ಹಲವಾರು ಬಾರಿ ಕುಸಿತವನ್ನು ಕಾಣುತ್ತಾದ ಬಂದಿದ್ದ ಸೆನ್ಸೆಕ್ಸ್ ಇಂದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಜೂನ್ 21, 2023ರಂದು ಟ್ರೇಡಿಂಗ್ ವೇಳೆ ಸೆನ್ಸೆಕ್ಸ್ 63,588.31ಕ್ಕೆ ಜಿಗಿತ ಕಂಡಿದೆ. ಈ ಹಿಂದಿನ ದಾಖಲೆಯ ಪ್ರಮಾಣ 63,583.07 ಆಗಿದೆ. ಡಿಸೆಂಬರ್ 1, 2022ರಲ್ಲಿ ಈ ದಾಖಲೆಯನ್ನು ಸೆನ್ಸೆಕ್ಸ್ ಸೃಷ್ಟಿಸಿತ್ತು. ಈಗ ಅದಕ್ಕೂ ಅಧಿಕವಾಗಿ ಜಿಗಿತವನ್ನು ಕಂಡಿದೆ.
ಸೆನ್ಸೆಕ್ಸ್ ಸಾರ್ವಕಾಲಿಕವಾಗಿ ಏರಿಕೆ ಕಾಣಲು ಹಲವಾರು ಅಂಶಗಳು ಅದರ ಮೇಲೆ ಪ್ರಭಾವ ಉಂಟು ಮಾಡಿದೆ. ಜಿಡಿಪಿ, ವಿದೇಶಿ ಹೂಡಿಕೆ ಹೆಚ್ಚಳ ಮೊದಲಾದವುಗಳು ಸೆನ್ಸೆಕ್ಸ್ ಗ್ರೀನ್ ಝೋನ್‌ನಲ್ಲಿ ಸಾಗಿ ದಾಖಲೆ ಸೃಷ್ಟಿಸಲು ಸಹಾಯ ಮಾಡಿದೆ. ಈ ಸಮಯಕ್ಕೆ ಸೆನ್ಸೆಕ್ಸ್ 114.59 ಪಾಯಿಂಟ್ ಅಥವಾ ಶೇ.0.18ರಷ್ಟು ಏರಿಕೆಯಾಗಿ, 63,442.29ಕ್ಕೆ ತಲುಪಿದೆ.

ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೆನ್ಸೆಕ್ಸ್ 81.68 ಪಾಯಿಂಟ್ ಅಥವಾ ಶೇ.0.13ರಷ್ಟು ಏರಿಕೆಯಾಗಿ, 63,409.38ಕ್ಕೆ ತಲುಪಿದೆ. ನಿಫ್ಟಿ 7.10 ಅಂಕ, ಶೇ.0.04ರಷ್ಟು ಜಿಗಿತ ಕಂಡು 18,823.80ಕ್ಕೆ ತಲುಪಿದೆ. 1783 ಷೇರುಗಳು ಏರಿಕೆಯಾಗಿದ್ದರೆ, 1368 ಷೇರುಗಳು ಇಳಿಕೆಯಾಗಿದೆ. 120 ಷೇರುಗಳು ಸ್ಥಿರವಾಗಿತ್ತು.
ತಜ್ಞರುಗಳು ಏನು ಹೇಳುತ್ತಾರೆ?
ಷೇರು ಮಾರುಕಟ್ಟೆ ಸಾರ್ವಕಾಲಿಕ ಏರಿಕೆಯನ್ನು ಕಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಟಕ್ ಮಹೀಂದ್ರಾದ ಮ್ಯಾನೆಜಿಂಗ್ ಡೈರೆಕ್ಟರ್ ನಿಲೇಶ್ ಶಾ, "ಅಂತಾರಾಷ್ಟ್ರೀಯ ಯೋಗ ದಿನದಂದು ಷೇರು ಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಇಲ್ಲಿ ಒಂದು ಸಂತಸದ ಕಾಕತಾಳೀಯತೆ ಇದೆ. ಯೋಗದಲ್ಲಿ ಗಮನವು ಹೊರಗಿನ ಪ್ರಪಂಚಕ್ಕಿಂತ ಒಳಗಿನ ಪ್ರಪಂಚಕ್ಕೆ ಹೆಚ್ಚಾಗಿರುತ್ತದೆ," ಎಂದು ತಿಳಿಸಿದ್ದಾರೆ.
