ಟೆಲಿಗ್ರಾಂ, ವಾಟ್ಸಾನ್ , ಫೇಸ್ ಬುಕ್ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಹೂಡಿಕೆ ಮಾಡಿ ವಂಚನೆಗೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವ ವ್ಯಕ್ತಿಗಳು, ಖರೀದಿದಾರರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ.
ಹೂಡಿಕೆ,ಅಥವಾ ಷೇರು ಮಾರುಕಟ್ಟೆ ಸೋಗಿನಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ವಿಚಾರವಾಗಿ ವಿಶ್ವ ಹೂಡಿಕೆದಾರರ ಸಪ್ತಾಹ 2024 ರಲ್ಲಿ ಮಾತನಾಡಿ "ಹೂಡಿಕೆದಾರರು ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಲ್ಲಿ ನೋಂದಾಯಿಸಲಾದ ಘಟಕಗಳನ್ನು ಮಾತ್ರ ನಂಬಬೇಕು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಕುಮಾರ್ ಎಚ್ಚರಿಸಿದ್ದಾರೆ. ಅನುಮಾನಗಳ ಬಂದ ತಕ್ಷಣ ಸೆಬಿಯಲ್ಲಿ ನೋಂದಾಯಿತ ವ್ಯಕ್ತಿಗಳ ಅಥವಾ ಸಂಸ್ಥೆಗಳ ಮಾಹಿತಿಯು ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ಕೂಲಂಕುಶವಾಗಿ ಪರೀಕ್ಷಿಸಿಕೊಳ್ಳಿ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಇದೇ ವಿಚಾರವಾಗಿ ಗೃಹ ಸಚಿವಾಲಯವು ತನ್ನ ಎಕ್ಸ್ ಪ್ಲಾಟ್‌ಫಾರ್ಮ್ (@Cyberdost) ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ, "ಎಚ್ಚರ! ಕಡಿಮೆ ಅಪಾಯದೊಂದಿಗೆ ಹೆಚ್ಚಿನ ರಿಟರ್ನ್ಸ್ ಭರವಸೆ ನೀಡುವ ನಕಲಿ ಹೂಡಿಕೆ ಸಾಮಾಜಿಕ ಮಾಧ್ಯಮ ಗುಂಪುಗಳು ಎಲ್ಲೆಡೆ ಹುಟ್ಟಿಕೊಳ್ಳುತ್ತಿವೆ. ಈ ವಂಚನೆಗಳಿಗೆ ನೀವುಬಲಿಯಾಗಬೇಡಿ! ಹೂಡಿಕೆಗಾಗಿ ಸೆಬಿಯಿಂದ ಅನುಮೋದಿಸಲ್ಪಟ್ಟ ಅಪ್ಲಿಕೇಶನ್‌ಗಳನ್ನು ಬಳಸಿ, ಅವುಗಳ ಸಾಮಾನ್ಯತೆಯನ್ನು ಪರಿಶೀಲಿಸಿ ಮತ್ತು ಹೂಡಿಕೆ ಮಾಡುವ ಮೊದಲು ವಿಶ್ವಾಸಾರ್ಹ ಮೂಲಗಳನ್ನು ಸಂಪರ್ಕಿಸಿ" ಎಂದು ಹೇಳಿದೆ.
ಅಲ್ಲದೆ, ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ) ಸಹ ಸ್ಟಾಕ್ ಮಾರ್ಕೆಟ್ ವಂಚನೆಗಳಿಂದ ಸುರಕ್ಷಿತವಾಗಿರಲು ಈ ವಿಷಯದ ಬಗ್ಗೆ ಹನ್ನೆರಡಕ್ಕೂ ಹೆಚ್ಚು ಎಚ್ಚರಿಕೆಗಳನ್ನು ಹೊರಡಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಾದ YouTube, ಟೆಲಿಗ್ರಾಮ್ ಮತ್ತು WhatsApp ಗಳಲ್ಲಿ ಹೆಚ್ಚುತ್ತಿರುವ ಸ್ಟಾಕ್ ಮಾರುಕಟ್ಟೆ ವಂಚನೆಗಳು ಗಂಭೀರ ಸಮಸ್ಯೆಯಾಗಿದೆ. ವಂಚಕರು ಹೆಚ್ಚಿನ ಲಾಭದ ಆಸೆಯಿಂದ ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಇದಲ್ಲದೆ, ಕೆಲವು ತಿಂಗಳ ಹಿಂದೆ ಕಾಂದಿವಲಿಯ ಉದ್ಯಮಿಯೊಬ್ಬರು ಷೇರು ಮಾರುಕಟ್ಟೆ ವಂಚನೆಗೆ ಬಲಿಯಾಗಿ ಸುಮಾರು 1.25 ಕೋಟಿ ರೂ. ಕಳೆದುಕೊಂಡಿದ್ದರು. ಜುಲೈ ತಿಂಗಳಿನಲ್ಲಿ ಸ್ಟಾಕ್ ಮಾರುಕಟ್ಟೆಯ ಹೂಡಿಕೆಯಲ್ಲಿ ಹೆಚ್ಚಿನ ಆದಾಯವನ್ನು ನೀಡುವ ಭರವಸೆಯ Instagram ಜಾಹೀರಾತನ್ನು ನೋಡಿ ಈ ಉದ್ಯಮಿ ವಂಚನೆಗೊಳಗಾಗಿದ್ದರು.
