ನವದೆಹಲಿ, ಜೂನ್ 9: ಲೋಕಸಭೆ ಚುನಾವಣೆಯ ಫಲಿತಾಂಶ ದಿನದಂದು ಷೇರು ಮಾರುಕಟ್ಟೆ ಏಕಾಏಕಿ ಪತನಗೊಂಡು ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಪಾಯಿ ನಷ್ಟವಾಗಿರುವ ವಿವಾದ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 30 ಲಕ್ಷ ಕೋಟಿ ರೂ. ನಷ್ಟವಾಗಿತ್ತು.
ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶದ ವೇಳೆ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ಬಳಿಕ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಪ್ರಕರಣ ದೇಶದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ.
ಈ ವಿವಾದ ಬಳಿಕ ಷೇರು ಮಾರುಕಟ್ಟೆ ಕುಸಿತ ಮತ್ತು ಹೂಡಿಕೆದಾರರಿಗೆ ನಷ್ಟದ ಆರೋಪಗಳ ಬಗ್ಗೆ ವರದಿ ಸಲ್ಲಿಸಲು ಕೇಂದ್ರ ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ನಿರ್ದೇಶನ ನೀಡುವಂತೆ ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರಾಹುಲ್ ಗಾಂಧಿ ಆರೋಪವೇನು?
ಕೋಟ್ಯಂತರ ಜನರ ದುಡ್ಡು ನಷ್ಟವಾಗಲು ನೇರವಾಗಿ ಪ್ರಧಾನಿ, ಕೇಂದ್ರ ಗೃಹ ಸಚಿವರೇ ಹೊಣೆಯಾಗಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಫಲಿತಾಂಶ ಪ್ರಕಟಣೆಗೆ ಕೆಲವೇ ದಿನಗಳ ಮೊದಲು ಷೇರು ಮಾರುಕಟ್ಟೆಯ ಬಗ್ಗೆ ಏಕೆ ಹೇಳಿಕೆ ನೀಡಿದ್ದರು. ಭಾರತೀಯ ಚುನಾವಣಾ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ಆಗಿದೆ ಎಂದು ಹೇಳಿದರು.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಏಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಚುನಾವಣಾ ಫಲಿತಾಂಶಗಳ ನೈಜ ಡೇಟಾವನ್ನು ಹೊಂದಿರುವವರು, ಐಬಿ ವರದಿಗಳನ್ನು ಹೊಂದಿರುವವರು, ತಮ್ಮದೇ ಆಂತರಿಕ ಅಂಕಿ ಅಂಶಗಳನ್ನು ಹೊಂದಿರುವವರು, ಚಿಲ್ಲರೆ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಸಲಹೆ ನೀಡಿರುವುದು ದೊಡ್ಡ ಹಗರಣ ಎಂದು ಅವರು ಆರೋಪಿಸಿದ್ದರು. ಷೇರುಗಳನ್ನು ತಿರುಚಿದ್ದಕ್ಕಾಗಿ ಸೆಬಿ ತನಿಖೆಯಲ್ಲಿರುವ ಬ್ಯುಸಿನೆಸ್ ಗ್ರೂಪ್ ನ ಮಾಲೀಕತ್ವದ ಒಂದೇ ಮಾಧ್ಯಮಕ್ಕೆ ಎರಡೂ ಸಂದರ್ಶನಗಳನ್ನು ಏಕೆ ನೀಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಅಮೆರಿಕಾದ ಹಿಂಡೆನ್‌ಬರ್ಗ್ ಸಂಸ್ಥೆ ಅಧಾನಿ ಸಮೂಹದ ವಿರುದ್ಧ ಹಣಕಾಸು ಅವ್ಯವಹಾರಗಳ ಆರೋಪ ಹೊರಿಸಿದಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ಇಂಟರ್‌ಲೊಕ್ಯುಟರಿ ಅಪ್ಲಿಕೇಶನ್ ಮೂಲಕ ವಕೀಲ ವಿಶಾಲ್ ತಿವಾರಿ ಅವರು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ಸೆಬಿ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಕೇಳಿದ್ದಾರೆ, ಮಾತ್ರವಲ್ಲದೇ ಸಾಮಾನ್ಯ ನಾಗರಿಕರಿಗೆ ತಿಳಿದುಕೊಳ್ಳುವ ಹಕ್ಕಿದೆ ಎಂದು ಹೇಳಿದ್ದಾರೆ.
ಭಾರತೀಯ ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಲು ಫೂಲ್ ಪ್ರೂಫ್ ರೆಗ್ಯುಲೇಟರಿ ಚೌಕಟ್ಟಿನ ಅಗತ್ಯ ಎಂದು ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒತ್ತಿ ಹೇಳಿತ್ತು ಎಂಬುದನ್ನು ಉಲ್ಲೇಖಿಸಿರುವ ವಕೀಲರು, ಷೇರು ಮಾರುಕಟ್ಟೆಯಲ್ಲಿನ ಗಮನಾರ್ಹ ಕುಸಿತ ಮತ್ತು ವರದಿಯಾದ ಕೋಟಿಗಳ ನಷ್ಟವು ಗಮನಿಸಿದ್ರೆ ಇದರಿಂದ ಯಾವ ಬದಲಾವಣೆಯೂ ಆಗಿಲ್ಲ ಎಂದು ಹೇಳಿದ್ದಾರೆ.
"ಲೋಕಸಭೆ 2024 ರ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಸಮೀಕ್ಷೆ ಫಲಿತಾಂಶ ಪ್ರಕಟವಾದಾಗ ಷೇರು ಮಾರುಕಟ್ಟೆಯು ಗಣನೀಯ ಏರಿಕೆ ಕಂಡರೆ, ನೈಜ ಫಲಿತಾಂಶದ ದಿನ ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿತ್ತು " ಎಂದು ಅರ್ಜಿ ಹೇಳಿದೆ.
ಲೋಕಸಭೆ ಚುನಾವಣಾ ತೀರ್ಪಿನ ಟ್ರೆಂಡ್ ಆ ದಿನ ಷೇರುಪೇಟೆಗೆ ದೊಡ್ಡ ಆಘಾತ ನೀಡಿತ್ತು. ಸೆನ್ಸೆಕ್ಸ್ 4,300 ಅಂಕಕ್ಕಿಂತ ಹೆಚ್ಚು ಕುಸಿತ ಕಂಡಿದ್ದರಿಂದ ಒಂದೇ ದಿನ ಹೂಡಿಕೆದಾರರ 31 ಲಕ್ಷ ಕೋಟಿ ರೂ. ಮೌಲ್ಯದ ಷೇರು ಸಂಪತ್ತು ಕರಗಿ ಹೋಗಿತ್ತು.


Click it and Unblock the Notifications