ಜಾಗತಿಕ ಮಾರುಕಟ್ಟೆಯಲ್ಲಿ ಷೇರುಗಳು ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. ಈ ನಡುವೆ ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡಾ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಹಲವಾರು ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಾವು ಕಾಣುತ್ತಿದ್ದೇವೆ. ಸತತ ಮೂರನೇ ದಿನವು ಕೂಡಾ ಸೆನ್ಸೆಕ್ಸ್ ಲಾಭವನ್ನು ಕಂಡಿದೆ. 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರ 803.14 ಪಾಯಿಂಟ್‌ಗಳು ಅಥವಾ ಶೇಕಡ 1.26ರಷ್ಟು ಏರಿಕೆಯಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟ 64,718.56ಕ್ಕೆ ತಲುಪಿದೆ.
ಈ ನಡುವೆ ಎನ್‌ಎಸ್‌ಇ ನಿಫ್ಟಿ 216.95 ಪಾಯಿಂಟ್‌ಗಳು ಅಥವಾ ಶೇಕಡ 1.14ರಷ್ಟು ಜಿಗಿದು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ 19189.05ಕ್ಕೆ ತಲುಪಿದೆ. ಸೆನ್ಸೆಕ್ಸ್‌ನಲ್ಲಿ ಪವರ್ ಗ್ರಿಡ್, ಇನ್ಫೋಸಿಸ್, ಏಷ್ಯನ್ ಪೇಂಟ್ಸ್, ಮಹೀಂದ್ರ ಆಂಡ್ ಮಹೀಂದ್ರಾ, ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಹೀರೋ ಮೋಟೋಕಾರ್ಪ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟೈಟಾನ್ ಸ್ಟಾಕ್‌ಗಳು ಏರಿಕೆಯನ್ನು ಕಂಡಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಯುಎಸ್ ಆರ್ಥಿಕತೆಯ ಬೆಂಬಲ
ಟಾಟಾ ಸ್ಟೀಲ್ ಹಾಗೂ ಅದಾನಿ ಪೋರ್ಟ್ಸ್ ಭಾರೀ ನಷ್ಟವನ್ನು ಕಂಡ ಸ್ಟಾಕ್‌ಗಳು ಆಗಿದೆ. ಈ ನಡುವೆ ಯುಎಸ್ ಮಾರುಕಟ್ಟೆಯು ಗುರುವಾರ ಅಧಿಕ ಲಾಭದೊಂದಿಗೆ ವಹಿವಾಟನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್, "ಯುಎಸ್ ಆರ್ಥಿಕತೆಯು ಈಗ ಜಾಗತಿಕ ಮಾರುಕಟ್ಟೆಗಳಿಗೆ ಬೆಂಬಲದ ಪ್ರಬಲ ಆಧಾರವಾಗಿದೆ," ಎಂದು ತಿಳಿಸಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇಕಡ 0.40 ರಷ್ಟು ಏರಿಕೆಯಾಗಿ 74.64 ಡಾಲರ್‌ಗೆ ಕ್ಕೆ ತಲುಪಿದೆ ಎಂದು ಪಿಟಿಐ ವರದಿ ತಿಳಿಸಿದೆ.
ವಿದೇಶಿ ಹೂಡಿಕೆದಾರರ ಪ್ರಮಾಣವು ಅಧಿಕವಾಗುತ್ತಾ ಸಾಗಿದ್ದಂತೆ ಜೂನ್ 28 ರಂದು ಭಾರತೀಯ ಷೇರು ಮಾರುಕಟ್ಟೆಯು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಸೆನ್ಸೆಕ್ಸ್ ಮೊದಲ ಬಾರಿಗೆ 64,000 ಅಂಕಕ್ಕಿಂತ ಅಧಿಕವಾಗಿದ್ದು, 64,012.16ಕ್ಕೆ ತಲುಪಿದೆ. ನಿಫ್ಟಿ ಕೂಡಾ ಸಾರ್ವಕಾಲಿಕ ಏರಿಕೆಯನ್ನು ಕಂಡಿದ್ದು, 19,003.20ಕ್ಕೆ ತಲುಪಿದೆ. ಜೂನ್ 28ರಂದು ಮಧ್ಯಾಹ್ನ 1.30ರ ಸಮಯಕ್ಕೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಹೆಚ್ಚಳವಾಗಿದೆ.
