ಷೇರು ಮಾರುಕಟ್ಟೆಯು ಇಂದು ಭಾರೀ ಕುಸಿತ ಕಂಡಿದೆ. ಸೋಮವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 406.45 ಪಾಯಿಂಟ್ ಅಥವಾ ಶೇ.0.70ರಷ್ಟು ಕುಸಿದು, 57,583.45ಕ್ಕೆ ತಲುಪಿದೆ. ನಿಫ್ಟಿ 120.30 ಅಂಕ, ಶೇ.0.70ರಷ್ಟು ಇಳಿದು 16,979.70ಕ್ಕೆ ತಲುಪಿದೆ.
841 ಷೇರುಗಳು ಏರಿಕೆಯಾಗಿದ್ದರೆ, 1158 ಷೇರುಗಳು ಇಳಿಕೆಯಾಗಿದೆ. 143 ಷೇರುಗಳು ಸ್ಥಿರವಾಗಿದೆ. ಇನ್ನು ವಹಿವಾಟಿನ ಮಧ್ಯದಲ್ಲಿ ನಿಫ್ಟಿ50 250 ಅಂಕ ಅಥವಾ ಶೇ.1.6ರಷ್ಟು ಕುಸಿದು 16,828ಕ್ಕೆ ತಲುಪಿದೆ. ಬಿಎಸ್‌ಇಯಲ್ಲಿ ಸೆನ್ಸೆಕ್ಸ್ ಬರೋಬ್ಬರಿ 900 ಅಂಕ ಅಥವಾ ಶೇಕಡ 1.5ರಷ್ಟು ಇಳಿದು 57,085ಕ್ಕೆ ತಲುಪಿದೆ.
ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 360.95 ಪಾಯಿಂಟ್ ಅಥವಾ ಶೇ.0.62ರಷ್ಟು ಕುಸಿದು, 57,628.95ಕ್ಕೆ ತಲುಪಿದೆ. ನಿಫ್ಟಿ 111.60 ಅಂಕ, ಶೇ.0.65ರಷ್ಟು ಇಳಿಕೆಯಾಗಿ 16,988.40ಕ್ಕೆ ತಲುಪಿದೆ. 1138 ಷೇರುಗಳು ಏರಿಕೆಯಾಗಿದ್ದರೆ, 2393 ಷೇರುಗಳು ಇಳಿಕೆಯಾಗಿದೆ. 125 ಷೇರುಗಳು ಸ್ಥಿರವಾಗಿದೆ.
ಇನ್ನು ವಹಿವಾಟಿನ ಅಂತ್ಯದಲ್ಲಿ ಎಚ್‌ಯುಎಲ್ ಸ್ಟಾಕ್ ಟಾಪ್ ಗೇನರ್ ಆಗಿದ್ದು ಶೇಕಡ 2.61ರಷ್ಟು ಹೆಚ್ಚಾಗಿ 2,511.20 ರೂಪಾಯಿ ಆಗಿದೆ. ಬಜಾಜ್ ಫಿನ್‌ಸರ್ವ್ ಶೇಕಡ 4.33ರಷ್ಟು ಇಳಿದು, 1,245.40 ರೂಪಾಯಿ ಆಗಿದೆ. ನಿಫ್ಟಿ ಎಫ್‌ಎಂಸಿಜಿ ಬೆಸ್ಟ್ ಸೆಕ್ಟರ್ ಆಗಿದ್ದರೆ, ನಿಫ್ಟಿ ಮೆಟಲ್ ಅತೀ ಹೆಚ್ಚು ಕುಸಿತ ಕಂಡ ಸೆಕ್ಟರ್ ಆಗಿದೆ. ಸ್ಟಾಕ್ ಕುಸಿತಕ್ಕೆ 5 ಕಾರಣಗಳು ಇಲ್ಲಿದೆ, ಮುಂದೆ ಓದಿ....
ಜಾಗತಿಕ ಹಣಕಾಸು ವಲಯದಲ್ಲಿ ಬಿಕ್ಕಟ್ಟು
ಜಾಗತಿಕವಾಗಿ ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಭಾರೀ ಕುಸಿತ ಕಂಡಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ನಷ್ಟದೊಂದಿಗೆ ಮುಚ್ಚಲ್ಪಟ್ಟಿದೆ. ಅದಾದ ಬಳಿಕ ಸಿಗ್ನೇಚರ್ ಬ್ಯಾಂಕ್ ಕೂಡಾ ಮುಚ್ಚಲ್ಪಟ್ಟಿದೆ. ಇನ್ನು ಕ್ರೆಡಿಟ್ ಸ್ಯೂಸ್ ಬ್ಯಾಂಕ್ ಕೂಡಾ ಮುಚ್ಚುವ ಸ್ಥಿತಿಗೆ ತಲುಪುತ್ತಿದ್ದಂತೆ ಮಾರಾಟದ ಡೀಲ್ ನಡೆದಿದೆ.
