ಹಲವು ದಿನಗಳಿಂದ ಷೇರು ಮಾರುಕಟ್ಟೆಯು ಕುಸಿತ ಕಾಣುತ್ತಿದೆ. ಗುರುವಾರ ನಡೆದ ವಹಿವಾಟಿನಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಏಪ್ರಿಲ್ 11 ರಿಂದ ಈವರೆಗೆ ಹೂಡಿಕೆದಾರರು ಒಟ್ಟು 34 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಕಂಡಿದ್ದಾರೆ.
ಬಿಎಸ್‌ಇ ಎಂ-ಕ್ಯಾಪ್ ರೂ 5.16 ಲಕ್ಷ ಕೋಟಿಗಳಷ್ಟು ಕುಸಿದು 241.15 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಹಿಂದಿನ ವಹಿವಾಟಿನಲ್ಲಿ 246.31 ಲಕ್ಷ ಕೋಟಿ ರೂಪಾಯಿಗೆ ಕುಸಿತ ಕಂಡಿತ್ತು. ಏಪ್ರಿಲ್ 11 ರಂದು ಬಿಎಸ್ಇ ಎಂ-ಕ್ಯಾಪ್ 275.17 ಲಕ್ಷ ಕೋಟಿ ರೂಪಾಯಿ ಆಗಿತ್ತು.
ಬುಧವಾರದಂದು ಷೇರು ಮಾರುಕಟ್ಟೆಗಳು ಎರಡು ತಿಂಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿತ ಕಂಡಿದೆ. ಇದಾದ ಬಳಿಕೆ ಸತತ ನಾಲ್ಕನೇ ದಿನ ಷೇರು ಮಾರುಕಟ್ಟೆ ತಲ್ಲಣಿಸಿದೆ. ಸೂಚ್ಯಂಕಗಳು ಶೇಕಡಾ 1.5 ರಷ್ಟು ಕುಸಿದಿದೆ. ಇದು ಕಳೆದ ಮಾರ್ಚ್ 9ರ ಬಳಿಕ ಮೊದಲ ಬಾರಿಗೆ ಇಷ್ಟು ಕೆಳಕ್ಕೆ ಇಳಿದಿದೆ. ಹಲವಾರು ದಿನಗಳಿಂದ ಷೇರು ಮಾರುಕಟ್ಟೆಯು ಇಷ್ಟು ತಲ್ಲಣಿಸಲು ಕೆಲವು ಪ್ರಮುಖ ಕಾರಣಗಳು ಇದೆ. ಆ ಕಾರಣಗಳು ಏನು ಎಂದು ತಿಳಿಯಲು ಮುಂದೆ ಓದಿ...
ಯುಎಸ್ ಹಣದುಬ್ಬರ
ರಾತ್ರೋರಾತ್ರಿ ಬಿಡುಗಡೆಯಾದ ದತ್ತಾಂಶವು ಯುಎಸ್‌ನಲ್ಲಿ ಹಣದುಬ್ಬರವು ಮಾರ್ಚ್‌ನಲ್ಲಿ 8.5 ಶೇಕಡಾದಿಂದ ಏಪ್ರಿಲ್‌ನಲ್ಲಿ 8.3 ಶೇಕಡಾಕ್ಕೆ ಕಡಿಮೆಯಾಗಿದೆ ಎಂದು ತೋರಿಸಿದೆ. ಆದರೆ ಶೇಕಡ 8.1ಕ್ಕೆ ಇಳಿಯಬಹುದು ಎಂಬ ನಿರೀಕ್ಞೆ ಹುಸಿಯಾಗಿದೆ. ಈ ಹಿಂದೆ ಯುಎಸ್‌ನಲ್ಲಿ ಹಣದುಬ್ಬರ 8.5 ಶೇಕಡಾದಿಂದ 8.1 ಶೇಕಡಕ್ಕೆ ಇಳಿಯಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಹಣದುಬ್ಬರವು ಉತ್ತುಂಗಕ್ಕೇರಿರಬಹುದು ಎಂದು ಸೂಚಿಸುತ್ತದೆ. ಈ ನಡುವೆ ಫೆಡರಲ್ ದರ ಏರಿಕೆ ಮುಂದುವರಿಯಬಹುದು. ಇವೆಲ್ಲವೂ ಷೇರು ಪೇಟೆ ಕುಸಿತಕ್ಕೆ ಕಾರಣವಾಗಿದೆ.
