು ಆರ್‌ಬಿಐ ಪ್ರಕಾರ ಒಟ್ಟು ಮೌಲ್ಯವು 3.56 ಲಕ್ಷ ಕೋಟಿ ರೂ. ಒಟ್ಟು ಮೌಲ್ಯದ ನೋಟುಗಳಿತ್ತು. ಆದರೆ 2024 ರ ಡಿ. 31ರಂದು ಕೇವಲ 6,691 ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಸಾರ್ವಜನಿಕರ ಬಳಿ ಉಳಿದಿವೆ.

ಸರ್ಕಾರವು ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2000 ರೂಪಾಯಿ ನೋಟುಗಳನ್ನು ಸುಗಮವಾಗಿ ಮರುಪಡೆಯಲು ಅವಕಾಶ ಕಲ್ಪಿಸಿತ್ತು. ಬಳಿಕವೂ ಭಾರತೀಯ ರಿಸರ್ವ್ ಬ್ಯಾಂಕ್‌ನ 19 ವಿತರಣಾ ಕಚೇರಿಗಳಲ್ಲಿ ಈ ಆಯ್ಕೆಯು ಲಭ್ಯವಿದೆ. ಅಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಗುಲಾಬಿ ನೋಟುಗಳನ್ನು ಠೇವಣಿ ಮಾಡಬಹುದು.ಅಷ್ಟೇ ಅಲ್ಲದೇ, ಜನರು ತಮ್ಮ2000 ರೂಪಾಯಿ ಕರೆನ್ಸಿಯನ್ನು ತಮ್ಮ ಖಾತೆಗಳಿಗೆ ಕ್ರೆಡಿಟ್ ಮಾಡಲು ಇಂಡಿಯಾ ಪೋಸ್ಟ್ ಮೂಲಕ ಹಿಂದಿರುಗಿಸಬಹುದು.
ಚಲಾವಣೆಯಿಂದ ಹಿಂಪಡೆಯಲ್ಪಟ್ಟಿದ್ದರೂ, 2000 ರೂಪಾಯಿ ನೋಟುಗಳು ಇನ್ನೂ ಕಾನೂನು ಮಾನ್ಯತೆ ಹೊಂದಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ನೋಟುಗಳನ್ನು ಸ್ವೀಕರಿಸಲು ದೇಶಾದ್ಯಂತ 19 ಕಚೇರಿಗಳನ್ನು ಗೊತ್ತುಪಡಿಸಿದೆ. ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂ ಈ ಪ್ರಮುಖ ನಗರಗಳಲ್ಲಿ ಈ ಕಚೇರಿಗಳು ನೆಲೆಸಿವೆ. 1000 ಮತ್ತು 500 ರೂಪಾಯಿ ನೋಟುಗಳನ್ನು ರದ್ದುಪಡಿಸಿದ ನಂತರದ ಸರ್ಕಾರದ ಕ್ರಮದ ಭಾಗವಾಗಿ 2016 ರ ನವೆಂಬರ್‌ನಲ್ಲಿ 2000 ರೂಪಾಯಿ ನೋಟುಗಳನ್ನು ಪರಿಚಯಿಸಲಾಯಿತು.
2016ರಲ್ಲಿ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ, ಭಾರತ ಸರ್ಕಾರವು ದೇಶದಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಬಳಸುವುದನ್ನು ತಡೆಯಲು ಈ ನೋಟುಗಳನ್ನು ಅಮಾನ್ಯಗೊಳಿಸಿತು. ಈ ಕ್ರಮದ ಜೊತೆಗೆ, ದೇಶದಲ್ಲಿ ಹೊಸ 2000 ರೂಪಾಯಿ ಮುಖಬೆಲೆಯ ನೋಟನ್ನು ಪರಿಚಯಿಸಲಾಯಿತು. ಈ ಹೊಸ ನೋಟು ಹೆಚ್ಚು ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ನಕಲಿ ನೋಟುಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಯಿತು. ಈ ಎರಡು ಕ್ರಮಗಳ ಮೂಲಕ ಸರ್ಕಾರವು ಭ್ರಷ್ಟಾಚಾರ, ಕಪ್ಪು ಹಣ ಮತ್ತು ನಕಲಿ ಕರೆನ್ಸಿಯನ್ನು ತಡೆಯುವುದು ಮತ್ತು ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ಗುರಿ ಹೊಂದಿತ್ತು.


Click it and Unblock the Notifications