ಭಾರತದಲ್ಲಿ ಕೊರೊನಾವೈರಸ್ ತಗುಲಿರುವ ಸುದ್ದಿ ಹೊರಬೀಳುತ್ತಿದ್ದಂತೆ ಏರುಮುಖದಲ್ಲಿ ಸಾಗಿದ್ದ ಭಾರತೀಯ ಷೇರುಪೇಟೆ ಅಲುಗಾಡಿ ಹೋಗಿದೆ. ಲಾಭ ಕಂಡಿದ್ದ ಕಂಪನಿಯ ಷೇರುಗಳೆಲ್ಲಾ ಶುಕ್ರವಾರ(ಫೆಬ್ರವರಿ 28)ಕ್ಕಿಂತ ಕೆಳಮಟ್ಟಕ್ಕೆ ತಲುಪಿದೆ.
ಸೋಮವಾರ ಷೇರು ಮಾರುಕಟ್ಟೆಯಲ್ಲಿ ಆರಂಭದಲ್ಲೇ ಅತ್ಯಂತ ಉತ್ಸಾಹದಿಂದ ಏರುಮುಖದತ್ತ ಸಾಗಿತ್ತು. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಭರ್ಜರಿ ಆರಂಭ ದಾಖಲಿಸಿತು. 11,201.75 ಅಂಶಗಳಿಗೆ ಕೊನೆಗೊಂಡಿದ್ದ ಎನ್‌ಎಸ್‌ಇ 166 ಅಂಶಗಳು ಏರಿಕೆಗೊಂಡು 11,365.45 ಅಂಶಗಳನ್ನು ತಲುಪಿತ್ತು. ಇನ್ನು ಸೆನ್ಸೆಕ್ಸ್ 611.49 ಅಂಶಗಳು ಏರಿಕೆಗೊಂಡು 38,870.05 ಅಂಶಗಳವರೆಗೂ ಮುಟ್ಟಿತ್ತು.
ಲಾಭ ಕಂಡಿದ್ದ ಟಾಪ್ ಕಂಪನಿಗಳು
ಶುಕ್ರವಾರ ಇಳಿಕೆ ಕಂಡಿದ್ದ ಬಹುತೇಕ ಟಾಪ್ ಕಂಪನಿಯ ಷೇರುಗಳು ಉತ್ತಮ ವಹಿವಾಟು ನಡೆಸಿದ್ದವು. ಟಿಸಿಎಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ವೇದಾಂತ, ಐಒಸಿ, ಜೀ ಎಂಟರ್‌ಟೈನ್‌ಮೆಂಟ್, ಕೋಲ್ ಇಂಡಿಯಾ ಷೇರುಗಳು 3 ಪರ್ಸೆಂಟ್‌ಗಿಂತ ಹೆಚ್ಚಿನ ಏರಿಕೆ ದಾಖಲಿಸಿದ್ದವು. ಇದರ ಜೊತೆಗೆ ಬಜಾಜ್ ಆಟೋ, ಕೋಟಕ್ ಮಹೀಂದ್ರಾ, ಹೀರೋ ಮೋಟೊಕಾಪ್ ಷೇರುಗಳು ಇಳಿಕೆ ಕಂಡಿದ್ದವು.
ಹೂಡಿಕೆದಾರ ಮುಖದಲ್ಲಿ ಮೂಡಿದ್ದ ಸಂತೋಷ 1 ಗಂಟೆಯಲ್ಲಿ ಮಾಯ
ವಿಶ್ವದಾದ್ಯಂತ ಕೊರೊನಾವೈರಸ್ ಭೀತಿಯಿಂದ ಕಳೆದ ಒಂದು ವಾರ ಷೇರುಪೇಟೆ ಇಳಿಮುಖ ಕಂಡಿತ್ತು. ಐದು ದಿನದಲ್ಲಿ ಸೆನ್ಸೆಕ್ಸ್‌ನ 3000 ಪಾಯಿಂಟ್ಸ್ ಇಳಿಕೆಯಾಗಿ 12 ಲಕ್ಷ ಕೋಟಿ ಸಂಪತ್ತು ಮಾಯವಾಗಿತ್ತು. ಆದರೆ ಸೋಮವಾರ ಹೂಡಿಕೆದಾರರ ಮುಖದಲ್ಲಿ ಸಂತೋಷ ಮೂಡಿಸಿದ್ದು ಸೆನ್ಸೆಕ್ಸ್ ಹಾಗೂ ನಿಫ್ಟಿ ಅಂಶಗಳ ಏರಿಕೆ.