ವಂಚಕರ ಬಲೆಗೆ ಸುಶಿಕ್ಷಿತ ಹೂಡಿಕೆದಾರರು ಬೀಳುತ್ತಿರುವುದು ಖೇದಕರ ಸಂಗತಿಯಾಗಿದೆ. ಮೋಸ, ವಂಚನೆ ಎಸಗಿ ಹಣ ದೋಚಲು ಅತ್ಯಾಧುನಿಕ ತಂತ್ರಗಳನ್ನು ವಂಚಕರು ಬಳಸುತ್ತಿದ್ದಾರೆ. ವಂಚಕರು ತಮ್ಮ ತಂತ್ರಗಳನ್ನು ಹಿಂದಿಗಿಂತಲೂ ಬಹಳ ಪರಿಷ್ಕರಿಸಿದ್ದು ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಮತ್ತು ಸಂಭಾವ್ಯ ಸಂತ್ರಸ್ತ್ರರ ವಿಶ್ವಾಸವನ್ನು ಪಡೆಯಲು ಸುಧಾರಿತ ತಂತ್ರಗಳನ್ನು ಬಳಸುತ್ತಾರೆ. ಹೀಗಾಗಿ ಯಾವುದೇ ಹೂಡಿಕೆಯ ಅವಕಾಶದ ಬಗ್ಗೆ ಸಂಪೂರ್ಣ ಸಂಶೋಧನೆ ನಡೆಸುವುದು, ಅದರಲ್ಲಿ ಒಳಗೊಂಡಿರುವ ವ್ಯಕ್ತಿಗಳ ಗುರುತು ಪರಿಶೀಲನೆ ಅಥವಾ ಕಂಪನಿಗಳ ನ್ಯಾಯಸಮ್ಮತತೆಯನ್ನು ಕೂಲಕುಂಶವಾಗಿ ಪರಿಶೀಲಿಸುವುದು ಮತ್ತು ಖಾತರಿಪಡಿಸಿದ ಆದಾಯ ಅಥವಾ ಕನಿಷ್ಠ ಅಪಾಯದ ಭರವಸೆಗಳ ಬಗ್ಗೆ ಎಚ್ಚರದಿಂದಿರುವುದು ಅತ್ಯಗತ್ಯ
ನಕಲಿ ಹೂಡಿಕೆ ಸಲಹೆಗಳನ್ನು ಗುರುತಿಸುವುದು ಹೇಗೆ?
ಹೆಚ್ಚಿನ ಲಾಭದ ಭರವಸೆ: ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ನೀಡುವ ಭರವಸೆ ನೀಡುವ ಯಾವುದೇ ಹೂಡಿಕೆಯನ್ನು ಕಣ್ನುಮುಚ್ಚಿ ನಂಬದೇ ಅನುಮಾನದಿಂದಲೇ ಕಾಣುವುದು ಉತ್ತಮ.
ಕಡಿಮೆ ಅಪಾಯದ ಭರವಸೆ: ಹೂಡಿಕೆಯಲ್ಲಿ ಯಾವುದೇ ಅಪಾಯವಿಲ್ಲ ಎಂದು ಹೇಳುವ ಯಾವುದೇ ಹೂಡಿಕೆಯನ್ನು ನಂಬಬೇಡಿ. ಹೆಚ್ಚಿನ ಲಾಭ ಗಳಿಸುವುದರಲ್ಲಿ ರಿಸ್ಕ್ ಕೂಡಾ ಅಷ್ಟೇ ಹೆಚ್ಚಿರುತ್ತದೆ. ಹೀಗಾಗಿ ಯಾವುದೇ ಅಪಾಯವಿಲ್ಲ ಎನ್ನುವುದರಲ್ಲೇ ಸಂಶಯ ಅಡಗಿರುತ್ತದೆ
ಅಧಿಕೃತ ಮಾಹಿತಿಯ ಕೊರತೆ: ಕಂಪನಿ ಅಥವಾ ವ್ಯಕ್ತಿಯ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿಲ್ಲದಿದ್ದರೆ ಎಚ್ಚರ ವಹಿಸಿ. ಯಾವುದೇ ಕಾರಣ ಹೂಡಿಕೆ ಮಾಡಬೇಡಿ. ಇದಲ್ಲದೇ ನಕಲಿ ಕಂಪನಿಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.
ಒತ್ತಡ: ತಕ್ಷಣ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೇರುವ ಯಾವುದೇ ಹೂಡಿಕೆಯನ್ನು ತಪ್ಪಿಸುವುದು ಬಹಳಷ್ಟು ಉತ್ತಮ.


Click it and Unblock the Notifications