ನವದೆಹಲಿ, ಏಪ್ರಿಲ್ 22: ಕಂಪ್ಯೂಟರ್ ಚಿಪ್ ತಯಾರಕ ಇಂಟೆಲ್ ಸಂಸ್ಥೆಯೂ ಸಂತೋಷ್ ವಿಶ್ವನಾಥನ್ ಅವರನ್ನು ಇಂಡಿಯಾ ರೀಜನ್ ಬಿಸಿನೆಸ್ ಮ್ಯಾನೇಜಿಂಗ್ ಡೈರೆಕ್ಟರ್ (ಎಮ್‌ಡಿ) (ಭಾರತ ಪ್ರದೇಶದ ವ್ಯವಹಾರದ ಮುಖ್ಯಸ್ಥ) ಆಗಿ ನೇಮಕ ಮಾಡಿದೆ. ವಿಶ್ವನಾಥನ್ ಅವರು ಇಂಟೆಲ್‌ನಗೆ ಹೊಸಬರಲ್ಲ. ಅವರು ಇದೇ ಸಂಸ್ಥೆಯಲ್ಲಿ ಕಳೆದ ಸುಮಾರು 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
"ಭಾರತದ ತ್ವರಿತ ಬೆಳವಣಿಗೆ ಮತ್ತು ವ್ಯಾಪಾರ ಅವಕಾಶಗಳ ಲಾಭ ಪಡೆದುಕೊಳ್ಳುವ ದೃಷ್ಟಿಯಿಂದ ಈ ವರ್ಷದ ಮಾರ್ಚ್‌ನಲ್ಲಿ, ಇಂಟೆಲ್ ತನ್ನ SMG (ಮಾರಾಟ, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಗ್ರೂಪ್) ಸಂಸ್ಥೆಯೊಳಗೆ ಭಾರತವನ್ನು ಪ್ರತ್ಯೇಕ ಪ್ರದೇಶವೆಂದು ಘೋಷಿಸಿದೆ. ಸಂತೋಷ್ ವಿಶ್ವನಾಥನ್ ಅವರು ವಿಪಿ ಮತ್ತು ಎಂಡಿ ಆಗಿ ಹೊಸದಾಗಿ ರೂಪುಗೊಂಡ ಇಂಡಿಯ ರಿಜನ್ ಅನ್ನು ಮುನ್ನಡೆಸಲಿದ್ದಾರೆ. ಸಂತೋಷ್ ವಿಶ್ವನಾಥನ್ ಅವರಿಗಿರುವ ಅನುಭವವು ಮೌಲ್ಯ ಮತ್ತು ಗ್ರಾಹಕ-ಕೇಂದ್ರಿತತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ" ಎಂದು ಇಂಟೆಲ್ ಹೇಳಿದೆ.

ವಿಶ್ವನಾಥನ್ ಅವರು ಜುಲೈ 2022 ರಲ್ಲಿ ಭಾರತೀಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಈಗ ಇಂಟೆಲ್ ಭಾರತವನ್ನು ಪ್ರತ್ಯೇಕ ಪ್ರದೇಶವನ್ನಾಗಿ ಘೋಷಿಸಿದ್ದು, ಕಂಪನಿಯು ಮಾರಾಟ, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಗ್ರೂಪ್ ಏಷ್ಯಾ ಪೆಸಿಫಿಕ್ ಮತ್ತು ಜಪಾನ್ (APJ) ನ ಜನರಲ್ ಮ್ಯಾನೇಜರ್ (GM) ಆಗಿ ಹ್ಯಾನ್ಸ್ ಚುವಾಂಗ್ ಅವರನ್ನು ನೇಮಕ ಮಾಡುವುದಾಗಿ ಘೋಷಿಸಿದೆ.