ಆರೋಗ್ಯ ಸಚಿವಾಲಯದಿಂದ ಆಘಾತಕಾರಿ ಸುದ್ದಿ
ಸೋಮವಾರ ಷೇರು ಮಾರುಕಟ್ಟೆ ಆರಂಭದ 10 ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ಏರಿಕೆ ಕಂಡಿತ್ತು. ಇಂದು ಷೇರುಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿತ್ತು. ಈ ವೇಳೆ ಕೇವಲ ಒಂದು ಸುದ್ದಿಯು ಸಂಪತ್ತನ್ನು ನುಚ್ಚು ನೂರು ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದಿಂದ ಟ್ವೀಟ್
ಭಾರತದಲ್ಲಿ ಕೊರೊನಾವೈರಸ್ ಕುರಿತು ಕೇಂದ್ರ ಆರೋಗ್ಯ ಸಚಿವಾಲಯವು ಟ್ವೀಟ್ ಮಾಡುತ್ತಿದ್ದಂತೆ ಷೇರುಮಾರುಕಟ್ಟೆ ಅಲುಗಾಡಿಹೋಗಿದೆ. ''ಭಾರತದಲ್ಲಿ ಕೊರೊನಾವೈರಸ್ ಪತ್ತೆಯಾಗಿದೆ. ಒಂದು ದೆಹಲಿಯಲ್ಲಿ ಮತ್ತು ಮತ್ತೊಂದು ಕೇಸ್ ತೆಲಂಗಾಣದಲ್ಲಿ ದಾಖಲಾಗಿದೆ. ಇವರು ಎಲ್ಲಿಂದ ಪ್ರಯಾಣಿಸಿದರು ಎಂಬ ಮಾಹಿತಿಯನ್ನು ನೀಡುತ್ತೇವೆ. ಇಬ್ಬರು ರೋಗಿಗಳ ಆರೋಗ್ಯ ಸ್ಥಿರವಾಗಿದೆ ಮತ್ತು ತುಂಬಾ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗಿದೆ'' ಎಂದು ಟ್ವೀಟ್ ಮಾಡಲಾಗಿದೆ
ಈ ಸುದ್ದಿ ಹೊರಬೀಳುತ್ತಿದ್ದಂತೆ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಲು ಯತ್ನಿಸಿದ್ದಾರೆ. ಮಧ್ಯಾಹ್ನ 2.27ಕ್ಕೆ ಸುದ್ದಿ ಹೊರಬಿದ್ದು ಒಂದು ಗಂಟೆಯಲ್ಲಿ ಷೇರು ಮಾರುಕಟ್ಟೆ ದೊಪ್ಪನೆ ಕೆಳಬಿದ್ದಿದೆ. ಒಟ್ಟಾರೆ 939 ಅಂಶಗಳು ಇಳಿಕೆ ಸಾಧಿಸಿದೆ.
ಸೆನ್ಸೆಕ್ಸ್ - ನಿಫ್ಟಿ ಅಂಶಗಳು ಮತ್ತಷ್ಟು ಇಳಿಕೆ
600 ಅಂಶಗಳಷ್ಟು ಏರಿಕೆ ದಾಖಲಿಸಿದ್ದ ಸೆನ್ಸೆಕ್ಸ್ ಪೂರ್ಣ ಇಳಿಕೆಗೊಂಡು 153.27 ಅಂಶಗಳಷ್ಟು ಕುಸಿತ ದಾಖಲಿಸಿತು. ಈ ಮೂಲಕ 38,144.02 ಅಂಶಗಳಿಗೆ ವಹಿವಾಟು ಮುಗಿಸಿತು. ಇನ್ನು ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 166 ಅಂಶಗಳು ಏರಿಕೆಗೊಂಡು ಕೊನೆಗೆ ಹಿಂದಿನ ಮಾರ್ಕೆಟ್ ರೇಟ್‌ಗಿಂತ 69 ಅಂಶಗಳು ಇಳಿಕೆಗೊಂಡು 11,132.75 ಪಾಯಿಂಟ್ಸ್ ಇಳಿಕೆಯಾಗಿದೆ.
ಹೆಚ್ಚು ನಷ್ಟ ಅನುಭವಿಸಿದ ಕಂಪನಿಗಳ ಷೇರುಗಳು
ಯೆಸ್ ಬ್ಯಾಂಕ್, ಎಸ್‌ಬಿಐ, ಟಾಟಾ ಸ್ಟೀಲ್, GAIL, ಹಿಂಡಾಲ್ಕೊ, ಹೀರೊ ಮೋಟೊಕಾಪ್, ಬಜಾಜ್ ಆಟೋ, ಬಿಪಿಸಿಎಲ್, ಒಎನ್‌ಜಿಸಿ ಷೇರುಗಳು 3 ಪರ್ಸೆಂಟ್‌ಗೂ ಅಧಿಕ ನಷ್ಟ ಕಂಡಿವೆ.
ಇದೇ ವೇಳೆ ಹೆಚ್‌ಸಿಎಲ್ ಟೆಕ್, ಈಚರ್ ಮೋಟಾರ್ಸ್, ನೆಸ್ಲೆ, ಐಸಿಐಸಿಐ ಬ್ಯಾಂಕ್, ಇನ್ಪೋಸಿಸ್ , ಭಾರ್ತಿ ಇನ್ಫ್ರಾಟೆಲ್ ಕಂಪನಿ ಷೇರುಗಳು ಲಾಭ ಕಂಡಿವೆ.


Click it and Unblock the Notifications