ಡಾಲರ್ ಏರಿಕೆ, ಏಷ್ಯಾ ಮಾರುಕಟ್ಟೆ ಕುಸಿತ
ಯುಎಸ್ ಹಣದುಬ್ಬರದ ನಡುವೆ ಡಾಲರ್ ಎರಡು ದಶಕದ ಗರಿಷ್ಠ ಮಟ್ಟದಲ್ಲಿ ಉಳಿದಿದೆ. ಈ ಬೆಳವಣಿಗೆಯು ಮಾರುಕಟ್ಟೆಯ ಷೇರುಗಳ ಮೇಲೆ ಪರಿಣಾಮವನ್ನು ಬೀರಿದೆ. ಆರು ಪ್ರಮುಖ ವಿಶ್ವ ಕರೆನ್ಸಿಗಳು ಕುಸಿದಿದೆ. ಏಷ್ಯಾದ ಬಹುತೇಕ ಷೇರುಗಳು ಅಪಾಯದಲ್ಲಿ ವಹಿವಾಟು ನಡೆಸುತ್ತಿದೆ. ಜಪಾನ್‌ನ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಎಂಎಸ್‌ಸಿಐ ಸೂಚ್ಯಂಕವು ಶೇಕಡಾ 0.92 ರಷ್ಟು ಕುಸಿದಿದೆ. ಜಪಾನ್‌ನ ನಿಕ್ಕಿ ಶೇಕಡಾ 1.01, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇಕಡಾ 1.05 ರಷ್ಟು ಕುಸಿದರೆ, ದಕ್ಷಿಣ ಕೋರ್‌ನ ಕೋಸ್ಪಿ ಶೇಕಡಾ 0.36 ರಷ್ಟು ಕಡಿಮೆಯಾಗಿದೆ.
ಮುಂದುವರಿದ ವಿದೇಶಿ ಹೂಡಿಕೆದಾರರ ಹೊರಹರಿವು
ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಬುಧವಾರದಂದು ರೂ.3,609.35 ಕೋಟಿಗಳಷ್ಟು ದೇಶೀಯ ಷೇರುಗಳ ನಿವ್ವಳ ಮಾರಾಟಗಾರರಾಗಿದ್ದಾರೆ ಎಂದು ತಾತ್ಕಾಲಿಕ ಡೇಟಾ ಸೂಚಿಸಿದೆ. ವಿದೇಶಿ ಬಂಡವಾಳ ಹೂಡಿಕೆದಾರರ ಹೊರಹರಿವು ಮೇ ತಿಂಗಳಲ್ಲಿ 17,403 ಕೋಟಿ ರೂ ಮತ್ತು 2022 ರಲ್ಲಿ ಇದುವರೆಗೆ 1,44,565 ಕೋಟಿ ರೂಪಾಯಿ ಆಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್, "ಡಾಲರ್ ಸೂಚ್ಯಂಕ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ಇದೆ. ಭಾರತೀಯ ರೂಪಾಯಿ ಆಕರ್ಷಣೀಯ ಆಗುವವರೆಗೂ ವಿದೇಶಿ ಹೂಡಿಕೆದಾರರ ಮಾರಾಟ ಮುಂದುವರಿಯುತ್ತದೆ," ಎಂದು ಅಭಿಪ್ರಾಯಿಸಿದ್ದಾರೆ.
ಭಾರತದ ಸಿಪಿಐ ಮೇಲೆ ಎಲ್ಲರ ಚಿತ್ತ
ಚಿಲ್ಲರೆ ಹಣದುಬ್ಬರವನ್ನು ಅಳೆಯುವ ಸಿಪಿಐ ಅತೀ ಮುಖ್ಯ ಅಂಶವಾಗಿದೆ. ಪ್ರಸ್ತುತ ಭಾರತದಲ್ಲಿನ ಚಿಲ್ಲರೆ ಹಣದುಬ್ಬರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಅಧಿಕವಾಗುವ ಸಾಧ್ಯತೆ ಇದೆ. ದೇಶದಲ್ಲಿ ಸಿಪಿಐ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡಾ 6.95 ರಿಂದ ಏಪ್ರಿಲ್‌ನಲ್ಲಿ ಶೇಕಡಾ 7.4 ಕ್ಕೆ ಏರುವ ಸಾಧ್ಯತೆಯಿದೆ ಎಂದು ನಿರ್ಮಲ್ ಬ್ಯಾಂಗ್ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ ಹೇಳಿದೆ. ದೇಶದಲ್ಲಿ ಖಾದ್ಯ ತೈಲ, ಇಂಧನದ ಬೆಲೆ, ಚಿಲ್ಲರೆ ಬೆಲೆಗಳ ಹೆಚ್ಚಳದ ಕಾರಣದಿಂದಾಗಿ ಚಿಲ್ಲರೆ ಹಣದುಬ್ಬರವು ಅಧಿಕವಾಗಿದೆ.


Click it and Unblock the Notifications