ನವದೆಹಲಿ, ಮಾರ್ಚ್ 23: ಇಡೀ ದೇಶದೆಲ್ಲೆಡೆ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿರುವ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಭಾರತೀಯ ಚುನಾವಣಾ ಆಯೋಗವು ನಿನ್ನೆ ಮೂರನೇ ಬಾರಿಗೆ ಎಲೆಕ್ಟೋರಲ್ ಬಾಂಡ್‌ನ ಸಮಗ್ರ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಹೊಸದಾಗಿ ಅಪ್‌ಲೋಡ್ ಮಾಡಿರುವ ದಾಖಲೆಯು ಪಕ್ಷವಾರು ನಗದೀಕರಿಸಿರುವ ಹಣದ ಮೊತ್ತ, ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಒಳಗೊಂಡಿದೆ. ಅಲ್ಲದೆ, ಈಗಿನ ದಾಖಲೆಯು ಆಲ್ಫಾಬೆಟಿಕ್ ಆರ್ಡರ್‌ನಲ್ಲಿ ಖರೀದಿಯಾಗಿರುವ ಬಾಂಡ್‌ಗಳು ಹಾಗೂ ರಾಜಕೀಯ ಪಕ್ಷಗಳು ಸ್ವೀಕರಿಸಿರುವ ಫಂಡ್ ಮಾಹಿತಿ ಇದೆ.

ದೇಣಿಗೆ ನೀಡಿರುವವರು ಹಾಗೂ ಅದನ್ನು ಸ್ವೀಕರಿಸಿದವರ ಎರಡು ಪ್ರತ್ಯೇಕ ಮಾಹಿತಿಯನ್ನು ಚುನಾವಣಾ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಹಾಕಲಾಗಿದೆ. ಆ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ತಮ್ಮ ಬಳಿಯಿದ್ದ ಎಲ್ಲ ಮಾಹಿತಿಯನ್ನು ಸುಪ್ರೀಂಕೋರ್ಟ್ ಆದೇಶದಂತೆ ಪ್ರಕಟಿಸಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬಾಂಡ್‌ಗಳಿಂದ ದೇಣಿಗೆ ಸ್ವೀಕರಿಸಿದ ಪಕ್ಷಗಳ ಪೈಕಿ ಬಿಜೆಪಿ ಮುಂಚೂಣಿಯಲ್ಲಿದ್ದು, ಅದರ ಒಟ್ಟು ಮೊತ್ತ 8632 ಕೋಟಿ ರೂ. ಬಳಿಕದ ಸ್ಥಾನದಲ್ಲಿ ತೃಣಮೂಲ ಕಾಂಗ್ರೆಸ್‌ನದ್ದು. ಈ ಪಕ್ಷ 3305 ಕೋಟಿ ದೇಣಿಗೆ ಸ್ವೀಕರಿಸಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ 3146 ಕೋಟಿ ರೂ., ಬಿಎಸ್‌ಆರ್ 1806 ಕೋಟಿ, ಬಿಜು ಜನತಾದಳ-861 ಕೋಟಿ ರೂ., ಡಿಎಂಕೆ-648 ಕೋಟಿ ರೂ., ವೈಎಸ್‌ಆರ್ ಕಾಂಗ್ರೆಸ್-472 ಕೋಟಿ ರೂ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಹೊಸ ದಾಖಲೆಯಂತೆ ಬಾಂಡ್ ಖರೀದಿಸಿರುವವರ ಹೆಸರು, ಅದರ ಮೌಲ್ಯ, ನಿಗದಿತ ನಂಬರ್, ಪಕ್ಷಗಳ ಹೆಸರು, ನಗದೀಕರಿಸಿದ ಮೊತ್ತ, ಹಣ ಸ್ವೀಕರಿಸಿದ ಪಕ್ಷಗಳ ಬ್ಯಾಂಕ್ ಖಾತೆಗಳ ಸಂಖ್ಯೆ, ಬಾಂಡ್ ನಗದೀಕರಿಸಿದ ಹಣದ ಮೊತ್ತ ಇತ್ಯಾದಿ ವಿವರಗಳನ್ನು ಒಳಗೊಂಡಿದೆ.
ಮೆಗಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಟೊರೆಂಟ್ ಫಾರ್ಮಾಸುಟಿಕಲ್ಸ್ ಲಿಮಿಟೆಡ್, ಬಿಜಿ ಶ್ರೈಕಿ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಲಿಮಿಟೆಡ್, ಬಜಾಜ್ ಆಟೊ ಲಿಮಿಟೆಡ್, ಟೆಕ್ ಮಹೀಂದ್ರ ಲಿಮಿಟೆಡ್, ಸೈಸ್ ಜೆಟ್ ಲಿಮಿಟೆಡ್, ವರ್ಧಮಾನ್ ಟೆಕ್ಸ್‌ಟೈಲ್ ಲಿಮಿಟೆಡ್ ಮುಂತಾದವುಗಳು ಕೆಲವು ಪ್ರಮುಖ ಚುನಾವಣಾ ಬಾಂಡ್ ಖರೀದಿಸಿರುವ ಕಂಪೆನಿಗಳು.
ಆಸ್ಟೀನ್ ಪ್ಲೈವುಡ್ ಪ್ರೈವೆಟ್ ಲಿಮಿಟೆಡ್, ಅಭಿನಂದನ್ ಸ್ಟಾಕ್ ಬ್ರೋಕಿಂಗ್ ಪ್ರೈವೆಟ್ ಲಿಮಿಟೆಡ್, ಕ್ರೆಸೆಂಟ್ ಪವರ್ ಲಿಮಿಟೆಡ್, ಡೆಮ್ಪೊ ಇಂಡ್ ಪ್ರೈವೆಟ್ ಲಿಮಿಟೆಡ್, ನವಹಿಂದ್ ಪೇಪರ್ಸ್ ಅಂಡ್ ಪಬ್ ಇನ್ನೂ ಕೆಲವು ದೇಣಿಗೆ ಕೊಟ್ಟಿರುವ ಕಂಪೆನಿಗಳು.
ಇದಕ್ಕೂ ಮೊದಲು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಯೂನಿಕ್ ಬಾಂಡ್ ಸಂಖ್ಯೆ ಸೇರಿದಂತೆ ಎಲ್ಲ ದಾಖಲೆಗಳನ್ನು ಕೂಡ ನೀಡುವ ಮೂಲಕ ಬಾಂಡ್ ಖರೀದಿದಾರರು ಹಾಗೂ ಅದನ್ನು ಸ್ವೀಕರಿಸಿದ ಪಕ್ಷಗಳ ಹೆಸರನ್ನು ಬಹಿರಂಗಪಡಿಸಿರುವುದಾಗಿ ಎಸ್‌ಬಿಐ ಬ್ಯಾಂಕ್ ತಿಳಿಸಿತ್ತು.


Click it and Unblock the Notifications