ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ ಕೊರೊನಾ ಬಿಕ್ಕಟ್ಟಿನ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ವಿತರಣೆ ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಸಮಾಧಾನ, ಭರವಸೆ ತಂದಂತೆ ಇಲ್ಲ. ಜತೆಗೆ ಜಾಗತಿಕ ವಿದ್ಯಮಾನಗಳು ಸಹ ಸೇರಿಕೊಂಡು ಗುರುವಾರ ಸೆನ್ಸೆಕ್ಸ್ ಸೂಚ್ಯಂಕ 886 ಪಾಯಿಂಟ್ಸ್ ಕುಸಿತ ಕಂಡಿತು.
ಮೋದಿ ಘೋಷಣೆ ವೇಳೆ ಉತ್ತುಂಗದಲ್ಲಿದ್ದ ನಿರೀಕ್ಷೆಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿ ಸ್ಕೀಮ್ ಗಳಿಂದ ಬಲೂನ್ ಗೆ ಸೂಜಿ ಮೊನೆ ತಾಕಿಸಿದಂತಾಗಿದೆ. ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ ಮೇಲೆ ನೆಲ ಕಚ್ಚಿದ ಬೇಡಿಕೆಯನ್ನು ಹಣಕಾಸು ಸಚಿವೆ ಮಾಡಿದ ಘೋಷಣೆಗಳು ಏನೇನೂ ಉತ್ತೇಜಿಸಲ್ಲ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡಿದಂತೆ ಇದೆ.
ಕೊರೊನಾ ವೈರಸ್ ಎಂದಿಗೂ ನಿವಾರಣೆ ಆಗೋದೇ ಇಲ್ಲ ಎಂಬ ಭಯ
ಸರ್ಕಾರ ಹೆಚ್ಚು ಖರ್ಚು ಮಾಡ್ತಿಲ್ಲ. ಹಾಗಿದ್ದರೆ ಆರ್ಥಿಕ ಬೆಳವಣಿಗೆ ಆಗೋದಾದರೂ ಹೇಗೆ ಎಂಬ ಚಿಂತೆಯಿಂದಲೇ ಷೇರುಗಳ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯು, "ಕೊರೊನಾ ವೈರಸ್ ಎಂದಿಗೂ ನಿವಾರಣೆ ಆಗೋದೇ ಇಲ್ಲ" ಎಂಬ ಹೇಳಿಕೆ ನೀಡಿದ್ದು ಸಹ ಷೇರು ಮಾರ್ಕೆಟ್ ಮೇಲೆ ಪರಿಣಾಮ ಬೀರಿದೆ. ಗುರುವಾರದಂದು ಸೆನ್ಸೆಕ್ಸ್ ಆರಂಭದಲ್ಲಿ 955 ಪಾಯಿಂಟ್ ಗೂ ಹೆಚ್ಚು ಕುಸಿತ ಕಂಡಿತು. ಆ ನಂತರ 885.72 ಪಾಯಿಂಟ್ ಕುಸಿತದೊಂದಿಗೆ ದಿನಾಂತ್ಯ ಕಂಡಿತು. ಇನ್ನು ನಿಫ್ಟಿ ಸೂಚ್ಯಂಕ 240.80 ಪಾಯಿಂಟ್ ಕುಸಿತ ಕಂಡಿತು.
ಪ್ಯಾಕೇಜ್ ನ 75 ಪರ್ಸೆಂಟ್ ಮುಗಿದುಹೋಯಿತು
ಆದರೆ, ಯಾವಾಗ ಮೊದಲ ಕಂತಿನ ಉತ್ತೇಜನ ಘೋಷಣೆಯಲ್ಲೇ 20 ಲಕ್ಷ ಕೋಟಿ ಪ್ಯಾಕೇಜ್ ನ 75 ಪರ್ಸೆಂಟ್ ಮುಗಿದುಹೋಯಿತೋ ಮುಂದಿನ ದಿನಗಳಲ್ಲಿ ದೊಡ್ಡ ಯೋಜನೆ, ಉತ್ತೇಜನ ಘೋಷಣೆ ಆಗುವ ನಂಬಿಕೆಯೇ ಕರಗಿಹೋಯಿತು. ಈ ಕಾರಣಕ್ಕೆ ಷೇರು ಮಾರ್ಕೆಟ್ ನಲ್ಲಿ ತಲ್ಲಣ ಕಾಣಿಸಿಕೊಂಡಿತು. ಇನ್ನು ಗುರುವಾರ ಮಾಡಿದ ಘೋಷಣೆಗಳಿಂದ ಬೇಡಿಕೆಗೆ ದೊಡ್ಡ ಉತ್ತೇಜನ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೂಡಿಕೆದಾರರು ನಿರಾಶೆಗೆ ಒಳಗಾಗಿದ್ದು, ಶುಕ್ರವಾರದ ಷೇರು ಮಾರ್ಕೆಟ್ ವ್ಯವಹಾರದಲ್ಲಿ ಅದು ಸ್ಪಷ್ಟವಾಗಿದೆ.
ಕುಸಿದವು ಷೇರುಗಳು
ಸೆನ್ಸೆಕ್ಸ್ ಸೂಚ್ಯಂಕದಲ್ಲಿ ದೊಡ್ಡ ನಷ್ಟ ಕಂಡಿರುವ ಕಂಪೆನಿ ಟೆಕ್ ಮಹೀಂದ್ರಾ. ಐದು ಪರ್ಸೆಂಟ್ ಗೂ ಹೆಚ್ಚು ಕುಸಿದಿದೆ. ಇನ್ಫೋಸಿಸ್, ಎಚ್ ಡಿಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎನ್ ಟಿಪಿಸಿ ಷೇರುಗಳು ಕುಸಿದಿವೆ. ಇನ್ನು ಹೀರೋ ಮೋಟೋಕಾರ್ಪ್, ಎಲ್ ಅಂಡ್ ಟಿ, ಮಾರುತಿ, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ ಷೇರುಗಳು ಗಳಿಕೆ ಕಂಡಿವೆ.
ಶುಕ್ರವಾರದ ಘೋಷಣೆ ಮೇಲೆ ಕಣ್ಣು
ತಜ್ಞರು ಹೇಳುವ ಪ್ರಕಾರ, ಪ್ಯಾಕೇಜ್ ನ ಮೊದಲ ಕಂತಿನ ಘೋಷಣೆಯು 2020- 21ರಲ್ಲಿ ಕನಿಷ್ಠ ಪ್ರಮಾಣದ ಪ್ರಭಾವ ಬೀರಲಿದೆ. ಬುಧವಾರದಂದು ಘೋಷಣೆ ಮಾಡಿದ ಆರ್ಥಿಕ ಕ್ರಮಗಳಿಂದ 1.6 ಲಕ್ಷ ಕೋಟಿ ರುಪಾಯಿ ಮಾತ್ರ ಸಿಕ್ಕಂತಾಗುತ್ತದೆ. ಈ ಕಾರಣಕ್ಕೆ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಈ ಹಿಂದಿನ ಲಾಭವನ್ನು ಕೂಡ ಕಳೆದುಕೊಂಡಿವೆ. ಇನ್ನು ಶುಕ್ರವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏನು ಘೋಷಣೆ ಮಾಡಲಿದ್ದಾರೆ ಎಂಬುದರ ಮೇಲೆ ಮುಂದಿನ ನಡೆ ನಿರ್ಧಾರ ಆಗಲಿದೆ.


Click it and Unblock the Notifications