ಸೋಮವಾರ ಷೇರುಪೇಟೆ ಅಕ್ಷರಶಃ ಅಲುಗಾಡಿ ಹೋಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಒಂದು ದಿನದಲ್ಲಿ ಕಂಡಂತಹ ಭಾರೀ ಪ್ರಮಾಣದ ಇಳಿಕೆಯಾಗಿದ್ದು 2300 ಪಾಯಿಂಟ್ಸ್‌ವರೆಗೂ ಇಳಿಕೆ ಕಂಡಿದೆ. ಅನೇಕ ಕಂಪನಿಯ ಷೇರುಗಳು 52 ವಾರಗಳಲ್ಲಿ ಕನಿಷ್ಟ ಮಟ್ಟಕ್ಕೆ ತಲುಪಿವೆ. ನಿಫ್ಟಿ ಕೂಡ ಭಾರೀ ಇಳಿಕೆ ದಾಖಲಿಸಿದೆ.
ದೇಶದಲ್ಲಿ ಕೊರೊನೊವೈರಸ್ ಹರಡುವಿಕೆಯ ಭೀತಿ ಹಾಗೂ ಯೆಸ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ಹೇರಿಕೆ ಹಿನ್ನೆಲೆಯಲ್ಲಿ ಷೇರುಮಾರುಕಟ್ಟೆ ಆರಂಭದಲ್ಲೇ ಸಂಪೂರ್ಣ ಶೇಕ್ ಆಗಿದೆ. ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ಎಸ್‌ಎಸ್ಇ ಸೂಚ್ಯಂಕ ನಿಫ್ಟಿಯಲ್ಲಿ ಹೂಡಿಕೆದಾರರ ಐದು ಲಕ್ಷ ಕೋಟಿಗೂ ಅಧಿಕ ಸಂಪತ್ತು ಕರಗಿ ಹೋಗಿದೆ.
ಸೆನ್ಸೆಕ್ಸ್ 2000 ಪಾಯಿಂಟ್ಸ್ ಇಳಿಕೆ
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಮಾರುಕಟ್ಟೆ ಆರಂಭದಿಂದಲೇ ಇಳಿಮುಖದತ್ತ ಸಾಗಿತ್ತು. ದಿನದ ವಹಿವಾಟು ಮುಕ್ತಾಯದ ವೇಳೆಗೆ 5.17 ಪರ್ಸೆಂಟ್ ಇಳಿಕೆಯಾಗಿ 1941.67 ಪಾಯಿಂಟ್ಸ್‌ಗಳು ಇಳಿಕೆ ಕಂಡವು. ಕೆಲವೇ ಸೆಕೆಂಡ್‌ಗಳಲ್ಲಿ ಹೂಡಿಕೆದಾರರ 5 ಲಕ್ಷ ಕೋಟಿ ರುಪಾಯಿಗೂ ಅಧಿಕ ಸಂಪತ್ತು ನಷ್ಟವಾಯಿತು. ದಿನದ ವಹಿವಾಟು ಕೊನೆಗೆ ಸೆನ್ಸೆಕ್ಸ್ 35,634.95 ಅಂಶಗಳಿಗೆ ತಲುಪಿತು.
ಇನ್ನು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ 4.90 ಪರ್ಸೆಂಟ್‌ನಷ್ಟು ಇಳಿಕೆಗೊಂಡು ಷೇರುಪೇಟೆ ನಲುಗಿಹೋಯಿತು. 538 ಪಾಯಿಂಟ್ಸ್ ನಷ್ಟಗೊಂಡು 10,451.45 ಅಂಶಗಳಿಗೆ ತಲುಪಿದೆ.
ಸೆನ್ಸೆಕ್ಸ್ ಇತಿಹಾಸದಲ್ಲಿ ಕಂಡಂತಹ ಭಾರೀ ಇಳಿಕೆ
ಹೌದು ಷೇರುಪೇಟೆ ಇತಿಹಾಸದಲ್ಲಿ ಬಿಎಸ್ಇ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ , ನಿಫ್ಟಿ ಕಂಡಂತಹ ಭಾರೀ ಇಳಿಕೆ ಇದಾಗಿದೆ. 2,300 ಪಾಯಿಂಟ್ಸ್‌ವರೆಗೂ ಇಳಿಕೆ ಕಂಡ ಸೆನ್ಸೆಕ್ಸ್ ಒಂದು ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಕುಸಿದಿದ್ದು ಇದೇ ಮೊದಲು. (ಪಾಯಿಂಟ್ಸ್‌ಗಳ ಆಧಾರದ ಮೇಲೆ)
52 ವಾರಗಳ ಕನಿಷ್ಟ ಮಟ್ಟಕ್ಕೆ ತಲುಪಿದ 750 ಕಂಪನಿಗಳು
ಷೇರುಪೇಟೆಯಲ್ಲಿ ಆದ ಅಲ್ಲೋಲ ಕಲ್ಲೋಲಕ್ಕೆ ಅನೇಕ ಪ್ರಮುಖ ಕಂಪನಿಯ ಷೇರುಗಳು ಭಾರಿ ನಷ್ಟ ಅನುಭವಿಸಿದವು. 750ಕ್ಕೂ ಹೆಚ್ಚು ಕಂಪನಿ ಷೇರುಗಳು 52 ವಾರಗಳಲ್ಲಿ ಕನಿಷ್ಟ ಬೆಲೆಗೆ ತಲುಪಿದವು.