ಎರಡು ಬ್ಯಾಂಕುಗಳು ನಷ್ಟವನ್ನು ಕಂಡ ಬಳಿಕ ಕ್ರೆಡಿಟ್ ಸ್ಯೂಸ್ ಸ್ಟಾಕ್ ಶೇಕಡ 28ಕ್ಕೂ ಅಧಿಕ ಕುಸಿದಿದೆ. ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಬ್ಯಾಂಕಿಂಗ್ ವಲಯದ ದೈತ್ಯ ಸಂಸ್ಥೆಯಾದ ಯುಬಿಎಸ್ ಕ್ರೆಡಿಟ್ ಸ್ಯೂಸ್ ಅನ್ನು ಖರೀದಿ ಮಾಡಲು ಮುಂದಾಗಿದೆ. ಬ್ಯಾಂಕಿಂಗ್ ವಲಯದ ಈ ಬಿಕ್ಕಟ್ಟು ಷೇರುಪೇಟೆ ಮೇಲೆ ಪ್ರಭಾವ ಬೀರಿದೆ.
ಹೂಡಿಕೆದಾರರ ಭಾವನೆಯೂ ಕೂಡಾ ಮುಖ್ಯ
ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಜಾಗತಿಕವಾಗಿ ಹೂಡಿಕೆದಾರರ ಭಾವನೆಯ ಮೇಲೆ ಪ್ರಭಾವ ಬೀರಿದೆ. ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯು ಕುಸಿತ ಕಂಡಿದೆ. ನಿಕ್ಕಿ 225, ಹ್ಯಾಂಗ್ ಸೆಂಗ್, ಎಸ್ & ಪಿ 200, ಕೋಸ್ಪಿ ಮತ್ತು ಶಾಂಘೈ ಕಾಂಪೋಸಿಟ್ ಸೂಚ್ಯಂಕಗಳು ಶೇಕಡ 3ರಷ್ಟು ಕುಸಿತ ಕಂಡಿದೆ.
ವಾಲ್ ಸ್ಟ್ರೀಟ್‌ನಲ್ಲಿ ಮಧ್ಯಾಹ್ನದ ವೇಳೆಗೆ ಸ್ಟಾಕ್‌ಗಳು ನಷ್ಟವನ್ನು ಹೊಂದಲು ಆರಂಭ ಮಾಡಿದೆ. ಡೌ ಜೋನ್ಸ್ ಫ್ಯೂಚರ್ಸ್, ಎಸ್ & ಪಿ 500 ಫ್ಯೂಚರ್ಸ್ ಮತ್ತು ನಾಸ್ಡಾಕ್ ಫ್ಯೂಚರ್ಸ್ ಕ್ರಮವಾಗಿ ಶೇಕಡ 1ರಷ್ಟು ಕುಸಿತ ಕಂಡಿದೆ. ಇಂದು ಬೆಳಿಗ್ಗೆ ಸುಮಾರು ಶೇಕಡ 0.3ರಷ್ಟು ಹೆಚ್ಚಾಗಿದೆ.
ಯುಎಸ್ ಫೆಡ್ ಸಭೆ
ಸಾಮಾನ್ಯವಾಗಿ ಒಂದು ದೇಶದ ಕೇಂದ್ರ ಬ್ಯಾಂಕ್ ಮತ್ತು ಯುಎಸ್ ಫೆಡರಲ್ ರಿಸರ್ವ್‌ನ ಯಾವುದೇ ಸಭೆ ಅಥವಾ ನಿರ್ಧಾರವು ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಉಂಟು ಮಾಡಿದೆ. ಯುಎಸ್ ಫೆಡರಲ್ ರಿಸರ್ವ್ ಸಭೆ ನಡೆಯಲಿದ್ದು ಅದಾದ ಬಳಿಕ ಬಡ್ಡಿದರ ಪರಿಷ್ಕರಣೆ ಸಾಧ್ಯವಿದೆ.
