ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ದತ್ತಜಯಂತಿ (Datta Jayanti) ಆರಂಭವಾಗಿದೆ. ಕರ್ನಾಟಕದ ಅಯೋಧ್ಯೆಯೆಂದೇ ಜನಪ್ರಿಯತೆ ಪಡೆದಿರುವ ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ದತ್ತಮಾಲಾ ಧಾರಣೆಯ ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಇಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಈ ಹಿನ್ನೆಲೆ ಜಿಲ್ಲಾಡಳಿಯ ಬಿಗಿ ಬಂದೋಬಸ್ತ್ ಅನ್ನೂ ಕೈಗೊಂಡಿದೆ. ಇನ್ನು ಈ ಮೆರವಣಿಗೆಯಲ್ಲಿ 30 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಶೋಭಾಯಾತ್ರೆ ಹಿನ್ನೆಲೆ ಅಂಗಡಿಮುಂಗಟ್ಟುಗಳು ಬಂದ್ ಇರಲಿದ್ದು, ಎರಡು ದಿನ ಮದ್ಯ ಮಾರಾಟಕ್ಕೂ ನಿಷೇಧ ಹೇರಿದೆ.

ಬಿಗಿ ಬಂದೋಬಸ್ತ್‌ನಲ್ಲಿ ಕಾಫಿನಾಡು!
ಇದೀಗ ಚಿಕ್ಕಮಗಳೂರು ದೊಡ್ಡ ಹಬ್ಬಕ್ಕಾಗಿ ಸಜ್ಜಾಗಿದೆ. ಎಲ್ಲಿ ನೋಡಿದರೂ ಕೇಸರಿಯೇ ಕಾಣಿಸಿಕೊಳ್ಳುತ್ತಿದೆ. ಅಂದರೆ ಕಾಫಿನಾಡು ಸಂಪೂರ್ಣವಾಗಿ ಕೇಸರಿಮಯವಾಗಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು, ದತ್ತಮಾಲಾಧಾರಿಗಳ ಜೊತೆ ಶೋಭಾಯಾತ್ರೆ ನಡೆಸಲಿದ್ದಾರೆ. ಸದ್ಯ ಈ ಹಿನ್ನೆಲೆ ಖಾಕಿ ಫುಲ್ ಅಲರ್ಟ್ ಆಗಿದೆ. ಪೊಲೀಸರ ಸರ್ಪಗಾವಲಿನೊಂದಿಗೆ ಶೋಭಾಯಾತ್ರೆ ನಡೆಯಲಿದ್ದು, ಈ ವೇಳೆ ಅಂಗಡಿ ಮುಂಗಟ್ಟುಗಳು ಸೇರಿ, ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ.
ಎರಡು ದಿನ ಸಿಗಲ್ಲ "ಆಲ್ಕೋಹಾಲ್"!
ದತ್ತಜಯಂತಿ ಹಿನ್ನೆಲೆ ಎರಡು ದಿನ ಚಿಕ್ಕಮಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅಂದರೆ ಡಿಸೆಂಬರ್ 3 ರಂದು ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಚಿಕ್ಕಮಗಳೂರು ತಾಲೂಕಿನಲ್ಲಿ ಮತ್ತು ಡಿಸೆಂಬರ್ 4 ರಂದು ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಮತ್ತು ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ ಸಿ.ಎನ್.ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಇಲ್ಲೆಲ್ಲಾ ಪ್ರವೇಶ ನಿಷೇಧ!
ಇನ್ನು ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಮುಂಹಾಗೃತಾ ಕ್ರಮವಾಗಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಡಿಸೆಂಬರ್ 3 ರಂದ ಶೋಭಾಯಾತ್ರೆ ದೊಡ್ಡ ಮಟ್ಟದಲ್ಲಿ ನಡೆಯುವ ಹಿನ್ನೆಲೆ ವಾರದ ಸಂತೆಗೆ ಬ್ರೇಕ್ ನೀಡಲಾಗಿದೆ. ಡಿಸೆಂಬರ್ 4 ರಂದು ಪಾದುಕೆ ದರ್ಶನ ಇರುವುದರಿಂದ ಚಿಕ್ಕಮಗಳೂರು ನಗರ ಸೇರಿ ಹಲವು ಕಡೆ ಬಂದ್ ಇರಲಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಆ ಪ್ರಕಾರ ಇಂದಿನಿಂದ ಡಿಸೆಂಬರ್ 5ರ ಬೆಳಿಗ್ಗೆವರೆಗೂ ಚಂದ್ರದ್ರೋಣ ಪರ್ವತದ ಮುಳ್ಳಯನಗಿರಿ, ಸೀತಾಳಯ್ಯನಗಿರಿ, ದತ್ತಾತ್ರೇಯ ಪೀಠ, ಬಾಬಾಬುಡನ್ ಸ್ವಾಮಿ ದರ್ಗಾಗೆ ಪ್ರವಾಸಿಗರ ಆಗಮನವನ್ನು ನಿಷೇಧಿಸಲಾಗಿದೆ.
ಪೊಲೀಸ್ ಕಾವಲಿನಲ್ಲಿ ಚಿಕ್ಕಮಗಳೂರು
ದತ್ತ ಜಯಂತಿ ಹಿನ್ನೆಲೆ ಈಗಾಗಲೇ ಹಲವು ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಅಲ್ಲದೇ ಇದಕ್ಕಾಗಿ ಜಿಲ್ಲಾಡಳಿತ ಬಂದೋಬಸ್ತ್ ಕೈಗೊಂಡಿದೆ. ಅದಕ್ಕಾಗಿ 15ಕ್ಕೂ ಹೆಚ್ಚು ಡ್ರೋಣ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ವಿವಿಧ ನಗರಗಳಲ್ಲಿ 28 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಹಗಲು, ರಾತ್ರಿಯೆನ್ನದೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಿಯಮಗಳ ಪ್ರಕಾರ, ದೇಗುಲದ ಒಳಗೆ ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿದ್ದು, ಭಕ್ತಾದಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ಹೊರಡಿಸಲಾಗಿದೆ.


Click it and Unblock the Notifications