ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ "ಶಕ್ತಿ ಯೋಜನೆ" ಮಹಿಳಾ ಸಬಲೀಕರಣದ ಪಯಣದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದ್ದು ಈವರೆಗೆ ಬರೋಬ್ಬರಿ 400 ಕೋಟಿ ಪಯಣ ಮಾಡಿ ಮಹಿಳಾ ಪ್ರಯಾಣಿಕರು ಈ ಯೋಜನೆಯ ಸಂಪೂರ್ಣ ಲಾಭ ಪಡೆದಿದ್ದಾರೆ.
ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ತೆರಳಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಸರಿ ಸುಮಾರು ಒಂದು ವರ್ಷ 9 ತಿಂಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಪ್ರಮುಖವಾಗಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಜಾರಿಗೊಳಿಸಲಾಗಿತ್ತು. ಸರ್ಕಾರದ ಈ 'ಶಕ್ತಿ ಯೋಜನೆ'ಗೆ ಅಭೂತಪೂರ್ವವಾದ ಪ್ರತಿಕ್ರಿಯೆ ಮತ್ತು ಸಕಾರಾತ್ಮಕ ಸ್ಪಂದನೆ ಆರಂಭದಿಂದಲೂ ದೊರಕಿತ್ತು. ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿತ್ತು.

ಶಕ್ತಿ ಯೋಜನೆಯನ್ನು 2023ರ ಜೂನ್ 11 ರಂದು ಜಾರಿಗೆ ತರಲಾಯಿತು. ಮಹಿಳೆಯರಿಗಾಗಿ ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಯಾವುದೇ ಮೂಲೆಗೆ ಹೋದರೂ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಈ ಯೋಜನೆ ಈಗ ರಾಜ್ಯದ ಇತರೆ ರಾಜ್ಯಗಳಿಗೆ ಮಾದರಿಯಾಗಿ 21 ತಿಂಗಳು ಪೂರೈಸಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಶಕ್ತಿ ಯೋಜನೆಗೆ ಅಭೂತಪೂರ್ವ ಸಂದ್ಪನೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ನಾಲ್ಕು ಬಸ್ ನಿಗಮಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ಈಗಾಗಲೇ ಶಕ್ತಿ ಯೋಜನೆಯಡಿ ಸುಮಾರು 400 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಹಿಳಾ ಪ್ರಯಾಣಿಕರ ಪ್ರಯಾಣದಲ್ಲಿ 9,803 ಕೋಟಿ ಮೌಲ್ಯದ ಉಚಿತ ಟಿಕೆಟ್ ಪಡೆದುಕೊಂಡಿದ್ದಾರೆ.
ಅಂಕಿಅಂಶ ಏನು ಹೇಳುತ್ತದೆ?
ಮಹಿಳೆಯರ ಸಶಕ್ತಿಕರಣದ ದೃಷ್ಟಿಯಿಂದ ಜಾರಿಗೆ ತಂದ 'ಶಕ್ತಿ ಯೋಜನೆ' 2023 ಜೂನ್ 11 ರಿಂದ ಜಾರಿಗೆ ತರಲಾಗಿದ್ದು, 2025ರ ಫೆಬ್ರವರಿ 24ರವರೆಗೆ "ಶಕ್ತಿ ಗ್ಯಾರಂಟಿ" ಯೋಜನೆಯ ವಿವರಗಳ ಅಂಕಿಅಂಶಗಳು ಹೀಗಿದೆ.
ಒಟ್ಟು ಪ್ರಯಾಣಿಕರು: ಕರಾರಸಾ ನಿಗಮದಲ್ಲಿ 207.86 ಕೋಟಿ, ಬೆಂಮಸಾ ಸಂಸ್ಥೆಯಲ್ಲಿ 216.58 ಕೋಟಿ, ವಾಕರಸಾ ಸಂಸ್ಥೆಯಲ್ಲಿ 151.25 ಕೋಟಿ ಮತ್ತು ಕಕರಸಾ ನಿಗಮದಲ್ಲಿ 105.97 ಕೋಟಿ ಪ್ರಯಾಣಿಕರು ಒಟ್ಟಾರೆಯಾಗಿ 681.66 ಕೋಟಿ ಪ್ರಯಾಣಿಸಿದ್ದಾರೆ.
ಒಟ್ಟು ಮಹಿಳಾ ಪ್ರಯಾಣಿಕರು: ಕರಾರಸಾ ನಿಗಮದಲ್ಲಿ 121.17 ಕೋಟಿ, ಬೆಂಮಸಾ ಸಂಸ್ಥೆಯಲ್ಲಿ 127.42 ಕೋಟಿ, ವಾಕರಸಾ ಸಂಸ್ಥೆಯಲ್ಲಿ 93.06 ಕೋಟಿ ಮತ್ತು ಕಕರಸಾ ನಿಗಮದಲ್ಲಿ 58.35 ಕೋಟಿ ಮಹಿಳಾ ಪ್ರಯಾಣಿಕರು ಒಟ್ಟಾರೆಯಾಗಿ 400 ಕೋಟಿ ಪ್ರಯಾಣಿಸಿದ್ದಾರೆ.
ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ (ರೂ.ಗಳಲ್ಲಿ): ಕರಾರಸಾ ನಿಗಮದಲ್ಲಿ 3708.51 ಕೋಟಿ, ಬೆಂಮಸಾ ಸಂಸ್ಥೆಯಲ್ಲಿ 1695.84 ಕೋಟಿ, ವಾಕರಸಾ ಸಂಸ್ಥೆಯಲ್ಲಿ 2419.99 ಕೋಟಿ ಮತ್ತು ಕಕರಸಾ ನಿಗಮದಲ್ಲಿ 1979.53 ಕೋಟಿ ರೂಪಾಯಿಗಳ ಟಿಕೆಟ್ ಮೌಲ್ಯ ಒಟ್ಟಾರೆಯಾಗಿ 9803.87 ಕೋಟಿ ರೂಪಾಯಿಗಳಷ್ಟಿದೆ.
ಶಕ್ತಿ ಯೋಜನೆ ಜಾರಿಯಿಂದ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಅತುತ್ತಮ ಸಾಧನೆ ಮಾಡುತ್ತಿದ್ದು ಶಕ್ತಿ ಯೋಜನೆ ಜಾರಿಗೆ ಮುನ್ನ ಪ್ರತಿದಿನ ಕಾರ್ಯಾಚರಣೆಗೊಳಿಸುತ್ತಿದ್ದ 154955 ಟ್ರಿಪ್ ಗಳ ಪ್ರಮಾಣವು 176787 ಹೆಚ್ಚಳವಾಗಿದ್ದು ಪ್ರತಿದಿನ21832 ಹೆಚ್ಚುವರಿ ಟ್ರಿಪ್ ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ ಸರ್ಕಾರ ಹೇಳಿಕೊಂಡಿದೆ.


Click it and Unblock the Notifications