"ಷೇರು ಮಾರುಕಟ್ಟೆಯಲ್ಲಿಯೂ ಹೂಡಿಕೆದಾರರು ಇಂಡೆಕ್ಸ್ ಲೆವೆಲ್ ಬದಲಾಗಿ ತಮ್ಮ ಗುರಿಯ ಕಡೆ ಗಮನ ಹರಿಸಬೇಕು. ಯೋಗದಲ್ಲಿ ಒಂದು ಕಾಲಾವಧಿಯಲ್ಲಿ ಪ್ರಯೋಜನ ಲಭ್ಯವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಪ್ರಯೋಜನ ಪಡೆಯಲು ದೀರ್ಘಾವಧಿ ಬೇಕಾಗುತ್ತದೆ," ಎಂದು ಯೋಗ ಹಾಗೂ ಷೇರು ಮಾರುಕಟ್ಟೆಗೆ ನಿಲೇಶ್ ಶಾ ಹೋಲಿಕೆ ಮಾಡಿದ್ದಾರೆ.
"ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವುದು ಷೇರು ಮಾರುಕಟ್ಟೆಗಳಲ್ಲಿನ ಜಾಗತಿಕ ಏರಿಕೆಗೆ ಅನುಗುಣವಾಗಿದೆ. ಹೆಚ್ಚಿನ ಮಾರುಕಟ್ಟೆಗಳು 52 ವಾರಗಳ ಗರಿಷ್ಠ ಮಟ್ಟದಲ್ಲಿವೆ. ಕಳೆದ ವರ್ಷ ಯುಎಸ್ ಹಿಂಜರಿತ ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಉಂಟು ಮಾಡಿದೆ. ಮೌಲ್ಯವು ಅಧಿಕವಾಗಿರುವಾಗ ಭಾರತದಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ಮೀರುವುದು ನಿರಂತರವಾಗಿರುವುದು ಕಷ್ಟ," ಎಂದು ಜಿಯೋಜಿತ್ ಫಿನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ ಕೆ ವಿಜಯಕುಮಾರ್ ತಿಳಿಸಿದ್ದಾರೆ.
ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ
ಇಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 89.02 ಪಾಯಿಂಟ್ ಅಥವಾ ಶೇ.0.14ರಷ್ಟು ಏರಿಕೆಯಾಗಿ, 63,416.72ಕ್ಕೆ ತಲುಪಿದೆ. ನಿಫ್ಟಿ 12.20 ಅಂಕ, ಶೇ.0.06ರಷ್ಟು ಜಿಗಿತ ಕಂಡು 18,828.90ಕ್ಕೆ ತಲುಪಿದೆ. 1,499 ಷೇರುಗಳು ಏರಿಕೆಯಾಗಿದ್ದರೆ, 488 ಷೇರುಗಳು ಇಳಿಕೆಯಾಗಿದೆ. 108 ಷೇರುಗಳು ಸ್ಥಿರವಾಗಿತ್ತು.
ನಿಫ್ಟಿಯಲ್ಲಿ ಎಚ್‌ಡಿಎಫ್‌ಸಿ ಲೈಫ್ ಅಲ್ಟ್ರಾಟೆಕ್ ಸಿಮೆಂಟ್, ಹೀರೋ ಮೋಟೋಕಾರ್ಪ್, ವಿಪ್ರೋ ಮತ್ತು ಡಾ ರೆಡ್ಡೀಸ್ ಲ್ಯಾಬ್ಸ್ ಪ್ರಮುಖ ಲಾಭ ಗಳಿಸಿದ ಸ್ಟಾಕ್‌ಗಳಾಗಿದ್ದರೆ, ದಿವೀಸ್ ಲ್ಯಾಬ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ, ಸಿಪ್ಲಾ ಮತ್ತು ಆಕ್ಸಿಸ್ ಬ್ಯಾಂಕ್ ನಷ್ಟವನ್ನು ಕಂಡ ಸ್ಟಾಕ್‌ಗಳು ಆಗಿದೆ. ಪವರ್ ಗ್ರಿಡ್ ಕಾರ್ಪ್ ಟಾಪ್ ಗೇನರ್ ಆಗಿದ್ದು, ಸ್ಟಾಕ್ ಶೇಕಡ 2.09ರಷ್ಟು ಏರಿಕೆಯಾಗಿ, 253.95 ರೂಪಾಯಿಗೆ ತಲುಪಿದೆ. ಹಿಂಡಲ್ಕೋ ಅತೀ ಅಧಿಕ ನಷ್ಟ ಕಂಡಿದ್ದು, 418.75 ರೂಪಾಯಿಗೆ ಕುಸಿದಿದೆ.


Click it and Unblock the Notifications