ತೈವಾನ್‌ನಿಂದ ಹೊರಗಿರುವ ಹ್ಯಾನ್ಸ್, ಎಪಿಜೆ ಪ್ರದೇಶದಲ್ಲಿ ಇಂಟೆಲ್‌ನ ಒಟ್ಟಾರೆ ವ್ಯವಹಾರಕ್ಕೆ ಹ್ಯಾನ್ಸ್ ಚುವಾಂಗ್ ಜವಾಬ್ದಾರರಾಗಿರುತ್ತಾರೆ. ಮಾತ್ರವಲ್ಲದೇ ಆದಾಯದ ಬೆಳವಣಿಗೆಯನ್ನು ಹೆಚ್ಚಿಸುವುದು, ಹೊಸ ಅವಕಾಶಗಳನ್ನು ಸೃಷ್ಟಿಸಲು ಸ್ಥಳೀಯ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕ ಮತ್ತು ಪಾಲುದಾರರ ಸಂಬಂಧಗಳನ್ನು ಬಲಪಡಿಸುವುದು ಸೇರಿದಂತೆ ಅನೇಕ ವಿಭಾಗಗಳಲ್ಲಿ ಹ್ಯಾನ್ಸ್ ಚುವಾಂಗ್ ಕೆಲಸ ಮಾಡಲಿದ್ದಾರೆ ಎಂದು ಇಂಟೆಲ್ ಹೇಳಿದೆ.
ಸಂತೋಷ್ ವಿಶ್ವನಾಥನ್ ಅವರ ಬಗ್ಗೆ
ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಂಡಿರುವ ಸಂತೋಷ್ ಅವರು ಅಪಾರ ಅನುಭವ ಮತ್ತು ಅತ್ಯುತ್ತಮ ಶೈಕ್ಷಣಿಕ ಅರ್ಹತೆ ಹೊಂದಿದ್ದು ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಹೊಂದಿದ್ದಾರೆ. ಜೊತೆಗೆ ಕರ್ನಾಟಕದ ಮಣಿಪಾಲ್‌ನ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಇಂಟೆಲ್‌ನಲ್ಲಿ ಅವರ ದೀರ್ಘಾವಧಿಯ ಅವಧಿಯ ಸೇವೆ ಮತ್ತು ಮಾರುಕಟ್ಟೆಯ ಆಳವಾದ ತಿಳುವಳಿಕೆಯು ಭಾರತದಲ್ಲಿ ಬೆಳವಣಿಗೆ ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಅವರ ಪಾತ್ರ ನಿರ್ಣಾಯಕವಾಗಲಿದೆ.
ನೇಮಕದ ಬಗ್ಗೆ ವಿಶ್ವನಾಥನ್ ಹೇಳಿದ್ದೇನು?
ಅವರ ನೇಮಕಕುರಿತಂತೆ ಮಾತನಾಡಿದ ವಿಶ್ವನಾಥನ್ ಹೊಸ ಪ್ರಾದೇಶಿಕ ಗಮನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. "ಪ್ರತ್ಯೇಕ ಪ್ರದೇಶವನ್ನು ರಚಿಸುವ ಮೂಲಕ, ನಾವು ನಮ್ಮ ಗ್ರಾಹಕರೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತದಲ್ಲಿನ ನಮ್ಮ ಬಲವಾದ ಎಂಜಿನಿಯರಿಂಗ್ ಬೇಸ್ ಸೇರಿದಂತೆ ನಮ್ಮ ತಂಡಗಳನ್ನು ಸಕ್ರಿಯಗೊಳಿಸುತ್ತಿದ್ದೇವೆ. ಸುಮಾರು ಎರಡು ದಶಕಗಳ ಹಿಂದೆ ಭಾರತದಲ್ಲಿ ನನ್ನ ಇಂಟೆಲ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಭಾರತದ ವಿಭಾಗದಲ್ಲಿ ಕೆಲಸ ಮಾಡುವುದು ನಿಜವಾಗಿಯೂ ನನಗೆ ರೋಮಾಂಚನ" ಎಂದು ಅವರು ಹೇಳಿದ್ದಾರೆ.


Click it and Unblock the Notifications