ಫೆಡರಲ್ ಓಪನ್ ಮಾರ್ಕೆಟ್ ಕಮೀಟಿ (ಎಫ್‌ಒಎಂಸಿ) ಸಭೆಯು ಮಾರ್ಚ್ 22ರಂದು ನಡೆಯಲಿದೆ. ಫೆಡ್ ಬಡ್ಡಿದರವನ್ನು ಸಣ್ಣ ಪ್ರಮಾಣದಲ್ಲಿ ಏರಿಸಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟರೆ, ಇನ್ನು ಕೆಲವು ತಜ್ಞರ ಪ್ರಕಾರ ಈ ಸಭೆಯ ಬಳಿಕ ಬಡ್ಡಿದರ ಏರಿಕೆ ಮಾಡಲಾಗುವುದಿಲ್ಲ.
ಅದಾನಿ ಗ್ರೂಪ್ ಸ್ಟಾಕ್ ಕುಸಿತ
ಹಿಂಡನ್‌ಬರ್ಗ್ ವರದಿಯು ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಆರೋಪಿಸಿದೆ. ಜನವರಿ 24ರಂದು ಈ ವರದಿಯು ಪ್ರಕಟವಾಗಿದ್ದು, ಅದಾದ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಷೇರುಗಳು ಭಾರೀ ನಷ್ಟವನ್ನು ಕಂಡಿದೆ.
ಇನ್ನು ಅದಾನಿ ಗ್ರೂಪ್ ಗುಜರಾತ್‌ನ ಮುಂದ್ರಾದಲ್ಲಿನ 34,900 ಕೋಟಿ ರೂಪಾಯಿಯ ಪೆಟ್ರೋಕೆಮಿಕಲ್ ಯೋಜನೆಯನ್ನು ಕೈಬಿಟ್ಟಿದೆ. ಇದರ ಪ್ರಭಾವ ಷೇರುಪೇಟೆ ಮೇಲೆ ಬಿದ್ದಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಇಕಾನಮಿಕ್ ಝೋನ್, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ವಿಲ್ಮಾರ್ ಸ್ಟಾಕ್ ವಹಿವಾಟಿನ ಮಧ್ಯದಲ್ಲಿ ಶೇಕಡ 5.6ರಷ್ಟು ಕುಸಿದಿದೆ.
ಹಲವಾರು ಸ್ಟಾಕ್‌ಗಳು ಇಳಿಕೆ
ಬಜಾಜ್ ಟ್ವಿನ್ಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಂತಹ ಸ್ಟಾಕ್‌ಗಳು ಭಾರೀ ನಷ್ಟವನ್ನು ಕಂಡಿದೆ. ಈ ಸ್ಟಾಕ್‌ಗಳು ಸೋಮವಾರ ಶೇಕಡ 5ರಷ್ಟು ಕುಸಿತ ಕಂಡಿದೆ.
ವಹಿವಾಟಿನ ಆರಂಭದಲ್ಲಿ ಬಜಾಜ್ ಫಿನ್‌ಸರ್ವ್, ಅದಾನಿ ಎಂಟರ್‌ಪ್ರೈಸಸ್, ಬಜಾಜ್ ಫೈನಾನ್ಸ್, ಹಿಂಡಲ್ಕೊ ಇಂಡಸ್ಟ್ರೀಸ್, ವಿಪ್ರೋ ಸ್ಟಾಕ್ ಇಳಿಕೆಯಾಗಿದೆ. ಆದರೆ ಎಚ್‌ಯುಎಲ್, ಬಿಪಿಸಿಎಲ್, ಐಸಿಸಿ, ಗ್ರಾಸಿಮ್ ಇಂಡಸ್ಟ್ರೀಸ್, ನೆಸ್ಲೆ ಇಂಡಿಯಾ ಸ್ಟಾಕ್ ಏರಿಕೆ ಕಂಡಿದೆ.
ಎಲ್ಲ ಸೆಕ್ಟರ್‌ಗಳು ಭಾರೀ ನಷ್ಟವನ್ನು ಕಂಡಿದೆ. ಕ್ಯಾಪಿಟಲ್ ಗೂಡ್ಸ್, ಐಟಿ, ಮೆಟಲ್, ಪಿಎಸ್‌ಯು ಬ್ಯಾಂಕ್ ಸ್ಟಾಕ್ ಶೇಕಡ 1-2ರಷ್ಟು ಇಳಿಕೆ ಕಂಡಿದೆ.


Click it and Unblock the Notifications