ಒನ್‌ಜಿಸಿ, ವೇದಾಂತ, ರಿಲಯನ್ಸ್ ಇಂಡಸ್ಟ್ರೀಸ್, ಜೀ ಎಂಟರ್‌ಟೈನ್‌ಮೆಂಟ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಟಾಟಾ ಮೋಟಾರ್ಸ್ ಭಾರೀ ಇಳಿಕೆ ಕಂಡ ಷೇರುಗಳಾಗಿವೆ. ಒಟ್ಟಾರೆ 8 ಪರ್ಸೆಂಟ್‌ಗೂ ಅಧಿಕ ನಷ್ಟ ಅನುಭವಿಸಿವೆ.
ಷೇರುಪೇಟೆಯಲ್ಲಿ ಭಾರೀ ಕುಸಿತದ ನಡುವೆ ಯೆಸ್ ಬ್ಯಾಂಕ್, ಭಾರತ್ ಪೆಟ್ರೋಲಿಯಂ, ಭಾರ್ತಿ ಇನ್ಫ್ರಾಟೆಲ್, ಈಚರ್ ಮೋಟಾರ್ಸ್ ಮೌಲ್ಯ ಏರಿಕೆಗೊಂಡಿದೆ.
ಭಾರೀ ನಷ್ಟ ಅನುಭವಿಸಿದ ರಿಲಯನ್ಸ್ ಮತ್ತು ಟಿಸಿಎಸ್
ಸೋಮವಾರ ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ ಬೃಹತ್ ಕಂಪನಿಗಳಲ್ಲಿ ಪ್ರಮುಖವಾದುದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ಕಂಪನಿಯ ಷೇರುಗಳು. ಕಳೆದ ವರ್ಷ ಡಿಸೆಂಬರ್ 20ರಂದು 1,617.55 ರುಪಾಯಿಗೆ ತಲುಪಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮೂರು ತಿಂಗಳ ಒಳಗೆ 1114.15 ಅಂಶಗಳಿಗೆ ತಲುಪಿದೆ. ಸೋಮವಾರ ಆರ್‌ಐಎಲ್ 156.85 ಪಾಯಿಂಟ್ಸ್ ಇಳಿಕೆಗೊಂಡಿತು.
ಟಿಸಿಎಸ್ ಕಂಪನಿಯ ಷೇರುಗಳು ಕೂಡ ಸೋಮವಾರ ಭಾರೀ ಇಳಿಕೆ ಸಾಧಿಸಿದವು. 2,116.45 ಮೌಲ್ಯವಿದ್ದ ಷೇರುಗಳು 135.45 ಪಾಯಿಂಟ್ಸ್ ಇಳಿಕೆಗೊಂಡು 1,981 ಬೆಲೆಗೆ ತಲುಪಿದೆ. 174 ಪಾಯಿಂಟ್ಸ್‌ಗಳವರೆಗೂ ಇಳಿಕೆ ಸಾಧಿಸಿದ್ದ ಟಿಸಿಎಸ್ ಷೇರು ಭಾರೀ ನಷ್ಟವಾಗಿದ್ದರಿಂದ ಹೂಡಿಕೆದಾರರು ಕಂಗಾಲಾಗಿ ಹೋಗಿದ್ದಾರೆ.
ಚೇತರಿಕೆ ಕಂಡ ಯೆಸ್ ಬ್ಯಾಂಕ್ ಷೇರುಗಳು
ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಆರ್‌ಬಿಐ ನಿರ್ಬಂಧಕ್ಕೆ ಒಳಗಾಗಿರುವ ಯೆಸ್ ಬ್ಯಾಂಕ್ ಷೇರುಗಳು ಶುಕ್ರವಾರ(ಮಾರ್ಚ್ 06) ರಂದು ಭಾರೀ ಇಳಿಕೆ ಸಾಧಿಸಿತ್ತು. 16.20 ರುಪಾಯಿಗೆ ಆರಂಭಗೊಂಡು 31 ಪರ್ಸೆಂಟ್ ಏರಿಕೆಯಾಗಿದೆ. ಮಾರುಕಟ್ಟೆ ವಹಿವಾಟು ಕೊನೆಗೊಂಡಾಗ ಯೆಸ್ ಬ್ಯಾಂಕ್ ಪ್ರತಿ ಷೇರಿನ ಮೌಲ್ಯ 21.25 ರುಪಾಯಿಗೆ ತಲುಪಿದೆ.
ಷೇರುಪೇಟೆ ಕುಸಿಯಲು ಪ್ರಮುಖ ಕಾರಣಗಳು
ಜಾಗತಿಕವಾಗಿ ಕೊರೊನಾವೈರಸ್ ವೇಗವಾಗಿ ಹರಡುತ್ತಿರುವುದು, ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲ ದರವು ಕುಸಿತ ಹಾಗೂ ಯೆಸ್ ಬ್ಯಾಂಕ್ ವಿಚಾರದಲ್ಲಿನ ಬೆಳವಣಿಗೆಯು ಸೋಮವಾರ ಷೇರು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.
ಜಾಗತಿಕ ಕಚ್ಚಾ ತೈಲ ದರ ಶೇಕಡಾ 30ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರಲ್ ಗೆ 32.11 ಡಾಲರ್ ಆಗಿದೆ. ವಿದೇಶಿ ಹಣದ ಹೊರಹರಿವು, ಜಾಗತಿಕ ಕಚ್ಚಾ ತೈಲ ಬೆಲೆ ಕುಸಿತ ಮತ್ತು ಭಾರತದಲ್ಲಿ ಯೆಸ್ ಬ್ಯಾಂಕಿನ ಆರ್ಥಿಕ ಬಿಕ್ಕಟ್ಟು ಹೂಡಿಕೆದಾರರನ್ನು ಹಿಂದೇಟು ಹಾಕುವಂತೆ ಮಾಡಿದೆ.


Click it and Unblock the Notifications