ಕೊರೊನಾವೈರಸ್ ಸೋಂಕು ತಡೆಗಟ್ಟಲು ಲಾಕ್‌ಡೌನ್ ಮೇ 17ರವರೆಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಲು ನೀತಿ ಆಯೋಗವು ಸರ್ಕಾರಕ್ಕೆ 6 ಯೋಜನೆಗಳನ್ನು ಪ್ರಸ್ತಾಪಿಸಿದೆ.
ಸರ್ಕಾರದ ಚಿಂತಕರ ಛಾವಣಿಯಾದ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಕೊರೊನಾವೈರಸ್ ಬಿಕ್ಕಟ್ಟಿನಿಂದ ಪಾರಾಗಲು 6 ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿದ್ದರು.

ನೀತಿ ಆಯೋಗದ ಆರು ಅಂಶಗಳು:
1) ಸೋಂಕಿನ ತೀವ್ರತೆ ಹೆಚ್ಚಿರುವ ಪ್ರದೇಶಗಳನ್ನ ಗುರುತಿಸಿ ಸಂಪೂರ್ಣ ಕಟ್ಟುನಿಟ್ಟಾಗಿ ನಿರ್ಬಂಧ ಹೇರಬೇಕು. ರೆಡ್ ಝೋನ್‌ನಲ್ಲಿ ಕಟ್ಟುನಿಟ್ಟಿನ ಕಂಟೈನ್ಮೆಂಟ್ ಮಾಡಬೇಕು.
2) ಜನರು ಮಾಸ್ಕ್ ಧರಿಸುವುದು ಮತ್ತು ಹೊರಗೆ ದೈಹಿಕ ಅಂತರ ಪಾಲಿಸುವುದು ಕಡ್ಡಾಯವಾಗಬೇಕು. ಮತ್ತೆ ಕೆಲಸಕ್ಕೆ ತೆರಳುವುದು ಸಾಧ್ಯವಾದರೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.
3)ಕೊರೊನಾ ಸೋಂಕು ಯಾವಾಗ ಬೇಕಾದರೂ ತಿರುಗಿ ಬರಬಹುದು. ಈ ಕುರಿತು ತಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಮತ್ತೆ ಮತ್ತೆ ಎಚ್ಚರಿಕೆ ನೀಡುತ್ತಿದೆ. ಲಾಕ್‌ಡೌನ್ ನಂತರವೂ ಇದು ಮತ್ತೆ ತಲೆ ಎತ್ತಬಹುದು ಎನ್ನಲಾಗಿದೆ.
4)60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಬಗ್ಗೆ ನಿಗಾ ಇಡುವುದು ಅತಿಮುಖ್ಯ. ಇವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಿರುವ ಕಾರಣ ಕೊರೊನಾ ವೈರಸ್ ಇವರಿಗೆ ಮಾರಣಾಂತಿಕ ಆಗಬಹುದು.
5) ಕೋವಿಡ್-19ಗೆ ಇನ್ನು ಲಸಿಕೆ ಕಂಡು ಹಿಡಿದಿಲ್ಲ. ಹೀಗಾಗಿ ಮದ್ದು ಸಿದ್ದಗೊಳ್ಳುವವರೆಗೆ ಕೊರೊನಾ ವಿರುದ್ಧ ಹೋರಾಡುವುದು ಅನಿವಾರ್ಯ
6) ಲಾಕ್‌ಡೌನ್ ಅನ್ನು ಹೀಗೆಯೇ ಮುಂದೂಡುತ್ತಾ ಹೋದರೆ. ಜಾಗತಿಕವಾಗಿ ನಾವು ಸಾಕಷ್ಟು ಹಿಂದುಳಿದುಬಿಡುತ್ತೇವೆ. ಹೀಗಾಗಿ ಆರ್ಥಿಕತೆಗೆ ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮರುಚಾಲನೆ ನೀಡಬೇಕಿದೆ.
ಈ ಅಂಶಗಳನ್ನು ನೀತಿ ಆಯೋಗ ಕೇಂದ್ರದ ಮುಂದಿಟ್ಟಿದ್ದು, ಇದರ ಆಧಾರದ ಮೇರೆಗೆ ಲಾಕ್ ಡೌನ್ ಕುರಿತಂತೆ ಮುಂದಿನ ಕ್ರಮ ಕೈಗೊಂಡಿದೆ.


Click it and Unblock the Notifications