ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಈ ಯೋಜನೆ ಆರಂಭವಾದ ಬಳಿಕ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗಿದೆ. ಇದರೊಂದಿಗೆ ಪುರುಷ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ ಎಂದರೆ ನೀವು ನಂಬುತ್ತೀರಾ?.
ಹೌದು, ಶಕ್ತಿ ಯೋಜನೆಯಿಂದಾಗಿ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿ ಯೋಜನೆ ಯಶಸ್ವಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಇಲಾಖೆಯ ಕಾರ್ಯಕ್ಷಮತೆ ಮತ್ತು ತೆರಿಗೆ ಸಂಗ್ರಹದ ಗುರಿ ತಲುಪಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಹಿತಿ ಪಡೆದರು.
ಹೊಸ ಬಸ್‌ಗಳ ಖರೀದಿ ಬಳಿಕ ಹೊಸ ಚಾಲಕರು ಮತ್ತು ನಿರ್ವಾಹಕರ ಅಗತ್ಯ ಬೀಳುತ್ತದೆ. ಅವರ ನೇಮಕದ ಕುರಿತು ಪ್ರತ್ಯೇಕ ಸಭೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾರಿಗೆ-ಗಣಿ-ಮುದ್ರಾಂಕ ಇಲಾಖೆ ತೆರಿಗೆ ಸಂಗ್ರಹದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಆದರೆ ಗುರಿ ಮುಟ್ಟುವ ದಿಕ್ಕಿನಲ್ಲಿ ಸಮರ್ಪಕ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಮೂರೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹಾಗೆಯೇ ಈ ಸಂದರ್ಭದಲ್ಲೇ ಅರಣ್ಯ ಮತ್ತು ಗಣಿ ಇಲಾಖೆ ನಡುವೆ ಇರುವ ವ್ಯಾಜ್ಯ ಮತ್ತು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಎರಡೂ ಇಲಾಖೆಗಳ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಭೆಯನ್ನು ತ್ವರಿತವಾಗಿ ನಡೆಸಬೇಕು. ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಗಣಿ ಸಂಪತ್ತು ಸೋರಿಕೆ ಆಗದಂತೆ, ಕಳ್ಳತನ ಆಗದಂತೆ ಕಟ್ಟೆಚ್ಚರ ವಹಿಸಬೇಕು ಎನ್ನುವ ಸೂಚನೆ ನೀಡಿದರು.
ಮುಖ್ಯ ಖನಿಜ ಮತ್ತು ಉಪ ಖನಿಜ ಕಳ್ಳತನ, ತೆರಿಗೆ ವಂಚನೆ ಬಗ್ಗೆ ತೀವ್ರ ನಿಗಾ ಇಡಬೇಕು. ಡ್ರೋನ್ ಸಮೀಕ್ಷೆ ಮೂಲಕ ಸರ್ಕಾರಕ್ಕೆ ಸುಳ್ಳು ಲೆಕ್ಕ, ತಪ್ಪು ಲೆಕ್ಕ ಕೊಡುತ್ತಿರುವ ಗಣಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಡ್ರೋನ್ ಸಮೀಕ್ಷೆ ಬಳಿಕ ನೈಜ ಚಿತ್ರಣ ದೊರಕುತ್ತದೆ. ಹೀಗಾಗಿ ಈ ಪ್ರಯತ್ನದ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಮೂರೂ ಇಲಾಖೆ ಅಧಿಕಾರಿಗಳಿಂದ ಸಮಗ್ರ ವಿವರ ಪಡೆದ ಮುಖ್ಯಮಂತ್ರಿಗಳು ಕೊನೆಯದಾಗಿ ಮೂರೂ ಇಲಾಖೆ ನಿಗದಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಬೇಕು. ಮೊದಲಿಗೆ ತೆರಿಗೆ ಸೋರಿಕೆ ಮತ್ತು ವಂಚನೆ ಬಗ್ಗೆ ತೀವ್ರ ನಿಗಾ ಇಡಿ ಎನ್ನುವ ಸೂಚನೆ ನೀಡಿದರು.


Click it and Unblock the Notifications