ಎಂಒಎಫ್‌ಎಸ್‌ಎಲ್‌ನ ರಿಟೇಲ್ ರಿಸರ್ಚ್, ಬ್ರೋಕಿಂಗ್ ಮತ್ತು ವಿತರಣೆಯ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ, "ಕಳೆದ ಕೆಲವು ದಿನಗಳಲ್ಲಿ ಹಲವಾರು ಏರಿಳಿತಗಳ ನಂತರ ನಿಫ್ಟಿ ಅಂತಿಮವಾಗಿ ಅದರ ಹಿಂದಿನ ಗರಿಷ್ಠ ಮಟ್ಟವನ್ನು ದಾಟುವಲ್ಲಿ ಯಶಸ್ವಿಯನ್ನು ಕಂಡಿದೆ. ಪ್ರಸ್ತುತ ಮಾರುಕಟ್ಟೆಯ ಬೆಳವಣಿಗೆಯನ್ನು ನೋಡಿದಾಗ ನಾವು ಹೊಸ ಗರಿಷ್ಠ ಮಟ್ಟವನ್ನು ದಾಟಿದೆ," ಎಂದು ತಿಳಿಸಿದ್ದಾರೆ.
ವಹಿವಾಟಿನ ಅಂತ್ಯದಲ್ಲಿ ಎಷ್ಟು ಷೇರು ಏರಿಕೆ, ಇಳಿಕೆ?
ಸೆನ್ಸೆಕ್ಸ್ ಶುಕ್ರವಾರ 803.14 ಪಾಯಿಂಟ್‌ಗಳು ಏರಿಕೆಯಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟ 64,718.56ಕ್ಕೆ ತಲುಪಿದೆ. ನಿಫ್ಟಿ ಕೂಡಾ ಲಾಭವನ್ನು ಕಂಡಿದೆ. 1,865 ಷೇರುಗಳು ಏರಿಕೆಯಾಗಿದ್ದರೆ, 1,543 ಷೇರುಗಳು ಇಳಿಕೆಯಾಗಿದೆ. 132 ಷೇರುಗಳು ಸ್ಥಿರವಾಗಿತ್ತು. ನಿಫ್ಟಿಯಲ್ಲಿ ಅತೀ ಅಧಿಕ ಲಾಭವನ್ನು ಗಳಿಸಿದ ಸ್ಟಾಕ್‌ಗಳು ಎಂ&ಎಂ, ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಹಿರೋ ಮೋಟೋಕಾರ್ಪ್, ಸನ್ ಫಾರ್ಮಾ ಆಗಿದೆ. ಇನ್ನು ಅದಾನಿ ಪೋರ್ಟ್ಸ್, ಡಿವಿಸ್ ಲ್ಯಾಬೊರೇಟರೀಸ್, ಅದಾನಿ ಎಂಟರ್‌ಪ್ರೈಸಸ್, ಅಪೋಲೋ ಹಾಸ್ಪಿಟಲ್ಸ್ ಮತ್ತು ಬಜಾಜ್ ಆಟೋ ವಹಿವಾಟಿನ ಅಂತ್ಯದಲ್ಲಿ ನಷ್ಟವನ್ನು ಕಂಡಿದೆ.
ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇಕಡ 2.5 ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಶೇಕಡ 2 ರಷ್ಟು ಏರಿಕೆ ಕಂಡಿದೆ. ಎಲ್ಲ ವಲಯದ ಸೂಚ್ಯಂಕಗಳು ಗ್ರೀನ್ ಝೋನ್‌ನಲ್ಲಿ ಕೊನೆಯಾಗಿದೆ. ಆಟೋ ಮತ್ತು ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇಕಡ 2ರಷ್ಟು ಏರಿಕೆ ಕಂಡಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡ 0.5 ರಷ್ಟು ಲಾಭ ಗಳಿಸಿದವು.


Click it and Unblock the Notifications