ಹೊಸ ದಾಖಲೆಯ ಮಟ್ಟವನ್ನು ತಲುಪಿದ ಬಳಿಕ ಭಾರತೀಯ ಷೇರುಪೇಟೆ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 18 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 16 ಪಾಯಿಂಟ್ಸ್ ತಗ್ಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 18.82 ಪಾಯಿಂಟ್ಸ್ ಅಥವಾ ಶೇಕಡಾ 0.04ರಷ್ಟು ಇಳಿಕೆಗೊಂಡು 52861.18 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 16.10 ಪಾಯಿಂಟ್ಸ್ ಅಥವಾ ಶೇಕಡಾ 0.10ರಷ್ಟು ಕುಸಿದು 15818.30 ಪಾಯಿಂಟ್ಸ್ ಮುಟ್ಟಿದೆ.

ಅಲ್ಟ್ರಾಟೆಕ್ ಸಿಮೆಂಟ್, ಶ್ರೀ ಸಿಮೆಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್‌ಸರ್ವ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಟಾಟಾ ಮೋಟಾರ್ಸ್, ಗ್ಲ್ಯಾಂಡ್ ಫಾರ್ಮಾ, ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ಕೋಲ್ ಇಂಡಿಯಾ ನಷ್ಟ ಅನುಭವಿಸಿದೆ.
ಅದರಲ್ಲೂ ಟಾಟಾ ಮೋಟಾರ್ಸ್ ಬಿಎಸ್‌ಇನಲ್ಲಿ ಬೆಳಗಿನ ವಹಿವಾಟಿನಲ್ಲಿ ದಿನದ ಗರಿಷ್ಠ 358 ರೂಪಾಯಿಗೆ ತಲುಪಿತ್ತು. ಆದರೆ ನಂತರ ಕಂಪನಿಯು ಚಿಪ್ ಪೂರೈಕೆ ಕೊರತೆಯ ಕುರಿತು ವರದಿ ಮಾಡಿದ ಬಳಿಕ ಷೇರುಗಳ ಬೆಲೆಯು 8.52ರಷ್ಟು ಕುಸಿದು 316.60 ರೂಪಾಯಿಗೆ ತಲುಪಿದೆ. ಸೆಮಿಕಂಡಕ್ಟರ್ ಕೊರತೆಯು ಸೆಪ್ಟೆಂಬರ್ 2021 ರ ತ್ರೈಮಾಸಿಕದ ಅಂತ್ಯದ ವೇಳೆಗೆ ಜಾಗ್ವಾರ್ ಲ್ಯಾಂಡ್ ರೋವರ್ ವರದಿಯಲ್ಲಿ 50 ಪ್ರತಿಶತ ಕಡಿಮೆ ಆಗುವುದನ್ನ ಕಾಣಬಹುದು.
ನಿಫ್ಟಿ ಬ್ಯಾಂಕ್ ಶೇ. 1ರಷ್ಟು ಲಾಭ ಗಳಿಸಿದರೆ, ಇತರ ವಲಯ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಸ್ವಲ್ಪ ಹೆಚ್ಚಾಗಿದೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.26 ರಷ್ಟು ಕುಸಿದಿದೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ಅಳಿಸಿಹಾಕಿತು ಮತ್ತು ಡಾಲರ್ ಎದುರು ದಿನದ ಕನಿಷ್ಠ 74.55 ರೂಪಾಯಿಗೆ ಕೊನೆಗೊಂಡಿತು.


Click it and Unblock the Notifications