ಕರೆನ್ಸಿ ಇನ್ ಸರ್ಕ್ಯುಲೇಷನ್ (CiC) ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ 13% ಏರಿಕೆ ಕಂಡಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಅನಿಶ್ಚಿತತೆ ಎದುರಾಗಿರುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ನಗದು ಇರಿಸಿಕೊಳ್ಳುವುದಕ್ಕೆ ಮುಂದಾಗಿದ್ದರಿಂದ ಈ ಬೆಳವಣಿಗೆ ಕಂಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದತ್ತಾಂಶದ ಪ್ರಕಾರ, ಮಾರ್ಚ್ 31, 2020ಕ್ಕೆ 24,47,312 ಕೋಟಿ ರುಪಾಯಿ ಚಲಾವಣೆಯಲ್ಲಿ ಇತ್ತು. ಅಲ್ಲಿಂದ ಜನವರಿ 1, 2021ಕ್ಕೆ 13.2% ಹೆಚ್ಚಳ ಅಥವಾ 3,23,003 ಕೋಟಿ ಏರಿಕೆಯಾಗಿ, 27,70,315 ಕೋಟಿ ರುಪಾಯಿಯನ್ನು ತಲುಪಿದೆ. FY2020ರ ಏಪ್ರಿಲ್ ನಿಂದ ಡಿಸೆಂಬರ್ ಮಧ್ಯೆ 6% ಮಾತ್ರ ಜಾಸ್ತಿ ಆಗಿತ್ತು.
2020ರ ಕ್ಯಾಲೆಂಡರ್ ವರ್ಷದಲ್ಲಿ CiC 22.1 ಪರ್ಸೆಂಟ್ ಅಥವಾ 5,01,405 ಕೋಟಿ ರುಪಾಯಿ ಜಾಸ್ತಿ ಆಗಿದೆ. CiCಯಲ್ಲಿ ಬ್ಯಾಂಕ್ ನೋಟುಗಳು ಒಳಗೊಂಡಿರುತ್ತವೆ. ಸದ್ಯಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 2, 5, 10, 20, 50, 100, 200, 500 ಮತ್ತು 2000 ರುಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ.

ಇನ್ನು 50 ಪೈಸೆ, 1, 2, 5, 10 ಹಾಗೂ 20 ರುಪಾಯಿಯ ನಾಣ್ಯಗಳನ್ನು ಟಂಕಿಸಲಾಗುತ್ತದೆ. ಮೌಲ್ಯದ ದೃಷ್ಟಿಯಿಂದ ಹೇಳಬೇಕೆಂದರೆ, ಚಲಾವಣೆಯಲ್ಲಿ ಇರುವುದರಲ್ಲಿ ಮೌಲ್ಯವನ್ನು ಗಣನೆಗೆ ತೆಗೆದುಕೊಂಡರೆ 500, 2000 ರುಪಾಯಿ ಶೇ 83.4ರಷ್ಟಿದೆ. ಇನ್ನು ಸಂಖ್ಯಾ ದೃಷ್ಟಿಯಿಂದ ಶೇ 43.4ರಷ್ಟಿರುವ 10 ಹಾಗೂ 100 ರುಪಾಯಿ ನೋಟುಗಳು ಹೆಚ್ಚಿವೆ.


Click it and Unblock the Notifications